ಮಂಗಳೂರು (ದಕ್ಷಿಣ ಕನ್ನಡ) : ವಿಕ್ರಂಗೌಡ ಸತ್ತ ನಂತರ ಅವರ ಜೊತೆಯಲ್ಲಿರುವ ನಕ್ಸಲರಿಗೆ ಶರಣಾಗುವಂತೆ ಹೇಳಿದ್ದೇವೆ. ಇದು ಕಠಿಣವಾದ ಹಾದಿ, ಇದರಲ್ಲಿ ನೀವು ಹೋಗುವುದು ಬೇಡ, ನಾವು ನಿಮಗೆ ಪ್ಯಾಕೇಜ್ ಕೊಡುತ್ತೇವೆ ಎಂದು ಹೇಳಿದ್ದೇವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿಮ್ಮ ಸಾಮಾನ್ಯ ಜೀವನಕ್ಕೆ ಸಹಕಾರ ಮಾಡುತ್ತೇವೆ ಎಂದು ಕರೆಯನ್ನು ಕೊಟ್ಟಿದ್ದೇವೆ. ಕೂಂಬಿಂಗ್ ಮಾಡುತ್ತಿರುವ ಅಧಿಕಾರಿಗಳು ಕೂಡಾ ಹೇಳಿಕೆಗಳನ್ನ ಕೊಡುತ್ತಿದ್ದಾರೆ. ಶರಣಾದರೆ ಒಳ್ಳೆಯದು ಎಂದು ಹೇಳಿದ್ದಾರೆ.
ಚಂದ್ರಶೇಖರ್ ಸ್ವಾಮೀಜಿ ವಿರುದ್ಧ ಎಫ್ಐಆರ್ ದಾಖಲಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕಾನೂನಿನ ಮುಂದೆ ಚಂದ್ರಶೇಖರ ಸ್ವಾಮೀಜಿ ದೊಡ್ಡವರಲ್ಲ. ದೇಶದಲ್ಲಿ ಎಲ್ಲರಿಗೂ ಕಾನೂನು ಒಂದೇ. ಕಾನೂನಿನ ಮುಂದೆ ನಾನೂ ಸೇರಿದಂತೆ ಎಲ್ಲರೂ ಒಂದೇ. ಕಾನೂನು ಚೌಕಟ್ಟಿನಲ್ಲಿ ಪೊಲೀಸರು ಏನು ಕೆಲಸ ಮಾಡಬೇಕೋ ಅದನ್ನು ಮಾಡುತ್ತಾರೆ ಎಂದು ಅವರು ಹೇಳಿದರು.
ಹಾಸನ ಸ್ವಾಭಿಮಾನ ಸಮಾವೇಶಕ್ಕೆ ಅಸಮಾಧಾನ ಅನಾಮಧೇಯ ಪತ್ರ ವಿಚಾರವಾಗಿ ಮಾತನಾಡಿ, ಅನಾಮಧೇಯ ಪತ್ರವನ್ನು ಬಿಜೆಪಿಯವರೇ ಯಾಕೆ ಬರೆದಿರಬಾರದು. ನಮ್ಮಲ್ಲಿ ಯಾವುದೇ ಅಪಸ್ವರವಿಲ್ಲ. ನಾನು ತುಮಕೂರಿನಲ್ಲಿ ಸ್ವಾಭಿಮಾನ ಸಮಾವೇಶ ಮಾಡಲು ಹೊರಟಿದ್ದೆ. ಆದರೆ ನಮಗೆ ಬೇರೆ ಕಾರ್ಯಕ್ರಮ ಕೊಟ್ಟಿದ್ದಾರೆ. ಪಕ್ಷದಿಂದಲೇ ಸಮಾವೇಶ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಸ್ವಾಮೀಜಿ ಮುಟ್ಟಲು ಬಂದರೆ ಒಕ್ಕಲಿಗ ಸಮುದಾಯ ತಿರುಗಿ ಬೀಳಲಿದೆ: ಆರ್.ಅಶೋಕ್