ಕಾರವಾರ: ''ವಚನ ಸಾಹಿತ್ಯ ಸಂರಕ್ಷಿಸಿದ ಶ್ರೀ ಚನ್ನಬಸವೇಶ್ವರರ ನೆಲದಲ್ಲಿ ನಮ್ಮ ಪಂಚಮಸಾಲಿ ಸಮಾಜದ 2ಎ ಮೀಸಾಲಾತಿಗೆ ಸಂಕಲ್ಪ ತೋಡುತ್ತಿದ್ದೇವೆ. ನಮ್ಮ ಧ್ವನಿ ರಾಜ್ಯ ಸರ್ಕಾರಕ್ಕೆ ಮುಟ್ಟುವವರೆಗೂ ಇಟ್ಟ ಹೆಜ್ಜೆ ಹಿಂದಿಡುವ ಮಾತಿಲ್ಲ. ಸಮಾಜಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ನಿರಂತರವಾಗಿ ಮುಂದುವರೆಸುವುದು'' ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಹೇಳಿದರು.
ಜೋಯಿಡಾದ ಉಳವಿಯಲ್ಲಿ ಶುಕ್ರವಾರ ಈ ಬಗ್ಗೆ ಹೇಳಿಕೆ ನೀಡಿರುವ ಸ್ವಾಮೀಜಿ, ''ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಈಗಾಗಲೇ 6ನೇ ಹಂತದ ಹೋರಾಟ ಮುಗಿಸಿದ್ದೇವೆ. ಹೋರಾಟಗಾರರು, ಪದಾಧಿಕಾರಿಗಳ ಸಂಕಲ್ಪ ಸಭೆ ಕರೆಯಲಾಗಿದ್ದು ಮಳೆಗಾಲದ ಅಧಿವೇಶನದಲ್ಲಿ ಸಮುದಾಯದ ಶಾಸಕರು ಧ್ವನಿ ಎತ್ತಬೇಕಿದೆ. ಆಯಾ ಕ್ಷೇತ್ರಗಳಲ್ಲಿ ತಾಲೂಕುವಾರು ಶಾಸಕರಿಗೆ ಹಕ್ಕೊತ್ತಾಯ ಮಾಡಲು ಅಭಿಯಾನ ನಡೆಸಲಾಗುವುದು. ಆಯಾ ಶಾಸಕರ ಮನೆಗಳಿಗೆ ತಾಲೂಕು ಪದಾಧಿಕಾರಿಗಳು ಭೇಟಿ ನೀಡಿ ಹಕ್ಕೊತ್ತಾಯ ಮಾಡುವ ಬಗ್ಗೆ, ಮಳೆಗಾಲ ಅಧಿವೇಶನಕ್ಕೂ ಮುನ್ನ ಶಾಸಕರ ಸಭೆ ಕರೆಯಲು ನಿರ್ಧರಿಸಿದ್ದೇವೆ'' ಎಂದರು.
''ಇನ್ನು ಲಿಂಗಾಯತರ ಅಸಮಾಧಾನಕ್ಕೆ ಕಾರಣವಾಗಿರುವ ಜಾತಿ ಗಣತಿ ಪುನರ್ ಪರಿಶೀಲಿಸಬೇಕು. ರಾಜ್ಯ ಸರ್ಕಾರ ಮತ್ತೊಮ್ಮೆ ಜಾತಿಗಣತಿ ಮಾಡಬೇಕು. ಈಗಿರುವ ಜಾತಿ ಗಣತಿಯಲ್ಲಿ ಅಸ್ಪಷ್ಟತೆ ಇದ್ದು, ಮತ್ತೊಮ್ಮೆ ಜಾತಿ ಜನಗಣತಿ ಮಾಡಬೇಕು. ಶಾಲಾ ಕಾಲೇಜುಗಳಲ್ಲಿ ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಬಳಸಬೇಕು. ಮೀಸಲಾತಿ ಬಗ್ಗೆ ನಿರ್ಧಾರ ಕೈಗೊಳ್ಳದಿದ್ದರೆ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ವಿರಾಟ ಶಕ್ತಿ ಪ್ರದರ್ಶನ ಮೂಲಕ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲಾಗುವುದು'' ಎಂದು ಉಳವಿಯಲ್ಲಿ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ರವಾನಿಸಿದರು.