ಬೆಳಗಾವಿ: ಪಂಚಮಸಾಲಿ ಸಮುದಾಯದ ಪ್ರತಿಭಟನೆ ವಿರೋಧ ಪಕ್ಷದ ಪ್ರಾಯೋಜಿತ ಎಂದು ಶಾಸಕ ವಿಜಯಾನಂದ ಕಾಶಪ್ಪನವರ್ ಆರೋಪಿಸಿದ್ದಾರೆ.
ಸುವರ್ಣಸೌಧದಲ್ಲಿಂದು ಮಾತನಾಡಿದ ಅವರು, ಯತ್ನಾಳ್ ಅವರನ್ನು ಬೆಂಬಲಿಸುವುದಕ್ಕೆ ಇದನ್ನು ಮಾಡುತ್ತಿದ್ದಾರೆ. ಯತ್ನಾಳ್ ರಾಜಕೀಯ ಅಸ್ತಿತ್ವ ಉಳಿಸುವ ಹೋರಾಟವಿದು. ಸ್ವಾಮೀಜಿ ಮಾತುಕತೆಗೆ ಬಾರದೇ ಇರೋದು ಸರಿಯಲ್ಲ. ಮಾತುಕತೆಗೆ ಬರಬೇಕು. ಮುತ್ತಿಗೆ ಹಾಕೋದು ಸರಿಯಲ್ಲ. ವಿಕೋಪಕ್ಕೆ ಹೋದ್ರೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದರು.
ಸಿಎಂ ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇಬ್ಬರು ಸಚಿವರು ಮಾತುಕತೆಗೆ ಹೋಗಿದ್ರೂ ಸ್ವಾಮೀಜಿ ಅವರ ಮಾತಿಗೆ ಒಪ್ಪಿಲ್ಲ. ಸಿಎಂ ಮನವಿಯನ್ನು ತಿರಸ್ಕರಿಸಿದ್ದಾರೆ. ಹೀಗೆ ತಿರಸ್ಕಾರ ಮಾಡೋದು ಸರಿಯಲ್ಲ. ಇದು ಉದ್ದೇಶಪೂರ್ವಕವಾಗಿ ಮಾಡ್ತಿರೋದು. ಈ ಹೋರಾಟ ಬಿಜೆಪಿ ಸೀಮಿತ ಹೋರಾಟವಾಗಿದೆ. ಸ್ವಾಮೀಜಿಗಳು ಇಂತಹ ನಿರ್ಣಯ ತೆಗೆದುಕೊಳ್ಳಬಾರದು. ಹೀಗೆ ಆದ್ರೆ ಸರ್ಕಾರ ತನ್ನ ನಿರ್ಣಯ ಮಾಡಬೇಕಾಗುತ್ತದೆ. ಇದು ಒಂದು ಪಕ್ಷಕ್ಕೆ ಸೀಮಿತವಾಗಿ ಹೋರಾಟ ಆಗ್ತಿದೆ ಎಂದು ದೂರಿದರು.
ಆರ್.ಅಶೋಕ್ ಸೇರಿ ವಿಪಕ್ಷಗಳ ನಾಯಕರು ಅಲ್ಲಿ ಇದ್ದಾರೆ. ಇವರು ಪ್ರಚೋದನೆ ಮಾಡುವ ಕೆಲಸ ಮಾಡ್ತಿದ್ದಾರೆ. ಸಿಎಂ ಮಾತುಕತೆಗೆ ಕರೆದರೂ ಬಂದಿಲ್ಲ. ಸಿಎಂ ಸಮಯ ಕೊಟ್ಟಿದ್ದು, ಅವರ ಜೊತೆ ಮಾತಾಡಬೇಕು. ನಾವು ಹೋರಾಟ ಮಾಡುವಾಗ ಪಕ್ಷಾತೀತವಾಗಿತ್ತು. ಈಗ ಬಿಜೆಪಿ ಪ್ರಾಯೋಜಿತ ಹೋರಾಟದ ರೀತಿ ಆಗ್ತಿದೆ. ಬೊಮ್ಮಾಯಿ ಅವರು ತಾಯಿ ಆಣೆ ಮಾಡಿ ನಮ್ಮನ್ನು ಒಪ್ಪಿಸಿದ್ರು. ಈಗ ಸಿಎಂ ಕರೆದರೂ ಮಾತುಕತೆಗೆ ಬಂದಿಲ್ಲ ಎಂದು ಆಕ್ಷೇಪಿಸಿದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಪಂಚಮಸಾಲಿ ಪ್ರತಿಭಟನಾ ಸಮಾವೇಶಕ್ಕೆ ಸಾಕ್ಷಿಯಾದ ಸಹಸ್ರಾರು ಜನ: ಯತ್ನಾಳ್ಗೂ ಮೊದಲೇ ವಿಜಯೇಂದ್ರ ಹಾಜರ್