ಬೆಂಗಳೂರು: ಪ್ರಧಾನಿ ಮೋದಿಗೆ ನಮ್ಮ ರಾಜ್ಯಸಭೆಯ ವಿಪಕ್ಷ ನಾಯಕ ಅಂದರೆ ಭಯ. ಅದಕ್ಕೆ ಅವರು ಖರ್ಗೆ ತವರು ಜಿಲ್ಲೆ ಕಲಬುರಗಿಯಿಂದ ಪ್ರಚಾರ ಆರಂಭಿಸಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಟೀಕಿಸಿದರು.
ಕೆಪಿಸಿಸಿ ಕಚೇರಿ ಬಳಿಯ ಭಾರತ್ ಜೋಡೋ ಸಭಾಂಗಣದ ಬಳಿ ಪ್ರಧಾನಿ ಮೋದಿ ರಾಜ್ಯದಿಂದ ಚುನಾವಣಾ ಪ್ರವಾಸ ಆರಂಭಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಈ ರೀತಿ ಪ್ರತಿಕ್ರಿಯಿಸಿದರು.
ಕಲಬುರಗಿಯಲ್ಲಿ ಕಾಂಗ್ರೆಸ್ ಗೆಲ್ಲುತ್ತಾ ಎಂಬ ವಿಚಾರಕ್ಕೆ ಮಾತನಾಡಿದ ಅವರು, ಕಲಬುರ್ಗಿ ಸೇರಿ ರಾಜ್ಯದಲ್ಲಿ ಸುಮಾರು 20 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ತಾಲೂಕು, ಜಿಲ್ಲಾ ಮಟ್ಟದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರುಗಳ ಸಭೆಯನ್ನು 21ರಂದು ನಡೆಸಲಿದ್ದೇವೆ. ಆ ಸಂದರ್ಭದಲ್ಲಿ ಅವರೆಲ್ಲರಿಗೂ ಲೋಕಸಭೆ ಚುನಾವಣೆಯ ಜವಾಬ್ದಾರಿ ನೀಡಲಾಗುವುದು. ಇನ್ನು ಸರ್ಕಾರದಿಂದ ನೇಮಕ ಮಾಡಿರುವ ಉಸ್ತುವಾರಿಗಳಿಗೂ ಚುನಾವಣೆ ಜವಾಬ್ದಾರಿ ನೀಡಲಿದ್ದೇವೆ. ಅವರುಗಳು ಪಕ್ಷಕ್ಕೆ ದುಡಿಯಬೇಕು ಎಂದು ಸಲಹೆ ನೀಡಿದರು.
ಸಂಜೆ ಮುಂಬೈಗೆ ತೆರಳುತ್ತಿದ್ದೇವೆ. ಅಲ್ಲಿ ಭಾರತ ಜೋಡೋ ಸಮಾರೋಪದಲ್ಲಿ ಪಾಲ್ಗೊಳ್ಳುತ್ತೇವೆ. ಮಾ.20ಕ್ಕೆ ಸಿಇಸಿ ಸಭೆ ಇದೆ. ಮಾ.20ಕ್ಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದರು.
ಪ್ರಚಾರ, ಪ್ರವಾಸ ಕಾರ್ಯಕ್ರಮದ ಉಸ್ತುವಾರಿಗಳ ನೇಮಕ: ಲೋಕಸಭೆ ಚುನಾವಣೆ ಜಿಲ್ಲೆಗಳಲ್ಲಿ ಪ್ರಚಾರ ಕಾರ್ಯಕ್ರಮ ಆಯೋಜನೆ ಹಾಗೂ ಪ್ರವಾಸ ಕಾರ್ಯಕ್ರಮಗಳ ಅನುಷ್ಠಾನ ಜವಾಬ್ದಾರಿಯನ್ನು ನಿರ್ವಹಿಸಲು ಜಿ ಸಿ ಚಂದ್ರಶೇಖರ್ ಮತ್ತು ಬಸವರಾಜ ರಾಯರೆಡ್ಡಿಯನ್ನು ಉಸ್ತುವಾರಿಯಾಗಿ ನೇಮಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಪ್ರಸ್ತುತ ನಡೆಯಲಿರುವ 2024ರ ಲೋಕಸಭಾ ಚುನಾವಣೆಗೆ ಪಕ್ಷದ ಮುಖಂಡರುಗಳ ಪ್ರಚಾರ ಕಾರ್ಯಕ್ರಮ ಆಯೋಜನೆ ಹಾಗೂ ಪ್ರವಾಸ ಕಾರ್ಯಕ್ರಮ ಸುಲಲಿತ, ಅಚ್ಚುಕಟ್ಟಾಗಿ ನಿರ್ವಹಿಸುವ ಅದರ ಪೂರ್ಣ ಜವಾಬ್ದಾರಿಯನ್ನು ವಹಿಸಲಿದ್ದಾರೆ. ರಾಜ್ಯದಲ್ಲಿ ನಡೆಯಲಿರುವ ಮೊದಲನೇ ಹಂತದ ಲೋಕಸಭಾ ಚುನಾವಣಾ ಜಿಲ್ಲೆಗಳ ಪ್ರವಾಸ ಕಾರ್ಯಕ್ರಮದ ಜವಾಬ್ದಾರಿಯನ್ನು ರಾಜ್ಯಸಭಾ ಸದಸ್ಯ ಜಿ ಸಿ ಚಂದ್ರಶೇಖರ್ ಅವರಿಗೆ ಹಾಗೂ 2ನೇ ಹಂತದ ಜಿಲ್ಲೆಗಳ ಉಸ್ತುವಾರಿಯನ್ನು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರಿಗೆ ನೀಡಲಾಗಿದೆ.
ರಾಜ್ಯಸಭಾ ಸದಸ್ಯ ಜಿ ಸಿ ಚಂದ್ರಶೇಖರ್, ಬಸವರಾಜ ರಾಯರೆಡ್ಡಿ ಅವರು ತಕ್ಷಣ ಜವಾಬ್ದಾರಿ ವಹಿಸಿಕೊಂಡು ಎಲ್ಲ ಸ್ಥಳೀಯ ಮುಖಂಡರ ಸಹಕಾರದೊಂದಿಗೆ ಚರ್ಚಿಸಿ ಪ್ರಚಾರ, ಪ್ರವಾಸ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಮಾರ್ಗ ಹಾಗೂ ನಕ್ಷೆಯನ್ನು ಸಿದ್ಧಪಡಿಸಿ ಒಂದು ವಾರದೊಳಗೆ ಸಲ್ಲಿಸಲು ಕೋರಿದ್ದಾರೆ.
ಲೋಕಸಭೆ ಚುನಾವಣೆ ವಿವರ: ಏ.26ರಂದು ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ (ಎಸ್‌ಸಿ), ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ (ಎಸ್‌ಸಿ), ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ (ಎಸ್‌ಸಿ) ಸೇರಿ ಒಟ್ಟು 14 ಕ್ಷೇತ್ರಗಳಿಗೆ ನಡೆಯಲಿರುವ ರಾಜ್ಯದ ಮೊದಲ ಹಂತದ ಚುನಾವಣೆಯ ಪ್ರಚಾರ ಕಾರ್ಯಕ್ರಮ ಆಯೋಜನೆ ಹಾಗೂ ಪ್ರವಾಸ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.
ಮೇ 7ರಂದು ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ (ಎಸ್‌ಸಿ), ಕಲಬುರಗಿ (ಎಸ್‌ಸಿ), ರಾಯಚೂರು (ಎಸ್‌ಟಿ), ಬೀದರ್, ಕೊಪ್ಪಳ, ಬಳ್ಳಾರಿ (ಎಸ್‌ಟಿ), ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗದಲ್ಲಿ ನಡೆಯುವ ರಾಜ್ಯದ ಎರಡನೇ ಹಂತದ ಚುನಾವಣೆಯ ಪ್ರಚಾರ ಕಾರ್ಯಕ್ರಮ ಆಯೋಜನೆ ಹಾಗೂ ಪ್ರವಾಸ ಕಾರ್ಯಕ್ರಮಗಳ ಅನುಷ್ಠಾನದ ಜವಾಬ್ದಾರಿಯನ್ನು ನಿರ್ವಹಿಸಲು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.
ಇದನ್ನೂಓದಿ: ಈಶ್ವರಪ್ಪ ಮನಸ್ಸಿನಲ್ಲಿರುವ ನೋವು ಬೇಗ ಪರಿಹಾರವಾಗಲಿ: ಆನಂದ ಗುರೂಜಿ