ಮಂಗಳೂರು: ''ಸಿದ್ದರಾಮಯ್ಯ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ ಎಲ್ಲಾ ಗ್ಯಾರಂಟಿಗಳು ವಿಫಲವಾಗಿದೆ. ಮೋದಿ ಅವರ ಗ್ಯಾರಂಟಿ ಬಗ್ಗೆ ಮಾತ್ರ ಜನರಿಗೆ ವಿಶ್ವಾಸ ಇದೆ'' ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಜಿ.ಫಡ್ನವಿಸ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ''ಮೋದಿ ಅವರ ಗ್ಯಾರಂಟಿಯು ಗ್ಯಾರಂಟಿಗೆ ಗ್ಯಾರಂಟಿ ಎಂಬುದು ಜನರಿಗೆ ಗೊತ್ತಿದೆ. ಈ ಕಾರಣದಿಂದ ಕರ್ನಾಟಕದಿಂದ ಅಭೂತಪೂರ್ವ ವಿಜಯ ಸಿಗಲಿದೆ'' ಎಂದರು.
ಭಾರತಕ್ಕಾಗಿ ಮತ ಹಾಕಿ: ಬಳಿಕ ಮಂಗಳೂರಿನಲ್ಲಿ ಆಯೋಜಿಸಲಾದ ಬಿಜೆಪಿ ಬೂತ್ ಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ''ಈ ಬಾರಿಯ ಚುನಾವಣೆಗೆ ಬಿಜೆಪಿಗಾಗಿ ಮತ ಅಲ್ಲ. ಭಾರತಕ್ಕಾಗಿ ಮತ ಹಾಕಿ. ಬಿಜೆಪಿಗಾಗಿ ಕೆಲಸ ಮಾಡುತ್ತಿಲ್ಲ. ಭಾರತಕ್ಕಾಗಿ ಕೆಲಸ ಮಾಡುತ್ತೇನೆಂದು ಕೆಲಸ ಮಾಡಿ. ಈ ಮೂಲಕ ಪ್ರಗತಿಶೀಲ, ಉತ್ತಮ ಭಾರತ ಹಾಗೂ ಕರ್ನಾಟಕ ಕಟ್ಟಲು ಶ್ರಮವಹಿಸಿ'' ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
''ಚುನಾವಣೆಗೆ ಇನ್ನು ಒಂದೇ ತಿಂಗಳು ಇದೆ. ಆದ್ದರಿಂದ ಎಲ್ಲರೂ ತಮ್ಮ ತಮ್ಮ ಬೂತ್ಗಳಲ್ಲಿ ಸರಿಯಾಗಿ ಕೆಲಸ ಮಾಡಿ. ಮೋದಿಯವರ ಸಂದೇಶವನ್ನು ಎಲ್ಲಾ ಮತದಾರರಿಗೂ ತಲುಪುವಂತೆ ಮಾಡಿ ಬಿಜೆಪಿಯನ್ನು ಗೆಲ್ಲಿಸಿ'' ಎಂದರು.
''2024ರ ಚುನಾವಣೆ ಇತಿಹಾಸ ನಿರ್ಮಿಸಲಿದೆ. ಕಳೆದ 10 ವರ್ಷಗಳಲ್ಲಿ ಮೋದಿ ನೇತೃತ್ವದ ಸರ್ಕಾರದ ಅಭಿವೃದ್ಧಿಯು ಈ ಹಿಂದಿನ ಯಾವುದೇ ಸರ್ಕಾರ ಮಾಡದ ಅಭಿವೃದ್ಧಿಯಾಗಿದೆ. ದೇಶದ ದೃಷ್ಟಿಯಿಂದ 2022-29ರ ಈ ಅವಧಿ ಅತ್ಯಂತ ಮುಖ್ಯ. ಈವರೆಗೆ ದೇಶದ ವ್ಯವಸ್ಥೆ ಸರಿ ಮಾಡಲು ಮೋದಿ ಶ್ರಮಿಸಿದ್ದಾರೆ. ಇಲ್ಲಿಯವರೆಗೆ ನೋಡಿದ್ದು ಕೇವಲ ಟ್ರೈಲರ್, ಇನ್ನೂ ಪಿಚ್ಚರ್ ಬಾಕಿಯಿದೆ'' ಎಂದು ದೇವೇಂದ್ರ ಫಡ್ನವಿಸ್ ಹೇಳಿದರು.
ಇದನ್ನೂ ಓದಿ: 'ಬಿಜೆಪಿ ಅವಧಿಯಲ್ಲೂ ಕೊಲೆಗಳಾಗಿದ್ದವು, ಸಂಸದ ಜಾಧವ್ ಅದನ್ನು ನೆನಪಿಸಿಕೊಳ್ಳಲಿ': ಸಚಿವ ಪ್ರಿಯಾಂಕ್ ಖರ್ಗೆ