ಮೈಸೂರು: ಆದಿವಾಸಿ ಬಾಲಕನ ಮೃತದೇಹದ ಅಂತ್ಯಸಂಸ್ಕಾರ ಮಾಡಲು ಹಾಡಿಯ ಜನರು ಪರದಾಡಿದ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಹಿರೇಹಳ್ಳಿ ಎ.ಕಾಲೋನಿ ಹಾಡಿಯಲ್ಲಿ ನಡೆದಿದೆ.
ತಾರಕ ಜಲಾಶಯದ ಹಿನ್ನೀರಿನ ಹಿರೇಹಳ್ಳಿ ಎ.ಹಾಡಿಯ ನಿವಾಸಿ ಮಣಿಕಂಠ ಎಂಬ ಬಾಲಕ ನಾಲ್ಕು ದಿನಗಳ ಹಿಂದೆ ತಾರಕ ಕಾಲುವೆಯಲ್ಲಿ ನೀರು ಕುಡಿಯಲು ಹೋಗಿ, ಆಕಸ್ಮಿಕವಾಗಿ ಜಾರಿ ನಾಲೆಗೆ ಬಿದ್ದು ಮೃತಪಟ್ಟಿದ್ದ. ಹಾಡಿಯ ಜನರು ಸಂಪ್ರದಾಯದಂತೆ ತಮ್ಮ ಪೂರ್ವಜರ ಕಾಲದಿಂದಲೂ ಅಂತ್ಯಸಂಸ್ಕಾರ ಮಾಡಿಕೊಂಡು ಬಂದಿರುವ ಅರಣ್ಯ ಪ್ರದೇಶದಲ್ಲಿರುವ ಸ್ಮಶಾನಕ್ಕೆ ಮೃತದೇಹವನ್ನು ಕೊಂಡೊಯ್ದಿದ್ದಾರೆ. ಆದರೆ ಅರಣ್ಯ ಇಲಾಖೆಯವರು ಅರಣ್ಯದಂಚಿನಲ್ಲಿ ಸ್ಮಶಾನಕ್ಕೆ ಹೋಗಲು ಯಾವುದೇ ಗೇಟ್ ಅಳವಡಿಸಿಲ್ಲ. ಇಲ್ಲಿ ರೈಲ್ವೆ ಬ್ಯಾರಿಕೇಡ್ ಹಾಕಲಾಗಿದೆ. ಅದಕ್ಕೆ ಸೋಲಾರ್ ಅಳವಡಿಸಿದ್ದರಿಂದ ಹಾಡಿಯ ಜನರು ಮೃತದೇಹವನ್ನು ಅರಣ್ಯದೊಳಗೆ ಕೊಂಡೊಯ್ಯಲು ಸಾಧ್ಯವಾಗದೆ ತೊಂದರೆ ಅನುಭವಿಸಿದರು. ನಂತರ ಮೃತದೇಹವನ್ನು ಕೆಳಗಿಟ್ಟು ಕಂದಕಕ್ಕೆ ಇಳಿದು ರೈಲ್ವೆ ಕಂಬಿ ಕೆಳಗೆ ನುಗ್ಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಮೃತದೇಹವನ್ನು ಸಾಗಿಸಬೇಕಾಯಿತು.
ಅರ್ಜಿ ಸಲ್ಲಿಸಿದರೂ ಯಾವುದೇ ಕ್ರಮವಿಲ್ಲ: ಈ ಕುರಿತು ಮಾತನಾಡಿದ ಹಾಡಿಯ ನಿವಾಸಿ ಚಿಕ್ಕಬಸವ, "ಕಳೆದ 50 ವರ್ಷಗಳಿಂದಲೂ ನಮ್ಮ ಹಾಡಿಯಲ್ಲಿ ಮೃತಪಟ್ಟವರನ್ನು ಅರಣ್ಯ ಪ್ರದೇಶದಲ್ಲಿರುವ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಕಳೆದ ಮೂರು ವರ್ಷಗಳಿಂದ ಅರಣ್ಯ ಇಲಾಖೆಯವರು ನಮ್ಮ ಸ್ಮಶಾನಕ್ಕೆ ಹೋಗುವ ದಾರಿಯಲ್ಲಿ ಬ್ಯಾರಿಕೇಡ್ ಅಳವಡಿಸಿದ್ದು ಅಂತ್ಯಸಂಸ್ಕಾರ ಮಾಡಲು ತೊಂದರೆಯಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿಗಳ ಜನಸ್ಪಂದನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ್ ರೆಡ್ಡಿ ಮತ್ತು ಸ್ಥಳೀಯ ಶಾಸಕರಾದ ಅನಿಲ್ ಚಿಕ್ಕಮಾದು ಅವರಿಗೆ ಅರ್ಜಿ ಸಲ್ಲಿಸಿದ್ದರೂ ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ" ಎಂದರು.
ಮೇಟುಕುಪ್ಪೆ ಅರಣ್ಯಾಧಿಕಾರಿಯ ಪ್ರತಿಕ್ರಿಯೆ: "ಮೃತಪಟ್ಟ ಆದಿವಾಸಿ ಬಾಲಕನ ಶವಸಂಸ್ಕಾರ ಮಾಡಲು ಅರಣ್ಯದೊಳಗೆ ಅವಕಾಶ ಮಾಡಿಕೊಡಲಾಗಿದೆ. ಪ್ರಾಣಿಗಳ ಹಾವಳಿ ತಡೆಯಲು ಈ ಹಿಂದೆ ರೈಲ್ವೆ ಕಂಬಿಗಳನ್ನು ಅಳವಡಿಸಲಾಗಿತ್ತು. ಹಾಗಾಗಿ ಅರಣ್ಯದೊಳಗೆ ಶವ ತೆಗೆದುಕೊಂಡು ಹೋಗಲು ಕಷ್ಟವಾಗಿದೆ. ಶಾಸಕರ ಸೂಚನೆಯಂತೆ ಕಂದಕದಲ್ಲಿ ತಾತ್ಕಾಲಿಕವಾಗಿ ಮರದ ಸೇತುವೆ ನಿರ್ಮಾಣ ಮಾಡಲಾಗುವುದು. ರೈಲ್ವೆ ಕಂಬಿಗಳಲ್ಲಿ ಚಲಾವಣೆ ಗೇಟ್ ತೆರೆಯಲು ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ" ಎಂದು ಮೇಟುಕುಪ್ಪೆ ಅರಣ್ಯ ಅಧಿಕಾರಿ ರಶ್ಮಿ ತಿಳಿಸಿದ್ದಾರೆ.