ಮಂಗಳೂರು: ಪೊಲೀಸರಿಗೆ ಆವಾಜ್ ಹಾಕಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ಅವರ ಗರ್ಡಾಡಿಯ ಮನೆಗೆ ಪೊಲೀಸರು ಬಂದಿದ್ದು, ಅವರ ಬಂಧನದ ಸಾಧ್ಯತೆಯಿದೆ.
ಬೆಳ್ತಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ಸುಬ್ಬಾಪುರಮಠ ಹಾಗೂ ಪಿಎಸ್ಐ ಚಂದ್ರಶೇಖರ್ ಸೇರಿದಂದೆ ಪೊಲೀಸ್ ಸಿಬ್ಬಂದಿ ಮನೆಗೆ ಬಂದಿದ್ದಾರೆ. ಇಂದು ಬೆಳಗ್ಗೆ 11 ಗಂಟೆ ವೇಳೆಗೆ ಅವರ ಮನೆಗೆ ಪೊಲೀಸರು ಆಗಮಿಸಿದ್ದಾರೆ. ಪೊಲೀಸರು ಬಂಧನಕ್ಕೆ ಬಂದಿರುವ ವಿಷಯ ತಿಳಿದು ಈ ವೇಳೆ ಅವರ ಮನೆಯಲ್ಲಿ ಕಾರ್ಯಕರ್ತರು ಸಾಕಷ್ಟು ಮಂದಿ ಜಮಾಯಿಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಹರೀಶ್ ಪೂಂಜಾ ಅವರ ಮನೆಗೆ ವಕೀಲರು ಆಗಮಿಸಿದ್ದಾರೆ.
ಬಿಜೆಪಿ ತಾಲೂಕು ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿಯನ್ನು ಮೇ 18ರಂದು ಅಕ್ರಮ ಕಲ್ಲುಕೋರೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು. ಇದನ್ನು ವಿರೋಧಿಸಿ ಶಾಸಕ ಹರೀಶ್ ಪೂಂಜಾ ರಾತ್ರೋರಾತ್ರಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ತೆರಳಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕುರಿತು ಎಫ್‌ಐಆರ್ ದಾಖಲಾಗಿತ್ತು. ಮೇ 21ರಂದು ಪ್ರತಿಭಟನೆ ನಡೆದ ದಿನ ಪೊಲೀಸರಿಗೆ ಬೆದರಿಕೆ ಒಡ್ಡಿರುವ ಕುರಿತು ಅವರ ಮೇಲೆ ಇನ್ನೊಂದು ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಸಂಕಷ್ಟ ಎದುರಾಗಿದೆ.
ಹರೀಶ್ ಪೂಂಜಾ ಬಂಧನ ಯತ್ನ ಖಂಡನೀಯ- ಬಿ.ವೈ ವಿಜಯೇಂದ್ರ: ''ಶಾಸಕ ಹರೀಶ್ ಪೂಂಜಾ ಬಂಧನ ಯತ್ನ ಖಂಡನೀಯವಾಗಿದ್ದು, ಕೂಡಲೇ ಇದನ್ನು ಇಲ್ಲಿಗೆ ನಿಲ್ಲಿಸಬೇಕು. ನಮ್ಮ ಶಾಸಕರು, ಕಾರ್ಯಕರ್ತರ ಬಂಧನ ಮುಂದುವರೆದರೆ ಮುಂದಾಗುವ ವಿಚಾರಗಳಿಗೆ ಪೊಲೀಸರೇ ಹೊಣೆಯಾಗಬೇಕಾಗಲಿದೆ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಶಾಸಕ ಹರೀಶ್ ಪೂಂಜಾ ಮೇಲೆ ಎಫ್ಐಆರ್ ದಾಖಲಾಗಿದೆ. ಬೆಳ್ತಂಗಡಿಯಲ್ಲಿ ಅಕ್ರಮ ಗಣಿಗಾರಿಕೆ ಸಂಬಂಧ ಪೊಲೀಸರು ಎಫ್ಐಆರ್ ಹಾಕಿದ್ದಾರೆ. ಈ ವಿಚಾರದಲ್ಲಿ ನಮ್ಮ ಶಾಸಕ ಹರೀಶ್ ಪೂಂಜಾ ಬಂಧನಕ್ಕೆ ಮುಂದಾಗಿರೋದು ಖಂಡನೀಯ. ವಿಷಯ ಮರೆ ಮಾಚಲು ಪೊಲೀಸರು ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಹೆಸರನ್ನೂ ಎಫ್ಐಆರ್ನಲ್ಲಿ ಸೇರಿಸುವ ಪಿತೂರಿ ಮಾಡಲಾಗಿದೆ. ಇದರ ಬಗ್ಗೆ ಹರೀಶ್ ಪೂಂಜಾ ಪ್ರಶ್ನೆ ಮಾಡಿದ್ದರು. ಪೊಲೀಸ್ ಠಾಣೆಗೆ ಹರೀಶ್ ಪೂಂಜಾ ಹೋಗಿ ಗಲಾಟೆ ಮಾಡಿದ್ದು ನಿಜ. ಆದರೆ ನಮ್ಮ ಕಾರ್ಯಕರ್ತರ ಮೇಲೆ ಪೊಲೀಸ್ ದಬ್ಬಾಳಿಕೆ ನಡೀತಿದೆ'' ಎಂದು ಆರೋಪಿಸಿದರು.
''ಸೇಡು ತೀರಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಕಾರ್ಯಕರ್ತರ ಪರ ಪೊಲೀಸ್ ಠಾಣೆಗೆ ಹೋಗಿ ಮಾತಾಡಿದ್ದು, ಪ್ರತಿಭಟನೆಗೆ ಹರೀಶ್ ಪೂಂಜಾ ಕರೆ ಕೊಟ್ಟಿದ್ದು ನಿಜ ಆದರೆ ನೀತಿ ಸಂಹಿತೆ ನೆಪದಲ್ಲಿ ಅವರ ಬಂಧನಕ್ಕೆ ಮುಂದಾಗಿರೋದು ತಪ್ಪು. ನಮ್ಮ ಹೋರಾಟ ಹತ್ತಿಕ್ಕುವ ಕೆಲಸ ಆಗತ್ತಿದೆ ಕಾರ್ಯಕರ್ತರಿಗೆ ಆಗುತ್ತಿರುವ ನೋವು, ದಬ್ಬಾಳಿಕೆ ನೋಡಿ ಹರೀಶ್ ಪೂಂಜಾ ಉದ್ವೇಗದಿಂದ ಕೆಲವು ಮಾತಾಡಿದ್ದಾರೆ. ಉದ್ವೇಗದಲ್ಲಿ ಪೊಲೀಸರ ಬಗ್ಗೆ ಮಾತಾಡಿದ್ದು ಸರಿಯಲ್ಲ ಅಂತ ಹರೀಶ್ ಪೂಂಜಾಗೂ ಅನಿಸಿದೆ. ಇದನ್ನೇ ನೆಪ ಇಟ್ಕೊಂಡು ನಮ್ಮ ಶಾಸಕರನ್ನ, ಕಾರ್ಯಕರ್ತರನ್ನು ಬಂಧಿಸಿದರೆ ಹೋರಾಟ ಮಾಡುತ್ತೇವೆ. ಕಾನೂನು ಸುವ್ಯವಸ್ಥೆ ಹದಗೆಡಲು ಪೊಲೀಸರೇ ಕುಮ್ಮಕ್ಕು ಕೊಡುತ್ತಿದ್ದಾರೆ. ಶಾಸಕರ ಬಂಧನಕ್ಕೆ ಮುಂದಾಗಿರೋದು ಸರಿಯಲ್ಲ. ಮುಂದೆ ಆಗುವ ವಿಚಾರಗಳಿಗೆ ಪೊಲೀಸರೇ ಹೊಣೆಗಾರರಾಗಬೇಕಾಗುತ್ತದೆ. ಪೊಲೀಸರು ಕೂಡಲೇ ಕಾರ್ಯಕರ್ತರ ಮೇಲಿನ ಎಫ್ಐಆರ್ ವಾಪಸ್ ಪಡೆಯಲಿ. ಶಾಸಕರ ಬಂಧನ ಪ್ರಯತ್ನ ನಿಲ್ಲಿಸಲಿ. ಗೃಹ ಸಚಿವರು ತಕ್ಷಣ ಪೊಲೀಸ್ ವರಿಷ್ಠರ ಜೊತೆಗೆ ಮಾತಾಡಿ ಈ ದಬ್ಬಾಳಿಕೆ ನಿಲ್ಲಿಸಲಿ'' ಎಂದು ಆಗ್ರಹಿಸಿದರು.
''ರಾಜಕಾರಣಿಗಳು, ಪುಡಾರಿಗಳು, ಅಧಿಕಾರಿಗಳ ಒತ್ತಡಕ್ಕೆ ಮಣಿದು ಎಫ್ಐಆರ್ ಹಾಕಿದ್ದಾರೆ, ಇದು ಸರಿಯಲ್ಲ. ನಮ್ಮ ಕಾರ್ಯಕರ್ತರ ಮೇಲೆ ವಿನಾಕಾರಣ ಎಫ್ಐಆರ್ ಹಾಕಿ ರಾತ್ರೋರಾತ್ರಿ ಬಂಧಿಸಿದ್ದಾರೆ. ಶಾಸಕ ಹರೀಶ್ ಪೂಂಜಾ ಉದ್ವೇಗದಲ್ಲಿ ಮಾತಾಡಿದ್ದಾರೆ. ಹರೀಶ್ ಪೂಂಜಾ ಮಾತಾಡಿದ್ದರ ಹಿಂದೆ ಯಾವುದೇ ದುರುದ್ದೇಶ ಇಲ್ಲ. ಇದನ್ನೇ ನೆಪ ಮಾಡಿಕೊಂಡು ಪೊಲೀಸರು ದಬ್ಬಾಳಿಕೆ ನಡೆಸೋದು ಸರಿಯಲ್ಲ. ಶಾಸಕ ಹರೀಶ್ ಪೂಂಜಾ ಅವರ ಉದ್ವೇಗದ ಮಾತುಗಳು ತಪ್ಪಿರಬಹುದು. ಆದರೆ, ದುರುದ್ದೇಶ ಇರಲಿಲ್ಲ ಇದನ್ನೇ ನೆಪ ಮಾಡಿಕೊಂಡು ಪೊಲೀಸರು ದಬ್ಬಾಳಿಕೆ, ದೌರ್ಜನ್ಯ ಮಾಡೋದು ಸರಿಯಲ್ಲ. ಪೊಲೀಸರು ನಮ್ಮ ಶಾಸಕ ಪೂಂಜಾರನ್ನು ಬಂಧಿಸಿದರೆ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಬೇಕಾಗುತ್ತದೆ'' ಎಂದು ಎಚ್ಚರಿಕೆ ನೀಡಿದರು.
ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿಗೆ ಪರಿಷತ್ ಟಿಕೆಟ್ ಕೊಡದಂತೆ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ''ಯಡಿಯೂರಪ್ಪ ಅವರು ಹಿರಿಯರು, ನಾಲ್ಕು ಗೋಡೆಗಳ ಮಧ್ಯೆ ಸಲಹೆ ಕೊಟ್ಟಿದ್ದಾರೆ. ಇಂದು ಸಂಜೆ ಕೋರ್ ಕಮಿಟಿ ಸಭೆ ಇದೆ. ಅಭ್ಯರ್ಥಿಗಳು ಯಾರಾಗಬೇಕು ಅಂತ ಎಲ್ಲರ ಸಲಹೆ, ಅಭಿಪ್ರಾಯ ಪಡೆದು ತೀರ್ಮಾನ ಮಾಡಲಾಗುತ್ತದೆ. ಈಗ ಯಾವುದೇ ಚರ್ಚೆ ಮಾಡುವುದಿಲ್ಲ'' ಎಂದರು.
ಇದನ್ನೂ ಓದಿ: ಪ್ರಜ್ವಲ್ ಪಾಸ್‌ಪೋರ್ಟ್ ರದ್ದತಿ ಕೇಂದ್ರ ಸರ್ಕಾರದ ಕರ್ತವ್ಯ: ಗೃಹ ಸಚಿವ ಜಿ.ಪರಮೇಶ್ವರ್ - G Parameshwara