ದಾವಣಗೆರೆ: ಮಣ್ಣಿನಲ್ಲಿ ಹೂತು ಹಾಕಿರುವ ಸ್ಥಿತಿಯಲ್ಲಿ ವೃದ್ಧರೊಬ್ಬರ ಶವ ಜಗಳೂರು ತಾಲೂಕಿನ ಅಣಬೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ವ್ಯಕ್ತಿಯನ್ನು ಕೊಲೆ ಮಾಡಿ ಹೂತು ಹಾಕಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಜಗಳೂರು ತಾಲೂಕಿನ ಗಾಂಧಿ ನಗರದ ನಿವಾಸಿ ಡಾಕ್ಯ ನಾಯಕ್ (65) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ಕಳೆದೊಂದು ವಾರದ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದರು. ಕುಟುಂಬಸ್ಥರು ಹುಡುಕಾಟ ನಡೆಸಿದ್ದರು ಎಂಬ ಮಾಹಿತಿ ದೊರೆತಿದೆ.
ಕುರಿಗಾಹಿಗಳು ಅರಣ್ಯ ಪ್ರದೇಶಕ್ಕೆ ತೆರಳಿದ ಸಂದರ್ಭದಲ್ಲಿ ಗುಂಡಿಯಲ್ಲಿ ಮೃತದೇಹದ ಕೈ ಕಾಣಿಸಿಕೊಂಡಿದೆ. ಸ್ಥಳೀಯರು ಕೊಲೆ ಎಂದು ಶಂಕಿಸಿ ಗಾಬರಿಗೊಂಡು ಜಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಿಎಸ್ಐ ಸಾಗರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಮೃತದೇಹ ಪತ್ತೆಯಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ವಿಜಯಪುರ: ಮನೆ ಮುಂದೆ ನವಜಾತ ಗಂಡು ಶಿಶುವಿನ ಮೃತದೇಹ ಇಟ್ಟು ಪರಾರಿ