ಬೆಳಗಾವಿ: ರಾಜ್ಯದಲ್ಲಿನ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರದ ಜೊತೆಗೆ ದಾನಿಗಳು ಕೈಜೋಡಿಸಿದರೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವುದು "ನಮ್ಮ ಶಾಲೆ ನಮ್ಮ ಜವಾಬ್ದಾರಿ" ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಇಂದು "ನಮ್ಮ ಶಾಲೆ ನಮ್ಮ ಜವಾಬ್ದಾರಿ" ಕಾರ್ಯಕ್ರಮದ ಲೋಗೋ ವಿದ್ಯಾರ್ಥಿಗಳಿಂದ ಅನಾವರಣಗೊಳಿಸಿ, ದಾನಿಗಳಿಗೆ ಗೌರವ ಸಲ್ಲಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬೆಳಗ್ಗೆ ನೀವು ದೇವರ ಬಳಿ ಹೋದರೆ ನಿಮಗೆ ಪ್ರಸಾದ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಮಕ್ಕಳಿಗೆ ನೀವು ಶಿಕ್ಷಣ ಕೊಟ್ಟರೆ ಗ್ಯಾರಂಟಿ ನಿಮಗೆ ಪ್ರಸಾದ ಸಿಕ್ಕೆ ಸಿಗುತ್ತದೆ. ನನ್ನ ಇಲಾಖೆಯಲ್ಲಿ ಸರ್ಕಾರಿ ಮತ್ತು ಅನುದಾನಿತ 76 ಸಾವಿರ ಶಾಲೆ, ಕಾಲೇಜುಗಳಿವೆ. 1 ಕೋಟಿ 6 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಅವರ ಪಾಲಕರು 2 ಕೋಟಿಗೂ ಅಧಿಕವಿದ್ದು, ಇವರಿಗೆ ಒಳ್ಳೆಯ ಸೇವೆ ಸಲ್ಲಿಸಿದರೆ ಮುಂದೆ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವೇದಿಕೆಯಲ್ಲೇ ಹಾಸ್ಯಚಟಾಕಿ ಹಾರಿಸಿದರು.
ವಾರದ ಆರು ದಿನವೂ ಮೊಟ್ಟೆ: ಈಗಾಗಲೇ 12,500 ಶಿಕ್ಷಕರನ್ನು ನೇಮಕಾತಿ ಮಾಡಿದ್ದೇವೆ. ಇನ್ನು ಅಜೀಂ ಪ್ರೇಮ್ಜಿ ಅವರ ನೆರವಿನಿಂದ ಇದೇ 25ರಿಂದ ಆರು ದಿನ ಮೊಟ್ಟೆ ನೀಡುವ ಕಾರ್ಯಕ್ರಮ ಆರಂಭಿಸುತ್ತಿದ್ದೇವೆ. 45 ಸಾವಿರ ಅತಿಥಿ ಶಿಕ್ಷಕರನ್ನು ಶಾಲೆ ಆರಂಭವಾಗುವ ಮುನ್ನ ನೇಮಕ ಮಾಡಿಕೊಂಡಿದ್ದೇವೆ. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದಲ್ಲಿ 1008 ಎಲ್ಕೆಜಿ, ಯುಕೆಜಿ ತರಗತಿಗಳನ್ನು ಪ್ರಾರಂಭಿಸಲಾಗಿದ್ದು, ಕ್ರಮೇಣ ಇದನ್ನು ರಾಜ್ಯಾದ್ಯಂತ ವಿಸ್ತರಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳು ಉನ್ನತ ಹುದ್ದೆ ಸ್ಥಾನ ಮಾನವನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ ಸರ್ಕಾರದಿಂದಲೇ ನೀಟ್, ಸಿಇಟಿ ಕೋಚಿಂಗ್ ನೀಡುವ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಓದಿದ್ದು ಸರ್ಕಾರಿ ಶಾಲೆಯಲ್ಲಿ. ಸರ್ಕಾರಿ ಶಾಲೆಯಲ್ಲಿ ಓದದಿದ್ದರೆ ಸಿದ್ದರಾಮಯ್ಯ ಅವರು ಇಂದು ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದರು.
ತಾವು ಕಲಿತ ಶಾಲೆಗೆ 10 ಲಕ್ಷ ದೇಣಿಗೆ ನೀಡಿದ ಸಿಎಂ: ಹಾಗಾಗಿ, ಸಿದ್ದರಾಮಯ್ಯನ ಹುಂಡಿಯಲ್ಲಿ ತಾವು ಕಲಿತ ಶಾಲೆಗೆ ತಮ್ಮ ವೇತನದಲ್ಲಿ 10 ಲಕ್ಷ ನೀಡಿದ್ದಾರೆ. ಇನ್ನು ನಮ್ಮ ತಂದೆ ಬಂಗಾರಪ್ಪನವರು ಓದಿರುವ ಕುಪಟೂರ ಸರ್ಕಾರಿ ಶಾಲೆಗೆ ನನ್ನ ವೇತನದಲ್ಲಿ 10 ಲಕ್ಷ ನೀಡಿ ಅಭಿವೃದ್ಧಿ ಪಡಿಸಲಾಗಿದೆ. ದಾನಿಗಳು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಸಹಾಯ ಮಾಡಿದಲ್ಲಿ ನಮ್ಮ ರಾಜ್ಯದ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸಬಹುದಾಗಿದೆ. ಅದೇ ರೀತಿ ಶಿಕ್ಷಕರು ತಮ್ಮ ಶಾಲೆಗೆ ಒಂದು ತಿಂಗಳ ಸಂಬಳವನ್ನು ದಾನವಾಗಿ ನೀಡಿದಲ್ಲಿ ಇತರರು ಪ್ರೇರಪಣೆಗೊಂಡು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಬಹುದು. ಪಾಲಕರು ವಾರದಲ್ಲಿ ಆರು ದಿನ ನೀವು ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸಿದರೆ ಅವರು ನಿಮ್ಮನ್ನು ಮತ್ತು ನಮ್ಮ ರಾಜ್ಯವನ್ನು ಕಾಪಾಡುತ್ತಾರೆ ಎಂದು ಹೇಳಿದರು.
ಶಿಕ್ಷಣಕ್ಕೆ ಅತೀ ಹೆಚ್ಚು ಅನುದಾನ ಬಳಕೆ ಮಾಡಿದವರಲ್ಲಿ ನಾನೇ ನಂ.1: ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಸರ್ಕಾರಿ ಶಾಲೆಗೆ ಹೊಸ ಸ್ವರೂಪ ಕೊಡಬೇಕು, ಗುಣಮಟ್ಟದ ಶಿಕ್ಷಣದ ಮೂಲಕ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಗ್ರಾಮೀಣ ಮಕ್ಕಳ ಭವಿಷ್ಯ ರೂಪಿಸಲು ಮಧು ಬಂಗಾರಪ್ಪ ದೊಡ್ಡ ಕನಸು ಕಂಡಿದ್ದಾರೆ. ಇದು ಪಾಲಕರು, ಶಿಕ್ಷಕರ ಕಾರ್ಯಕ್ರಮ. ಯಶಸ್ವಿಗೊಳಿಸಲು ತಾವೆಲ್ಲಾ ಕೈಜೋಡಿಸಿದರೆ ಮಾತ್ರ ಅದು ಯಶಸ್ವಿಯಾಗುತ್ತದೆ ಎಂದರು.
ಧಾರ್ಮಿಕ ಕಾರ್ಯಕ್ರಮಗಳಿಗೆ ಕರೆದು ದುಡ್ಡು ಕೊಡುವ ಜನರು ತಮ್ಮ ಶಾಲೆ ಅಭಿವೃದ್ಧಿಗೆ ಕೊಡುವ ಪ್ರಯತ್ನ ಆಗಬೇಕು. ಇನ್ನು ಶಾಸಕರ ಅನುದಾನವನ್ನು ಶಿಕ್ಷಣಕ್ಕೆ ಅತೀ ಹೆಚ್ಚು ಬಳಕೆ ಮಾಡಿದವರಲ್ಲಿ ರಾಜ್ಯದಲ್ಲಿ ನಾನೇ ನಂ.1. ಸುಮಾರು 10 ಸಾವಿರ ಡೆಸ್ಕ್ ಕೊಡಿಸಿದ್ದೇನೆ. ಎಲ್ಲವನ್ನೂ ಸರ್ಕಾರವೇ ಮಾಡಲಿ ಎಂದರೆ ಆಗುವುದಿಲ್ಲ. ಅಲ್ಲದೇ 40ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಇರುವ ಅದೇಷ್ಟೋ ಶಾಲೆಗಳನ್ನು ಮುಚ್ಚುತ್ತಿದ್ದಾರೆ. ಇದು ಸರಿಯಾದ ಕ್ರಮ ಅಲ್ಲ. ನನ್ನ ಪ್ರಕಾರ ಒಂದೇ ಮಗು ಇದ್ದರೂ ಓರ್ವ ಶಿಕ್ಷಕ ಇರಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ರಾಜ್ಯ ಹಣಕಾಸು ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ, ಶಾಸಕರಾದ ಬಾಬಾಸಾಹೇಬ ಪಾಟೀಲ, ಆಸೀಫ್ ಸೇಠ್, ವಿಠ್ಠಲ ಹಲಗೇಕರ್ ಸೇರಿದಂತೆ ಮತ್ತಿತರರು ಇದ್ದರು. ಇದೇ ವೇಳೆ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದ ಅಂಗವಾಗಿ ತಾವು ಕಲಿತ ಶಾಲೆಗಳಿಗೆ ದಾನ ಮಾಡಿದಂತಹ ದಾನಿಗಳಿಗೆ ಸನ್ಮಾನಿಸಲಾಯಿತು.