ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಕುರಿತ ಅಶ್ಲೀಲ ವಿಡಿಯೋಗಳನ್ನು ಹಂಚಿಕೆ ಮಾಡಿರುವ ಪ್ರಕ್ರಿಯೆ ಅತ್ಯಂತ ದೊಡ್ಡ ಪಾಪ ಕೃತ್ಯ ಎಂದು ಹೈಕೋರ್ಟ್ ತಿಳಿಸಿದೆ.
ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ಪೆನ್‌ಡ್ರೈವ್‌ಗಳನ್ನು ಹಂಚಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಬೆಂಗಳೂರಿ ಸೈಬರ್ ಅಪರಾಧ ಠಾಣೆಯಲ್ಲಿ ದಾಖಲಾಗಿರುವ ದೂರು ಮತ್ತು ನಂತರದ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಬಿಜೆಪಿ ಮಾಜಿ ಶಾಸಕ ಪ್ರೀತಮ್ ಗೌಡ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ, ಈ ರೀತಿಯ ಪಾಪಕೃತ್ಯದಿಂದ ಸಂತ್ರಸ್ತೆಯರನ್ನ ಅವಮಾನಕ್ಕೆ ಗುರಿ ಮಾಡಿಸಲಾಗಿದೆ ಎಂದು ಪೀಠ ಬೇಸರ ವ್ಯಕ್ತಪಡಿಸಿದೆ.
ವಿಚಾರಣೆ ವೇಳೆ ಪೀಠ, ಈ ಅರ್ಜಿ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಾರದೆ ನಾಪತ್ತೆಯಾಗಿತ್ತು. ಅದಕ್ಕಾಗಿ ಈ ಅರ್ಜಿ ಪಟ್ಟಿ ಮಾಡುವಂತೆ ಸೂಚಿಸಲಾಗಿತ್ತು. ಅರ್ಜಿದಾರರನ್ನು ಬಂಧಿಸಬಾರದು ಎಂದು ಆದೇಶಿಸಲಾಗಿತ್ತು. ಆದರೆ, ಅರ್ಜಿದಾರರು ಜಾಮೀನು ಪಡೆದಿಲ್ಲ ಎಂದು ಪೀಠ ತಿಳಿಸಿತು.
ಈ ವೇಳೆ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾದ ಅರ್ಜಿದಾರರ ಪರ ವಕೀಲರು, ಪ್ರೀತಮ್ ಗೌಡ ಅವರನ್ನು ನಾನು ಪ್ರತಿನಿಧಿಸುತ್ತಿದ್ದೇನೆ. ವಾದ ಮಂಡಿಸಲು ನಾನು ಸಿದ್ಧನಿದ್ದೇನೆ. ವಿಶೇಷ ತನಿಖಾ ದಳವು ತನಿಖೆ ಮುಂದುವರಿಸಬಹುದು. ಅದಕ್ಕೆ ನಮ್ಮ ಆಕ್ಷೇಪವಿಲ್ಲ ಎಂದು ಪೀಠಕ್ಕೆ ವಿವರಿಸಿದರು. ಇದಕ್ಕೆ ಪೀಠವು ಅರ್ಜಿದಾರರು ವಿಚಾರಣೆಗೆ ಸಹಕರಿಸುತ್ತಿಲ್ಲವೇ ಎಂದು ಪ್ರಶ್ನಿಸಿತು. ಈ ವೇಳೆ ವಕೀಲರು, ಎಸ್‌ಐಟಿ ನಮ್ಮನ್ನು ವಿಚಾರಣೆಗೆ ಕರೆದಿಲ್ಲ ಎಂದು ತಿಳಿಸಿದರು. ವಾದ ಆಲಿಸಿದ ಪೀಠ ವಿಚಾರಣೆಯನ್ನು ಸೆಪ್ಟೆಂಬರ್ 26ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಹಾಸನದ ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಹಾಸನದ ಬಿಜೆಪಿ ಮಾಜಿ ಶಾಸಕ ಪ್ರೀತಮ್ ಗೌಡ ಸೇರಿ ಮತ್ತಿತರರ ವಿರುದ್ಧ ಬೆಂಗಳೂರಿನ ಸೈಬರ್ ಅಪರಾಧ ಠಾಣೆಯಲ್ಲಿ ವಿವಿಧ ಐಪಿಸಿ ಸೆಕ್ಷನ್‌ಗಳು ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನು ವಿಶೇಷ ತನಿಖಾ ದಳದ ತನಿಖೆಗೆ ವಹಿಸಲಾಗಿದೆ. ಈ ಪ್ರಕರಣ ರದ್ದತಿ ಮಾಡುವಂತೆ ಕೋರಿ ಪ್ರೀತಮ್ ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು.
ಲೋಕಸಭೆ ಚುನಾವಣೆ ವೇಳೆ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳಿರುವ ಪೆನ್‌ಡ್ರೈವ್‌ಗಳನ್ನು ಹಾಸನದಲ್ಲಿ ಹಂಚಿಕೆ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.
ಇದನ್ನೂ ಓದಿ: ಎದುರಾಳಿಗಳ ಕುತಂತ್ರಕ್ಕೆ ಬಡ್ಡಿ ಸಮೇತ ತೀರಿಸುತ್ತೇನೆ: ಹೆಚ್.ಡಿ.ರೇವಣ್ಣ - H D Revanna