ಬೆಂಗಳೂರು: ಪಾಸ್ ವಿಚಾರವಾಗಿ ಕರ್ತವ್ಯನಿರತ ಬಿಎಂಟಿಸಿ ಬಸ್ ನಿರ್ವಾಹಕನ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದ ಆರೋಪಿಯನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಬಸ್ ನಿರ್ವಾಹಕ ಸಂಗಪ್ಪ ಚಿತ್ತಲಗಿ ಎಂಬವರು ಹಲ್ಲೆಗೊಳಗಾಗಿದ್ದು, ಚಾಲಕ ಬಸವರಾಜ್ ನೀಡಿದ ದೂರಿನ ಮೇರೆಗೆ ಪ್ರಯಾಣಿಕ ಹೇಮಂತ್ ಎಂಬವರನ್ನು ಬಂಧಿಸಲಾಗಿದೆ.
ನಾಗರಭಾವಿಯಲ್ಲಿ ವಾಸವಾಗಿರುವ ಹೇಮಂತ್ ಬಿ.ಕಾಂ ಪದವೀಧರ. ಮಾರತ್ ಹಳ್ಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಬಸ್ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಗಪ್ಪ ಅ.18ರ ಮಧ್ಯಾಹ್ನ ಊಟಕ್ಕೆ ವಿರಾಮ ಪಡೆದು ಟಿನ್ ಫ್ಯಾಕ್ಟರಿ ಬಳಿ ಬಸ್ ನಿಲ್ಲಿಸಿದ್ದರು. ಚಾಲಕರೊಂದಿಗೆ ಬಸ್ನಲ್ಲಿ ಊಟ ಮಾಡುವಾಗ ಏಕಾಏಕಿ ಆರೋಪಿ ಬಸ್ ಹತ್ತಿ ಕಲ್ಲಿನಿಂದ ಕಂಡಕ್ಟರ್ ತಲೆಗೆ ಹೊಡೆದು ಪರಾರಿಯಾಗಿದ್ದ. ಕೂಡಲೇ ಆತನನ್ನು ಹಿಂಬಾಲಿಸಿ ಹಿಡಿದ ಕಂಡಕ್ಟರ್ ಪೊಲೀಸರಿಗೆ ಒಪ್ಪಿಸಿದ್ದರು.
ಆರೋಪಿಯ ತಂದೆ ನಿವೃತ್ತ ಬಸ್ ಕಂಡಕ್ಟರ್: ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ ಕೆಲ ದಿನಗಳ ಹಿಂದೆ ಪಾಸ್ ತೋರಿಸುವ ವಿಚಾರಕ್ಕಾಗಿ ಕಂಡಕ್ಟರ್ ಜೊತೆ ಮಾತಿನ ಚಕಮಕಿ ನಡೆದಿದ್ದರಿಂದ ಹಲ್ಲೆ ಮಾಡಿರುವುದಾಗಿ ಆರೋಪಿ ಹೇಳಿದ್ದಾನೆ. ಈತನ ತಂದೆ ಬಿಎಂಟಿಸಿ ಬಸ್ ಕಂಡಕ್ಟರ್ ಆಗಿ ನಿವೃತ್ತರಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ದಾರಿ ಬಿಡುವ ವಿಚಾರಕ್ಕೆ ಕಿತ್ತಾಟ: ಕೆಎಸ್ಆರ್ಟಿಸಿ ಡ್ರೈವರ್, ಕಂಡಕ್ಟರ್ ಮೇಲೆ ಹಲ್ಲೆ