ಬೆಳಗಾವಿ: ಮಹಾನಗರದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಹಲವು ಅವಾಂತರಗಳನ್ನು ಸೃಷ್ಟಿಸುತ್ತಿದೆ. ವರುಣಾರ್ಭಟದಿಂದ ಶವ ಸಾಗಾಟಕ್ಕೂ ಜನರು ತೊಂದರೆ ಅನುಭವಿಸಿದ ಘಟನೆ ಗುರುವಾರ ನಡೆಯಿತು.
ಇಲ್ಲಿನ ಅಮನ್ ನಗರದ ಮೆಹಬೂಬಿ ಆದಂಸಾಹೇಬ ಮಕಾಂದಾರ್ (90) ಎಂಬವರು ಮನೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದರು. ಇವರ ಮೃತದೇಹವನ್ನು ಅಂತ್ಯಕ್ರಿಯೆಗೆ ಸಾಗಿಸಲು ಒಂದೆಡೆ ಸರಿಯಾದ ರಸ್ತೆ ಇಲ್ಲದೇ ಮತ್ತೊಂದೆಡೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕುಟುಂಬಸ್ಥರು ಪರದಾಡಿದರು. ಕೊನೆಗೆ, ಅಂಜುಮನ್ ಸಂಸ್ಥೆಯ ಸಹಾಯದಿಂದ ಮೊಣಕಾಲುದ್ದ ನಿಂತ ನೀರಿನಲ್ಲೇ ಮಹಿಳೆಯ ಮೃತದೇಹವನ್ನು ಕೊಂಡೊಯ್ದರು.
ಬಾಣಂತಿಯರ ಪರದಾಟ: ತಾಲೂಕಿನ ಪೀರನವಾಡಿಯ ಪಾಟೀಲ ಗಲ್ಲಿಯಲ್ಲಿ ಇಬ್ಬರು ಬಾಣಂತಿಯರು ವಾಸವಿದ್ದ ಮನೆಗೂ ಮಳೆ ನೀರು ನುಗ್ಗಿದೆ. ಎರಡು ದಿನಗಳಿಂದ ಮನೆಯಲ್ಲಿನ ನೀರು ಹೊರ ಹಾಕಲು ಕುಟುಂಬ ಸದಸ್ಯರು ಹರಸಾಹಸಪಟ್ಟರು. ಬಾಣಂತಿಯರು ಹಾಗೂ ನವಜಾತ ಶಿಶುಗಳನ್ನು ಬಾಡಿಗೆ ಮನೆಗೆ ಸ್ಥಳಾಂತರಿಸಲಾಗಿದೆ. ನಾಗಲಿಂಗ ಹಿರೇಮಠ ಎಂಬವರ ಮನೆಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು. ಈ ಹಿಂದೆ ಇದೇ ಮನೆಯ ಗೋಡೆ ಕುಸಿದು ನಾಗಲಿಂಗ ಹಿರೇಮಠ ಅವರ ತಾಯಿ ಮೃತಪಟ್ಟಿದ್ದರು.
''ಇಬ್ಬರು ಬಾಣಂತಿಯರು ಮನೆಯಲ್ಲಿದ್ದಾಗಲೇ ನೀರು ನುಗ್ಗಿತು. ಅಡುಗೆ ವಸ್ತುಗಳೆಲ್ಲವೂ ನೀರು ಪಾಲಾಗಿವೆ. ಹೋಟೆಲ್‌ನಿಂದ ಅನ್ನ, ಸಾಂಬಾರು ತಂದು ಊಟ ಮಾಡುತ್ತಿದ್ದೇವೆ. ಇಡೀ ದಿನ ನೀರು ಹೊರಗೆ ಹಾಕುವುದೇ ನಮ್ಮ ಕೆಲಸವಾಗಿದೆ'' ಎಂದು ಸ್ಥಳೀಯ ನಿವಾಸಿ ಸರಸ್ವತಿ ಕುಲಕರ್ಣಿ ತಿಳಿಸಿದರು.
ಮೇಯರ್ ಭೇಟಿ: ಮಳೆಯಿಂದ ಅವಾಂತರ ಸೃಷ್ಟಿಯಾದ ನಗರದ ವಿವಿಧ ಬಡಾವಣೆಗಳಿಗೆ ಮೇಯರ್ ಸವಿತಾ ಕಾಂಬಳೆ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಸೇರಿ ಮತ್ತಿತರ ಅಧಿಕಾರಿಗಳು ಭೇಟಿ, ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಕಟ್ಟಿಗೆ ಸ್ಟ್ರೇಚರ್ ಮೇಲೆ ಆಸ್ಪತ್ರೆಗೆ ಸಾಗಿಸಿದ್ದ ಮಹಿಳೆ ಸಾವು: ಫಲಿಸಲಿಲ್ಲ ಖಾನಾಪುರ ಕಾಡಂಚಿನ ಗ್ರಾಮಸ್ಥರ ಹೋರಾಟ