ಮಂಡ್ಯ : ತೂಕದಲ್ಲಿ ಮೋಸ ಮಾಡುತ್ತಿದ್ದ ಆರೋಪ ಹಿನ್ನೆಲೆಯಲ್ಲಿ ಮೂರು ಜ್ಯುವೆಲರ್ಸ್ ಶಾಪ್ಗಳ ಮೇಲೆ ಕರ್ನಾಟಕ ಆಹಾರ ಆಯೋಗ ಹಾಗೂ ಅಳತೆ ಮತ್ತು ತೂಕ ಮಾಪನ ಅಧಿಕಾರಿಗಳು ದಾಳಿ ನಡೆಸಿ, ಸೀಜ್ ಮಾಡಿರುವ ಘಟನೆ ಜಿಲ್ಲೆಯ ಪಾಂಡವಪುರದಲ್ಲಿ ಶನಿವಾರ ನಡೆದಿದೆ.
ಈ ಶಾಪ್ಗಳಲ್ಲಿ ಗ್ರಾಹಕರು ಚಿನ್ನವನ್ನು ಖರೀದಿಸುವಾಗ ಅಳತೆಯ ವೇಳೆ ಒಂದರಿಂದ ಒಂದೂವರೆ ಗ್ರಾಂ ಚಿನ್ನವನ್ನ ಲಪಟಾಯಿಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿತ್ತು. ಖಚಿತ ಮಾಹಿತಿ ಆಧರಿಸಿದ ಅಧಿಕಾರಿಗಳು ಪಟ್ಟಣದ ಮೂರು ಜ್ಯುವೆಲರ್ಸ್ ಶಾಪ್ಗಳ ಮೇಲೆ ದಿಢೀರ್ ದಾಳಿ ನಡೆಸಿದ್ರು.
ದಾಳಿ ವೇಳೆ ತೂಕದ ಮಾಪನಗಳನ್ನು ಪರಿಶೀಲಿಸಿದಾಗ ಸುಮಾರು ಒಂದರಿಂದ ಒಂದೂವರೆ ಗ್ರಾಂ ಮೋಸ ಮಾಡಿರುವುದು ಕಂಡು ಬಂದಿದೆ. ತಕ್ಷಣ ಅಧಿಕಾರಿಗಳು ಮಾಲೀಕರಿಗೆ ಎಚ್ಚರಿಕೆ ನೀಡಿದರಲ್ಲದೆ, ಮೂರು ಅಂಗಡಿಗಳನ್ನು ಸೀಜ್ ಮಾಡಿದ್ದಾರೆ.
ಆಹಾರ ಹಾಗೂ ಹಾಗೂ ಅಳತೆ ಮತ್ತು ತೂಕ ಮಾಪನ ಆಯೋಗದ ಅಧ್ಯಕ್ಷರು ಹೇಳಿದ್ದೇನು : ಈ ಬಗ್ಗೆ ಆಹಾರ ಆಯೋಗದ ಅಧ್ಯಕ್ಷ ಡಾ. ಕೃಷ್ಣ ಅವರು ಮಾತನಾಡಿ, ''ಲಕ್ಷ್ಮಿ ಜ್ಯುವೆಲರ್ಸ್, ಮಹಾಲಕ್ಷ್ಮಿ ಹಾಗೂ ಮಹೇಂದ್ರ ಜ್ಯುವೆಲರ್ಸ್ ಈ ಮೂರು ಶಾಪ್ಗಳಲ್ಲಿ ತೂಕದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಮಹಾಲಕ್ಷ್ಮಿ ಜ್ಯುವೆಲರ್ಸ್ನವರು ಲೈಸೆನ್ಸ್ ಪಡೆದಿಲ್ಲ. ಅಲ್ಲದೇ, 5 ವರ್ಷದಿಂದ ಲೈಸೆನ್ಸ್ ಪಡೆಯದೆ ತೂಕದ ಮಷಿನ್ಗೆ ಯಾವುದೇ ಸೀಲ್, ಸಹಿ ಪಡೆಯದೇ ಮಾರಾಟ ಮಾಡುತ್ತಿದ್ದಾರೆ. ಮತ್ತೆ ಅವರು ಬರಿ ಗಿರವಿ ಅಂಗಡಿ ತೆರೆಯಲು ಲೈಸೆನ್ಸ್ ಪಡೆದು ಒಡವೆಗಳನ್ನ ಸಹ ಮಾರಾಟ ಮಾಡುತ್ತಿದ್ದಾರೆ. ಇದು ಅಪರಾಧವಾದ್ದರಿಂದ ಅವರ ಮೇಲೆ ಕೇಸ್ ರಿಜಿಸ್ಟರ್ ಮಾಡಿ, ಇವತ್ತು ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇವೆ'' ಎಂದರು.
ಇದನ್ನೂ ಓದಿ : ಹುಬ್ಬಳ್ಳಿ: ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶ, ಓರ್ವ ಸೆರೆ