ಮೈಸೂರು: "ಮುಡಾದಲ್ಲಿ ಸಿಎಂ ಪ್ರಕರಣಕ್ಕೆ ಸಂಬಂಧಿಸಿದ ಮೂಲ ದಾಖಲೆಗಳೇ ಕಾಣೆಯಾಗಿವೆ. ಈ ಕುರಿತು ದೂರು ನೀಡಿದ್ದೇನೆ. ಜೊತೆಗೆ 50:50 ಅನುಪಾತ ಆಧಾರದಲ್ಲಿ ಮುಡಾದ ಅಕ್ರಮ ಸೈಟ್ಗಳ ವಹಿವಾಟಿನ ಬಗ್ಗೆ ತನಿಖೆ ನಡೆಸುವಂತೆ ಹೋರಾಟ ನಡೆಸುತ್ತಿದ್ದೇನೆ" ಎಂದು ಆರ್ಟಿಐ ಕಾರ್ಯಕರ್ತ ಗಂಗರಾಜು ತಿಳಿಸಿದರು.
ಸೋಮವಾರ ಇ.ಡಿ ಕಚೇರಿಗೆ ಹಾಜರಾದ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಜಾರಿ ನಿರ್ದೇಶನಾಲಯ (ಇ.ಡಿ) ಮುಡಾಕ್ಕೆ ಸಂಬಂಧಪಟ್ಟಂತೆ ನನ್ನ ಬಳಿ ಇರುವ ದಾಖಲೆಗಳನ್ನು ಕೇಳಿದರು. ಸಿಎಂ ಪ್ರಕರಣದ ಮೂಲ ದಾಖಲೆಗಳಾದ ಕೆಸರೆ ಗ್ರಾಮದ ಪ್ರಾಜೆಕ್ಟ್ ಫೈಲ್, 1992ರಲ್ಲಿ ಅದ ಪ್ಲಾನಿಂಗ್ ಫೈಲ್ ಮುಡಾದಲ್ಲಿ ಇಲ್ಲ. ಹೀಗಾಗಿ ಈ ಬಗ್ಗೆ ನನ್ನ ಬಳಿ ಚರ್ಚೆ ನಡೆಸಿದರು" ಎಂದರು.
"ಸಿಎಂ ಪತ್ನಿ ಪಾರ್ವತಿ ಅವರು ಸಲ್ಲಿಸಿದ್ದ ಮೂಲ ಅರ್ಜಿಯೂ ಕೂಡಾ ಮುಡಾದಲ್ಲಿ ಇಲ್ಲ. ಮುಡಾದಲ್ಲಿ ಕೆಲವು ದಾಖಲೆಗಳು ಇಲ್ಲ ಎಂದು ಈಗಾಗಲೇ ದೂರು ನೀಡಿದ್ದೆ. ಅದರ ಕುರಿತು ಮಾಹಿತಿ ಪಡೆದುಕೊಂಡರು. 50:50 ಅನುಪಾತ ನಿವೇಶನ ಹಂಚಿಕೆಯಲ್ಲಿ ಏನು ಅಕ್ರಮ ನಡೆದಿದೆ ಎಂಬ ಕುರಿತು ಮಾಹಿತಿ ಕೇಳಿದರು. ಕೆಸರೆ ಸರ್ವೆ ನಂ 464ಕ್ಕೆ ಸಂಬಂಧಿಸಿದಂತೆ ಅವರ ಬಳಿ ಇಲ್ಲದ ದಾಖಲೆಗಳನ್ನು ನನ್ನಿಂದ ಪಡೆದುಕೊಂಡರು. ನಂತರ ಮುಡಾದ ಮತ್ತೊಂದು ಹಗರಣ ವಿಡಿಯೋ ಹೂರ ಬಂದಿರುವುದರ ಕುರಿತು ಮಾಹಿತಿ ಕೇಳಿದರು. ಮಂಜುನಾಥ್, ಬಿಲ್ಡರ್ ಜೈರಾಮ್ ಅವರ ಬಗ್ಗೆ ಮಾಹಿತಿ ಕೇಳಿದರು. ಈ ಬಗ್ಗೆ ಎಲ್ಲ ಮಾಹಿತಿಯನ್ನು ನೀಡಿದ್ದೇನೆ" ಎಂದು ತಿಳಿಸಿದರು.
"ಮುಡಾ ಹಗರಣದಲ್ಲಿ ರಾಕೇಶ್ ಪಾಪಣ್ಣ ಅವರ ಕೈವಾಡವಿದೆ. ಅವರು 500ರಿಂದ 600 ಕೋಟಿ ರೂ ಆಸ್ತಿ ಮಾಡಿದ್ದಾರೆ. ಮುಡಾ ಅಕ್ರಮವನ್ನು ಅವರ ತಂದೆ ಕಾಲದಿಂದಲೂ ಮಾಡಿದ್ದಾರೆ. ಈ ಅಕ್ರಮದ ವಾಸನೆ ಸಿಕ್ಕಿ ಇ.ಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇ.ಡಿ ನಮ್ಮ ಪ್ರಾಧಿಕಾರಕ್ಕೆ ಆಗಿರುವ ನಷ್ಟ ಮತ್ತು ಭ್ರಷ್ಟಾಚಾರವನ್ನು ಹುಡುಕಿ ನ್ಯಾಯ ಕೊಡಿಸುವ ಕೆಲಸವನ್ನು ಮಾಡುತ್ತದೆ. ಇ.ಡಿ ನನ್ನ ಬಳಿ ಇರುವ ಯಾವುದೇ ದಾಖಲೆ ಕೇಳಿದರೂ ಕೊಡುತ್ತೇನೆ ಮತ್ತು ತನಿಖೆಗೆ ಸಹಕಾರ ನೀಡುತ್ತೇನೆ" ಎಂದು ಹೇಳಿದರು.
ಇದನ್ನೂ ಓದಿ: ಮುಡಾ - ವಾಲ್ಮೀಕಿ ಹಗರಣ ತಾರ್ಕಿಕ ಅಂತ್ಯ ಕಾಣುತ್ತವೆ : ಸಚಿವ ವಿ ಸೋಮಣ್ಣ