ಬೆಂಗಳೂರು: ವಿಧಾನಪರಿಷತ್ತಿನ ಈಶಾನ್ಯ ಪದವೀಧರ ಕ್ಷೇತ್ರದಿಂದ ನಾಮಪತ್ರ ಹಿಂದಕ್ಕೆ ಪಡೆಯುವುದಾಗಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುರೇಶ್ ಸಜ್ಜನ್ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿ, ಆಕಾಂಕ್ಷಿಯಾಗಿದ್ದು, ಮೊನ್ನೆ ನಾಮಪತ್ರ ಸಲ್ಲಿಸಿದ್ದೆ. ಪಕ್ಷ ನಿಮ್ಮನ್ನು, ನಿಮ್ಮ ಸೇವೆಯನ್ನು ಮುಂದೆ ಗುರುತಿಸಲಿದೆ ಎಂದು ಹಿರಿಯ ನಾಯಕರಾದ ಯಡಿಯೂರಪ್ಪ ಅವರು ಹೇಳಿದ್ದಾರೆ. ಅಮರನಾಥ ಪಾಟೀಲರನ್ನು ಬೆಂಬಲಿಸಿ ಎಂದು ಪಕ್ಷದ ಇತರ ನಾಯಕರು ಸೂಚಿಸಿದ್ದಾರೆ. ಅವರ ಸೂಚನೆಯಂತೆ ಸೋಮವಾರ ಕಲಬುರ್ಗಿಗೆ ತೆರಳಿ ನಾಮಪತ್ರ ಹಿಂದಕ್ಕೆ ಪಡೆಯಲಿದ್ದೇನೆ ಎಂದು ಸುರೇಶ್ ಸಜ್ಜನ್ ಸ್ಪಷ್ಟಪಡಿಸಿದರು.
ಪಕ್ಷದ ಹಿರಿಯರು, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಚಿವ ರಾಜುಗೌಡ, ಎನ್.ರವಿಕುಮಾರ್, ಗೋವಿಂದ ಕಾರಜೋಳ ಅವರ ಆಶೀರ್ವಾದ ಪಡೆಯಲು ನಿಯೋಗದೊಂದಿಗೆ ಇಲ್ಲಿಗೆ ಬಂದಿದ್ದೆ. ನಾಮಪತ್ರ ವಾಪಸ್ ಪಡೆಯುವಂತೆ ಸೂಚಿಸಿದ್ದಾರೆ. ಅವರ ಮಾತಿಗೆ ಒಪ್ಪಿದ್ದೇನೆ ಎಂದು ತಿಳಿಸಿದರು. ಇಲ್ಲಿಗೆ ಬಂದಿದ್ದ ಮುಖಂಡರ ಜೊತೆ ಸಮಾಲೋಚನೆ ಮಾಡಿ ಈ ನಿರ್ಧಾರ ಮಾಡಿದ್ದಾಗಿ ವಿವರಿಸಿದರು.
ರಾಜ್ಯಾಧ್ಯಕ್ಷರು ಪಕ್ಷಕ್ಕಾಗಿ ಮಾಡುತ್ತಿರುವ ಹೋರಾಟ, ಸಂಘಟನಾ ಕಾರ್ಯಕ್ಕೆ ಅವರು ಮೆಚ್ಚುಗೆ ಸೂಚಿಸಿದರು. ನನಗೆ ಟಿಕೆಟ್ ಮುಖ್ಯವಲ್ಲ. ಪಕ್ಷದ ಅಭ್ಯರ್ಥಿಯ ಗೆಲುವೇ ಮುಖ್ಯ ಎಂದು ಅವರು ನುಡಿದರು. ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮುಂದೆ ಮುಖ್ಯಮಂತ್ರಿಯಾಗಲು ಅವರ ಕೈ ಬಲಪಡಿಸುವ ಅಗತ್ಯವಿದೆ. ಅಮರನಾಥ ಪಾಟೀಲ ಅವರ ಗೆಲುವಿಗೆ ನಾವೆಲ್ಲರೂ ಒಗ್ಗೂಡಿ ಶ್ರಮಿಸಲಿದ್ದೇವೆ ಎಂದು ತಿಳಿಸಿದರು.
ನೈರುತ್ಯ,ದಕ್ಷಿಣ ಕ್ಷೇತ್ರ: 33 ಅಭ್ಯರ್ಥಿಗಳ ನಾಮಪತ್ರ ಅಂಗೀಕೃತ: ಮೈಸೂರು ಕರ್ನಾಟಕ ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ ಕ್ಷೇತ್ರ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರಗಳ ಚುನಾವಣೆ ಸಂಬಂಧಿಸಿದಂತೆ ಮೇ 9 ರಿಂದ ಮೇ 16 ರವರೆಗೆ ಸ್ವೀಕೃತವಾದ ನಾಮಪತ್ರಗಳ ಪರಿಶೀಲನೆಯನ್ನು ಮೇ 17 ರಂದು ಬೆಳಗ್ಗೆ 11ಕ್ಕೆ ನಡೆಸಲಾಗಿದ್ದು, ನಾಮಪತ್ರಗಳ ಪರಿಶೀಲನೆಯಲ್ಲಿ ಕ್ಷೇತ್ರವಾರು, ನಾಮಪತ್ರ ಅಂಗೀಕಾರ ಮತ್ತು ತಿರಸ್ಕೃತ ಆಗಿರುವ ಪಟ್ಟಿ ಬಿಡುಗಡೆ ಮಾಡಲಾಗಿದೆ.
ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ 13 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 13 ಅಭ್ಯರ್ಥಿಗಳ ನಾಮಪತ್ರ ಅಂಗೀಕರವಾಗಿರುತ್ತದೆ. ನೈರುತ್ಯ ಪದವೀಧರರ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 11 ಅಭ್ಯರ್ಥಿಗಳ ನಾಮಪತ್ರ ಅಂಗೀಕರವಾಗಿರುತ್ತದೆ. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 9 ಅಭ್ಯರ್ಥಿಗಳ ನಾಮಪತ್ರ ಅಂಗೀಕರವಾಗಿವೆ. ಪಕ್ಷೇತರ ಅಭ್ಯರ್ಥಿಯಾದ ಎಂ.ಸತೀಶ್ ಕಾರಂತ್ ಅವರ ನಾಮಪತ್ರ ತಿರಸ್ಕೃತಗೊಂಡಿರುತ್ತದೆ. ಮೇ 17 ರಿಂದ ಮೇ 20 ರ ಮಧ್ಯಾಹ್ನ 3ರ ವರೆಗೆ ನಾಮಪತ್ರಗಳನ್ನು ಹಿಂಪಡೆಯಲು ಅವಕಾಶವಿರುತ್ತದೆ ಎಂದು ನೈರುತ್ಯ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರು ತಿಳಿಸಿದ್ದಾರೆ.
ಚುನಾವಣಾ ವೀಕ್ಷಕರ ನೇಮಕ : ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ನೈರುತ್ಯ ಪದವೀಧರರ ಕ್ಷೇತ್ರಗಳಿಂದ ಕರ್ನಾಟಕ ವಿಧಾನಪರಿಷತ್ತಿಗೆ ನಡೆಯಲಿರುವ ಚುನಾವಣೆ ಸಂಬಂಧ ಭಾರತ ಚುನಾವಣಾ ಆಯೋಗವು ಹಿರಿಯ ಐಎಎಸ್ ಅಧಿಕಾರಿಗಳನ್ನು ಚುನಾವಣಾ ವೀಕ್ಷಕರನ್ನಾಗಿ ನೇಮಕ ಮಾಡಿದೆ.
ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯ ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಟಿ.ಕೆ.ಅನಿಲ್ ಕುಮಾರ್ ಹಾಗೂ ಹರ್ಷ ಗುಪ್ತ ಅವರನ್ನು ಚುನಾವಣಾ ವೀಕ್ಷಕರಾಗಿ ನೇಮಿಸಲಾಗಿದೆ. ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕೆ.ರುದ್ರೇಶ್(9964174107), ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್(9448244340) ಅವರು ಸಹಾಯಕ ಅಧಿಕಾರಿಗಳಾಗಿರುತ್ತಾರೆ.
ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗೆ ಡಾ.ರವಿಶಂಕರ್ ಅವರನ್ನು ಚುನಾವಣಾ ವೀಕ್ಷಕರಾಗಿ ನೇಮಿಸಲಾಗಿದೆ. ಮೈಸೂರಿನ ಅಬಕಾರಿ ಉಪ ಆಯುಕ್ತರಾದ ಎಸ್.ನಾಗರಾಜಪ್ಪ(9449597178) ಅವರು ಸಹಾಯಕ ಅಧಿಕಾರಿಗಳಾಗಿರುತ್ತಾರೆ. ಮೂರು ಕ್ಷೇತ್ರಗಳ ಚುನಾವಣಾ ವೀಕ್ಷಕರು ಈಗಾಗಲೇ ಚುನಾವಣಾ ಕೆಲಸ-ಕಾರ್ಯಗಳ ವೀಕ್ಷಣೆ ನಡೆಸುತ್ತಿದ್ದು, ಚುನಾವಣೆ ವೀಕ್ಷಕರನ್ನು ಭೇಟಿ ಮಾಡಲು ಅಥವಾ ಸಂಪರ್ಕಿಸಲು ದೂ.ಸಂ 7204294565 ಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ವಿಧಾನ ಪರಿಷತ್ತಿನ ನೈರುತ್ಯ ಪದವೀಧರ ಕ್ಷೇತ್ರ, ನೈರುತ್ಯ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.