ಬೆಂಗಳೂರು:ಪೆನ್ ಡ್ರೈವ್ ಪ್ರಕರಣದಿಂದ ದ್ವಿತೀಯ ಹಂತದ ಚುನಾವಣೆಯಲ್ಲಿ ಬಿಜೆಪಿಗೆ ಯಾವುದೇ ಡ್ಯಾಮೇಜ್ ಆಗಿಲ್ಲ ಎಂದು ಪ್ರತಿಪಕ್ಷದ ನಾಯಕ ಆರ್ ಅಶೋಕ್ ತಿಳಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ನಡೆದ ಚುನಾವಣೆ ಅವಲೋಕನ ಸಭೆ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಉತ್ತರ ಕರ್ನಾಟಕ ಭಾಗ ಆಗಿದ್ದರಿಂದ ಯಾವುದೇ ಸಮಸ್ಯೆ ಇಲ್ಲ. ಎಲ್ಲಿಯೂ ಸಹ ಪ್ರಭಾವ ಬೀರಿಲ್ಲ. ವಕೀಲ ದೇವರಾಜೇಗೌಡ ಅವರನ್ನು ಬಂಧಿಸಿದ್ದು ಸರಿಯಲ್ಲ. ಸಾಕ್ಷಿಯನ್ನು ಸಿಬಿಐಗೆ ನೀಡುವುದಾಗಿ ದೇವರಾಜೇಗೌಡ ಹೇಳಿದ್ದರು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಹೆಸರು ಹೇಳದಂತೆ ಧಮ್ಕಿ ಹಾಕಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರ ಎಸ್ಐಟಿಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು.
ಸರ್ಕಾರ ರೈತರ ಕಡೆ ಗಮನ ಹರಿಸಲಿ: ಇಲ್ಲಿ ಪಕ್ಷ ಅನ್ನೋದು ಬರಲ್ಲ. ಕಾಂಗ್ರೆಸ್ ಸರ್ಕಾರ ಹೀಗೆ ಮುಂದುವರಿದರೆ ನಾವು ಸುಮ್ಮನೆ ಇರಲ್ಲ. ಮುಂದಿನ ದಿನದಲ್ಲಿ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ಸರ್ಕಾರಕ್ಕೆ ಪ್ರಜ್ವಲ್ ಪ್ರಕರಣವೇ ಬೇಕಾಗಿದೆ, ಬೇರೆ ಬೇಕಾಗಿಲ್ಲ ಎಂದು ಕಿಡಿಕಾರಿದ ಅಶೋಕ್, ಬರಗಾಲ, ಬಿತ್ತನೆ ಬೀಜದ ಬಗ್ಗೆ ಯೋಚನೆ ಮಾಡಲಿ. ಮಳೆ ಬಂದಿದೆ ರೈತರ ಕಡೆ ಗಮನ ಹರಿಸಲಿ. ರಸಗೊಬ್ಬರ ಸೇರಿದ ಇತರ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು ಎಂದು ಒತ್ತಾಯಿಸಿದರು.
28 ಕ್ಷೇತ್ರ ಗೆಲ್ಲುತ್ತೇವೆ:ಲೋಕಸಭೆ ಚುನಾವಣೆ ಮುಗಿದ ಬಳಿಕ ಅವಲೋಕನ ಮಾಡಲಾಯಿತು. ಸಭೆಯಲ್ಲಿ ಸಾಕಷ್ಟು ವಿಚಾರ ಚರ್ಚೆ ಮಾಡಿದ್ದೇವೆ. ಜಿಲ್ಲಾ ಮಟ್ಟದಲ್ಲಿ ಅವಲೋಕನ ಸಭೆ ಸಹ ಮಾಡುತ್ತೇವೆ. ಕಾಂಗ್ರೆಸ್ ದೌರ್ಜನ್ಯ ಸಹ ಚರ್ಚೆ ಮಾಡಲಾಯಿತು. ಪ್ರಧಾನಿ ಮೋದಿ ಅವರ ಗೆಲುವಿಗಾಗಿ ಎಲ್ಲರೂ ಕೆಲಸ ಮಾಡಿದ್ದಾರೆ. ಈಗಾಗಲೇ ನಮಗೆ 28 ಕ್ಷೇತ್ರ ಗೆಲ್ಲುತ್ತೇವೆ ಎಂಬ ವರದಿ ನೀಡಿದ್ದಾರೆ. ನಮ್ಮ ಅಭ್ಯರ್ಥಿಗಳು ಗೆಲುವಿನ ಅಂತರ ಕಡಿಮೆ ಆಗಬಹುದು, ಆದರೆ ಎಲ್ಲ ಕ್ಷೇತ್ರ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಯತ್ನ:ರಾಜ್ಯದಲ್ಲಿ ನಡೆದಿರುವ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪರ ವಾತಾವರಣ ಇದೆ. ನಾವು ಹೆಚ್ಚು ಸ್ಥಾನ ಪಡೆಯುತ್ತೇವೆ ಎಂದು ಮಾಜಿ ಸಚಿವ ಸಿ ಟಿ ರವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾತನಾಡುವ ಮತದಾರರು ಮೋದಿ ಮೋದಿ ಅಂತಿದ್ರು. ಮೌನವಾಗಿದ್ದ ಮತದಾರರು ಏನು ಮಾಡಿದ್ದಾರೆ, ಯಾರಿಗೆ ಮತ ಹಾಕಿದ್ದಾರೆ ಎಂಬುದು ಫಲಿತಾಂಶ ನಂತರ ಗೊತ್ತಾಗುತ್ತದೆ ಎಂದರು.
ಪ್ರಜ್ವಲ್ ಪ್ರಕರಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಜ್ವಲ್ ಪ್ರಕರಣದಲ್ಲಿ ಎಸ್ಐಟಿ ತನಿಖೆ ನಡೀತಿದೆ. ಈಗಾಗಲೇ ರಾಜಕೀಯದಲ್ಲಿ ಅದರ ಪರಿಣಾಮ ಏನು ಅಂತ ಗೊತ್ತಾಗಲ್ಲ. ಪ್ರಕರಣದಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು. ಪ್ರಕರಣದಲ್ಲಿ ಎರಡು ಮಗ್ಗುಲು ಇದೆ. ಒಂದು ಅಶ್ಲೀಲ ವಿಡಿಯೋಗಳದ್ದು, ಇನ್ನೊಂದು ಸಂವೇದನೆ ಇಲ್ಲದೇ, ಮಹಿಳೆಯರ ಕನಿಷ್ಠ ಗೌರವ ಕಾಪಾಡದ ವಿಚಾರ. ಪ್ರಕರಣದ ದುರ್ಲಾಭ ಪಡೆಯಲು ಮುಂದಾಗಿದ್ದಾರೆ. ರಾಜಕೀಯ ಲಾಭ ಕಾಂಗ್ರೆಸ್ ಪಡೆಯಲು ಮುಂದಾಗಿದೆ ಅನ್ನೋದರಲ್ಲಿ ಅನುಮಾನವೇ ಇಲ್ಲ ಎಂದು ದೂರಿದರು.
ದೇವರಾಜೇಗೌಡ ಆಡಿಯೋ ಬಂದ ನಂತರ ಅವರ ಬಂಧನ ಆಗಿದೆ. ಇನ್ನಷ್ಟು ಆಡಿಯೋ ಅವರಿಂದ ಬಹಿರಂಗ ಆಗಬಾರದು ಅಂತ ಅವರ ಬಂಧನ ಆಗಿರಬಹುದು. ಎರಡನೇ ಆಡಿಯೋ ಬಾಂಬ್ ನಂತರ ದೇವರಾಜೇಗೌಡ ಬಂಧನ ಆಗಿದೆ. ಅವರೇ ಹೇಳಿದ್ರು ಅವರ ಬಳಿ ಇರುವ ಪೂರ್ಣ ಆಡಿಯೋ ಬಿಟ್ಟರೆ ಸರ್ಕಾರಕ್ಕೆ ಸಂಕಷ್ಟ ಬರುತ್ತದೆ ಎಂದು ತಿಳಿಸಿದ್ದಾರೆ.
ಸರ್ಕಾರದ ನಡೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಯಾರು ವಿಡಿಯೋ ಬಿಟ್ಟಿದ್ದಾರೆಂಬ ಅನುಮಾನ ಇದೆಯೋ ಅವರಿಗೇ ತನಿಖೆ ಹೋದರೆ ಸತ್ಯ ಹೊರಗೆ ಬರಲ್ಲ. ಪ್ರಕರಣದ ತನಿಖೆಯನ್ನು ಹಾಲಿ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ಮಾಡಿಸಲಿ, ಸಿಎಂ ಸಿದ್ದರಾಮಯ್ಯ ಅವರು ಪ್ರಾಮಾಣಿಕ ಆಗಿದ್ರೆ, ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸಲಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ:ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮುಂದುವರೆಯುತ್ತೆ: ಬಿ ಎಸ್ ಯಡಿಯೂರಪ್ಪ - JDS BJP Alliance Continue