ಬೆಂಗಳೂರು/ಬೆಳಗಾವಿ ಸುವರ್ಣವಿಧಾನಸೌಧ: ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎ ಮೀಸಲಾತಿಯಡಿ ಸೇರಿಸಬೇಕೆಂಬ ಒತ್ತಾಯ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಲಿಂಗಾಯತ ಸಮುದಾಯವು ಪ್ರವರ್ಗ 3 ಬಿನಲ್ಲಿ ಬರುತ್ತದೆ. ಪಂಚಮಸಾಲಿ ಸಮುದಾಯವನ್ನು 2ಎ ಅಡಿಗೆ ಸೇರಿಸಬೇಕೆಂದು ಕಳೆದ ಕೆಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಈ ಹಿಂದೆ ಪ್ರತಿಭಟನೆಯ ನೇತೃತ್ವವಹಿಸಿದ್ದ ಜಯಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಇನ್ನಿತರರನ್ನು ಸಭೆಗೆ ಕರೆದು ಚರ್ಚಿಸಿದ್ದೆ. ನೀವು ಮಂಡಿಸಿರುವ ಒತ್ತಾಯ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ತಿಳಿಸಿದ್ದೆ ಎಂದು ವಿಧಾನ ಪರಿಷತ್ ಶೂನ್ಯವೇಳೆಯಲ್ಲಿ ಹನುಮಂತಪ್ಪ ರುದ್ರಪ್ಪ ನಿರಾಣಿ ಮಂಡಿಸಿದ ಪ್ರಸ್ತಾಪಕ್ಕೆ ಸಿಎಂ ಪ್ರತಿಕ್ರಿಯಿಸಿದರು.
ಹಿಂದುಳಿದ ವರ್ಗ ಪಟ್ಟಿಗೆ ಸೇರ್ಪಡೆ ಅಥವಾ ರದ್ದು ಮಾಡಬೇಕಾದರೆ ಶಾಶ್ವತ ಹಿಂದುಳಿದ ವರ್ಗದ ಆಯೋಗ ಶಿಫಾರಸು ಮಾಡಬೇಕು. 2002ರಲ್ಲಿ ಪ್ರವರ್ಗ-1ರಲ್ಲಿ ಸುಮಾರು 95 ಅತ್ಯಂತ ಹಿಂದುಳಿದ ಜಾತಿಗಳು, ಪ್ರವರ್ಗ 2ಎ ಹಾಗೂ 2ಬಿ ಅತಿ ಹಿಂದುಳಿದ ಹಾಗೂ 3ಎ ಹಾಗೂ 3ಬಿನಡಿ ಹಿಂದುಳಿದ ಜಾತಿಗಳು ಬರುತ್ತವೆ. ಪ್ರವರ್ಗ-1ಕ್ಕೆ ಶೇ.4, ಪ್ರವರ್ಗ 2ಎಗೆ ಶೇ.15, 2ಬಿನಲ್ಲಿ ಬರುವ ಮುಸಲ್ಮಾನರಿಗೆ ಶೇ. 4 ಹಾಗೂ 3ಎ ಒಕ್ಕಲಿಗರು ಹಾಗೂ 3ಬಿ ಲಿಂಗಾಯತ ಸಮುದಾಯ ಬರುತ್ತದೆ. ಏಕಾಏಕಿ 2ಎಗೆ ಸೇರಿಸಬೇಕೆಂಬ ಕೂಗು ಹೇಗೆ ಬಂದಿತು ಎಂದು ಅವರು ಪ್ರಶ್ನಿಸಿದರು. ಹಿಂದಿನ ಸರ್ಕಾರದಲ್ಲಿ ಮುರುಗೇಶ್ ನಿರಾಣಿ ಅವರಿಗೆ ಸಚಿವ ಸ್ಥಾನ ನೀಡದ್ದಕ್ಕೆ ಈ ಹೋರಾಟ ಶುರುವಾಯಿತು ಎಂದರು. ಇದಕ್ಕೆ ಪ್ರತಿಪಕ್ಷದ ಸದ್ಯಸರು ಆಕ್ಷೇಪ ವ್ಯಕ್ತಪಡಿಸಿದರು.
ಮಾತು ಮುಂದುವರೆಸಿದ ಸಿದ್ದರಾಮಯ್ಯ, ಹೋರಾಟ ಶುರುವಾಗಿದ್ದು 2022ರಲ್ಲಿ. ಹಿಂದುಳಿದ ಆಯೋಗ ರಚಿಸಿದ್ದು 2002ರಲ್ಲಿ. ಆಗಲೇ ಇದನ್ನು ವಿರೋಧಿಸಿ ಹೋರಾಟ ಮಾಡಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು. ಪಂಚಮಸಾಲಿ ಸಮುದಾಯದ ಹೋರಾಟಗಾರರನ್ನು ಕರೆದು ಹಿಂದಿನ ಸರ್ಕಾರ ಮಾಡಿದ್ದ ನಿರ್ಣಯ ಸಂವಿಧಾನ ಬದ್ಧವಲ್ಲ ಎಂದು ಹೇಳಿದ್ದೆ. ಕಳೆದ ವರ್ಷದ ಮಾರ್ಚ್ 27ರಲ್ಲಿ ಬಿಜೆಪಿ ಸರ್ಕಾರದ ಪರವಾಗಿ ಹಿಂದುಳಿದ ವರ್ಗಗಳ ಕಾರ್ಯದರ್ಶಿಯವರು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ 2ಎಗೆ ಯಾವ ಸಮುದಾಯ ಸೇರಿಸುವುದಿಲ್ಲ ಎಂದು ಉಲ್ಲೇಖಿಸಿದ್ದರು ಎಂದು ತಿಳಿಸಿದರು.
ಹಿಂದಿನ ಸರ್ಕಾರದಲ್ಲಿ ಮುಸಲ್ಮಾನರಿಗೆ ನೀಡಿದ್ದ ಶೇ.4ರಷ್ಟು ಮೀಸಲಾತಿ ರದ್ದು ಮಾಡಲಾಯಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ರವಿಕುಮಾರ್, ಧಾರ್ಮಿಕ ಆಧಾರದ ಮೇರೆಗೆ ಮೀಸಲಾತಿ ಕಲ್ಪಿಸುವುದು ಸಂವಿಧಾನ ಬಾಹಿರ ಎಂದು ಕ್ರಿಯಾಲೋಪ ಎತ್ತಿದರು. ಮಧ್ಯಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಎದ್ದುನಿಂತು ಮುಖ್ಯಮಂತ್ರಿ ಮಾತನಾಡುವಾಗ ಮತ್ತೊಬ್ಬರು ಮಾತನಾಡುವುದು ತಪ್ಪು. ಇದೇನು ಧರ್ಮಛತ್ರನಾ? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ : 'ಪಂಚಮಸಾಲಿಗರಿಗೆ 2ಎ ಮೀಸಲಾತಿ ನೀಡಬಾರದು': ಸಿಎಂಗೆ ಹಿಂದುಳಿದ ಜಾತಿಗಳ ಒಕ್ಕೂಟದ ಮನವಿ