ಬಳ್ಳಾರಿ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್ಗೆ ಒಳಗಾಗಿದ್ದ ಮತ್ತೋರ್ವ ಬಾಣಂತಿ ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ರಾತ್ರಿ ಸಾವನ್ನಪ್ಪಿದ್ದಾರೆ. ಕೂಡ್ಲಗಿಯ ಸುಮಯಾ (25) ಮೃತ ಬಾಣಂತಿ ಎಂದು ತಿಳಿದು ಬಂದಿದೆ.
ಸುಮಯಾ ಕಳೆದ 22 ದಿನಗಳಿಂದ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದರೊಂದಿಗೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಬಾಣಂತಿಯರ ಸಂಖ್ಯೆ 5ಕ್ಕೆ ಏರಿದೆ. ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್ ಮಾಡಿಸಿಕೊಂಡ ಬಳಿಕ ಸುಮಯಾ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು. ಹೀಗಾಗಿ, ಅವರನ್ನು ನವೆಂಬರ್ 12ರಂದು ಜಿಲ್ಲಾಸ್ಪತ್ರೆಯಿಂದ ಬಿಮ್ಸ್‌ಗೆ ರವಾನೆ ಮಾಡಲಾಗಿತ್ತು. ಈ ನಡುವೆ ಕಿಡ್ನಿ ವೈಫಲ್ಯವಾಗಿ ಸತತ ಡಯಾಲಿಸಿಸ್ ಮಾಡಲಾಗುತ್ತಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೇ 22 ದಿನಗಳ ಬಳಿಕ ಸುಮಯಾ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ನವೆಂಬರ್ 9ರಿಂದ 11ರ ವರೆಗೆ ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ನಾಲ್ವರು ತಾಯಂದಿರು ಮರಣ ಹೊಂದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, 3 ದಿನಗಳಲ್ಲಿ ನಡೆಸಿದ 34 ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಪೈಕಿ 7 ಪ್ರಕರಣಗಳಲ್ಲಿ ಮಾತ್ರ ಲೋಪದೋಷ ಕಂಡು ಬಂದಿದೆ. ಮೂತ್ರಪಿಂಡ ಗಾಯದಂತಹ ಸಮಸ್ಯೆಗಳು 7 ಪ್ರಕರಣಗಳಲ್ಲಿ ಕಂಡು ಬಂದಿದೆ. ಅದರಲ್ಲಿ ನಾಲ್ವರು ರೋಗಿಗಳು ಸಾವನ್ನಪ್ಪಿದ್ದಾರೆ. ಉಳಿದ 3 ರೋಗಿಗಳಲ್ಲಿ 2 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಬ್ಬ ರೋಗಿಯು ಬಳ್ಳಾರಿ ವಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದರು.
ಡ್ರಗ್ ಕಂಟ್ರೋಲರ್ ಅಮಾನತು: ಬಾಣಂತಿಯರ ಸರಣಿ ಸಾವಿನ ಬೆನ್ನಲ್ಲೇ ಮಹತ್ವದ ಸಭೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ತವ್ಯಲೋಪ ಹಿನ್ನೆಲೆಯಲ್ಲಿ ಡ್ರಗ್ ಕಂಟ್ರೋಲರ್ ಉಮೇಶ್ ಅವರನ್ನು ಸಸ್ಪೆಂಡ್ ಮಾಡಿದ್ದರು. ಇನ್ನು ಮುಂದೆ ಈ ರೀತಿಯ ದುರ್ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದ್ದರು. ಪ್ರಯೋಗಾಲಯದ ವರದಿ ಬಂದ ಬಳಿಕ ಘಟನೆಗೆ ಜವಾಬ್ದಾರರಾದ ಪ್ರತಿಯೊಬ್ಬರನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದರು.
ಸಭೆಯಲ್ಲಿ ಅಧಿಕಾರಿಗಳ ಮಾಹಿತಿ: ನವೆಂಬರ್ 11ರಿಂದ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಹಿಮೋಡಯಾಲಿಸಿಸ್ ಮತ್ತು ಬಹು ಅಂಗಗಳ ವೈಫಲ್ಯ ಹಾಗೂ ತೀವ್ರತರ ಮೂತ್ರಪಿಂಡದ ಗಾಯದಂತಹ ತೊಂದರೆಗಳ 7 ಪ್ರಕರಣಗಳಲ್ಲಿ 4 ಬಾಣಂತಿಯರು ಸಾವಿಗೀಡಾಗಿದ್ದಾರೆ. ಉಳಿದ 3 ರೋಗಿಗಳಲ್ಲಿ 2 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಳ್ಳಾರಿ ವಿಮ್ಸ್‌ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಬಾಣಂತಿಯರ ಸಾವಿನ ಕುರಿತು ತಜ್ಞರ ಸಮಿತಿ ರಚಿಸಿ ಘಟನಾವಳಿಗಳ ಬಗ್ಗೆ ಪ್ರಾಥಮಿಕ ವರದಿ ಪಡೆಯಲಾಗಿದೆ ಎಂದು ಸಿಎಂ ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದ್ದರು.
ಇದನ್ನೂ ಓದಿ: ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವು ಆರೋಪ; ವಿಮ್ಸ್ ಎದುರು ಪೋಷಕರ ಪ್ರತಿಭಟನೆ