ಶಿವಮೊಗ್ಗ: "ಕೇಂದ್ರ ಸರ್ಕಾರದೊಂದಿಗೆ ರಾಜ್ಯ ಸರ್ಕಾರ ಸಂಘರ್ಷ ಮಾಡದೇ, ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಸಹಕಾರ ಬಯಸಿದರೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಂಬಂಧ ಉತ್ತಮವಾಗಿರುತ್ತದೆ" ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.
ಶಿವಮೊಗ್ಗ ಪ್ರೆಸ್ ಟ್ರಸ್ಟ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ರಾಜ್ಯದ ಅಭಿವೃದ್ಧಿಗಿಂತ ಬೇರೆ ವಿಚಾರಗಳಿಗೆ ಹೆಚ್ಚಿನ ಆದ್ಯಗೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಆಡಳಿತ ಪಕ್ಷದ ಅವಧಿ ಕೊನೆಯ ದಿನಗಳಲ್ಲಿ ವೈಪಲ್ಯದ ಬಗ್ಗೆ ಚರ್ಚೆ ನಡೆದರೆ, ರಾಜ್ಯ ಸರ್ಕಾರದ ವಿಚಾರದಲ್ಲಿ ಮೊದಲೇ ಪ್ರಾರಂಭವಾಗಿದೆ. ಸರ್ಕಾರದ ಅಕ್ರಮಗಳ ಹಾಗೂ ಹಗರಣಗಳ ಕುರಿತು ಜನ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ಗೆ ಮತ ನೀಡಿದರೆ ಬದಲಾವಣೆ ಆಗಬಹುದು ಎಂದು ರಾಜ್ಯದ ಜನ ಕಾಂಗ್ರೆಸ್ಗೆ ಒಂದು ಅವಕಾಶ ನೀಡಿದರು. ಆದರೆ, ಜನರನ್ನು ಕಾಂಗ್ರೆಸ್ ಸರ್ಕಾರ ಭ್ರಮನಿರಸನ ಮಾಡಿದೆ." ಎಂದು ಹೇಳಿದರು.
"ತುಮಕೂರಿನ ಕಾಂಗ್ರೆಸ್ನ ಓರ್ವ ವ್ಯಕ್ತಿ, ಸಿಎಂಗೆ ಹತ್ತಿರ ಇರುವವರೇ ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್ನಲ್ಲಿ ಕಮಿಷನ್ ಶೇ 40 ಮೀರಿ ಹೋಗಿದೆ ಎಂದು ಹೇಳಿದ್ದಾರೆ. ಈ ರೀತಿಯಾದರೆ ನಾಡಿನ ಜನತೆಯ ಹಣ ಹೇಗೆ ಅಭಿವೃದ್ಧಿಗೆ ಪೂರಕವಾಗುತ್ತದೆ?" ಎಂದು ಪ್ರಶ್ನಿಸಿದರು.
"ನಾನು ಗ್ಯಾರಂಟಿ ಯೋಜನೆ ಬಗ್ಗೆ ಟೀಕೆ ಮಾಡಲ್ಲ. ಕಾಂಗ್ರೆಸ್ ತಮ್ಮ ಭರವಸೆಯಂತೆ ರಾಜ್ಯದ ಇತರ ಅಭಿವೃದ್ಧಿ ಕಡೆ ಗಮನ ಹರಿಸದೆ, ಸುಮ್ಮನೆ ಕುಳಿತುಕೊಂಡಿದೆ. ಸರ್ಕಾರದಲ್ಲಿ ಹಲವಾರು ಸವಾಲುಗಳಿವೆ. ಇದುವರೆಗೂ ಒಬ್ಬ ಮಂತ್ರಿ ತಾನು ಇಂತಹ ಕೆಲಸ ಮಾಡುತ್ತೇನೆ ಎಂದು ಹೇಳುತ್ತಿಲ್ಲ. ಭ್ರಷ್ಟಚಾರದಲ್ಲಿಯೇ ತೊಡಗಿಕೊಂಡಿದ್ದಾರೆ. ನಿಗಮದಲ್ಲಿ ಹಲವಾರು ಕೋಟಿ ರೂ. ಭ್ರಷ್ಟಚಾರ ನಡೆದಿದೆ. ಚಂದ್ರಶೇಖರ್ ಡೆತ್ನೋಟ್ ಬರೆಯದೇ ಹೋಗಿದ್ದರೆ ಇವರ ಹಗರಣ ಹೊರಕ್ಕೆ ಬರುತ್ತಿರಲಿಲ್ಲ. ರಾಜ್ಯ ಸರ್ಕಾರದಿಂದ ಬಡವರ ಯೋಜನೆಯಲ್ಲೂ ಲೂಟಿ ಹೊಡೆಯಲಾಗುತ್ತಿದೆ. ನಾನು ಎರಡನೇ ಬಾರಿ ಸಿಎಂ ಆಗಿದ್ದನ್ನು ಸಹಿಸದೇ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಿದ್ದಾರೆ. ಸಿಎಂ ಬೆಳಗಾವಿಯಲ್ಲಿ ತಮ್ಮನ್ನು ರಾಯಣ್ಙನಿಗೆ ಹೋಲಿಕೆ ಮಾಡಿಕೊಂಡು ಸ್ವಪಕ್ಷದವರೇ ತಮ್ಮ ವಿರುದ್ಧ ಪಿತೂರಿ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದರಿಂದ ವಿರೋಧ ಪಕ್ಷದವರ ಪಾತ್ರ ಇಲ್ಲ ಎಂದು ಹೇಳಿದಂತೆ ಆಗಿದೆ. ಚುನಾವಣೆಗೂ ಮುನ್ನ ಜಾಹೀರಾತು ನೀಡಿದಂತೆ ನಡೆದುಕೊಳ್ಳುತ್ತಿದ್ದಾರೆಯೇ? ಎಂದು ಪ್ರಶ್ನಿಸಿದರು.
ಮುಡಾ ಹಗರಣದ ಕುರಿತು ಈಗ ನ್ಯಾಯಾಲಯದಲ್ಲಿ ವಾದ- ವಿವಾದ ಮುಗಿದು ಹೋಗಿದೆ. ಈಗ ಸಿಎಂ ಪರ ವಕೀಲರು ವಾದಕ್ಕೆ ಕಾಲಾವಕಾಶ ಕೇಳಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತವಾಗಿದೆ. ಹಿಮಾಚಲ ಪ್ರದೇಶದ ಆಡಳಿತವನ್ನು ಹೊಗಳಿ ಮಾತನಾಡುವ ಕಾಲ ಇತ್ತು. ಆದರೆ ಇಂದು ಮಂತ್ರಿ, ಶಾಸಕರ ಸಂಬಳವನ್ನೂ ಎರಡು ತಿಂಗಳಿನಿಂದ ನೀಡಿಲ್ಲ. ಅಲ್ಲಿ ಆರ್ಥಿಕ ಹೊರೆ ಉಂಟಾಗಿದೆ. ಅಲ್ಲಿನ ಸರ್ಕಾರ ದಯನಿಯ ಸ್ಥಿತಿಯಲ್ಲಿದೆ. ಸಮಾನತೆಗಾಗಿ ಗ್ಯಾರಂಟಿ ಯೋಜನೆ ಜಾರಿ ಎನ್ನುತ್ತಿದ್ದಾರೆ. ಸಿಎಂ ಸೇರಿ ಅನುಭವಸ್ಥರಿದ್ದೀರಿ. ನೀವು ರಾಜ್ಯವನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ?" ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.
ಹೆಚ್ಎಂಟಿ ಹಾಗೂ ವಿಐಎಸ್ಎಲ್ ಉಳಿಸುವ ಪ್ರಯತ್ನ: "ಹೆಚ್ಎಂಟಿ ಕಂಪನಿಗೆ ಜೀವ ಕೊಡಲು ಹೋದ್ರೆ, ಅದರ ಜೀವವನ್ನು ರಾಜ್ಯ ಸರ್ಕಾರ ತೆಗೆದಿದ್ದಾರೆ. ಅಲ್ಲಿ 200 ಎಕರೆ ಜಮೀನು ಮಾರಾಟ ಮಾಡಲಾಗಿದೆ. ನನಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಭಿವೃದ್ಧಿ ಮಾಡಲು ಯತ್ನಿಸುತ್ತಿದ್ದೇನೆ. ವಿಐಎಸ್ಎಲ್ ಅನ್ನು ಮಾರಾಟ ಮಾಡಬೇಕೆಂದು ಇದ್ದಾರೆ. ಕಾರ್ಖಾನೆ ಉಳಿಸಲು ಎಷ್ಟು ಪ್ರಯತ್ನ ಮಾಡುತ್ತಿದ್ದೇನೆ ಎನ್ನುವುದು ನನಗೆ ಗೊತ್ತಿದೆ. ನಷ್ಟದ ಕಾರ್ಖಾನೆಯನ್ನು ಮುಚ್ಚುವ ನೀತಿಯಿಂದ ಅದನ್ನು ಉಳಿಸಲು ಪ್ರಯತ್ನಿಸುತ್ತಿದ್ದೇನೆ. ಏನೇ ಕಷ್ಟವಾದರೂ ವಿಐಎಸ್ಎಲ್ ಕಾರ್ಖಾನೆಯನ್ನು ಉಳಿಸುತ್ತೇನೆ" ಎಂದರು.
"ನಮ್ಮ ಇಲಾಖೆಗೆ ದೊಡ್ಡಮಟ್ಟದ ಹಣ ಬರುವುದಿಲ್ಲ. ಕಾರ್ಖಾನೆ ಪುನರ್ಜೀವನ ಮಾಡಲು 10-15 ಸಾವಿರ ಕೋಟಿ ರೂ. ಬೇಕಿದೆ. ನಾನು ಸೈಲ್ನಿಂದ ಕಾರ್ಖಾನೆಯನ್ನು ಅಭಿವೃದ್ಧಿ ಮಾಡಲು ಯತ್ನಿಸುತ್ತಿದ್ದೇನೆ. ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕಿದೆ. ವೈಜಾಗ್ 6 ಸಾವಿರ ಎಕರೆ ಭೂಮಿಯಲ್ಲಿದೆ. ಇದು 12 ವರ್ಷ ನಿರಂತರ ಲಾಭದಲ್ಲಿತ್ತು. ಆದರೆ, ಈಗ ಅದು ನಷ್ಟದ ಹಾದಿಯಲ್ಲಿದೆ. ಅಲ್ಲಿ ಕಾರ್ಖಾನೆಯನ್ನು ಮಾರಲು ಸ್ಥಳೀಯರು ವಿರೋಧ ಮಾಡುತ್ತಿದ್ದಾರೆ. ನನಗೆ ನೀಡಿರುವ ಎರಡು ಖಾತೆಗಳಿಂದ ಪಿಎಂ, ದೇಶ ಹಾಗೂ ರಾಜ್ಯಕ್ಕೆ ಗೌರವ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇನೆ. ಕೈಗಾರಿಕೆ ತರುವುದೆಂದರೆ ವಿಮಾನ ತಂದ ಹಾಗಲ್ಲ" ಎಂದು ಕಿಡಿಕಾರಿದರು.
ನಾನು ಸಿಎಂ ಆದಾಗ ಕೇಂದ್ರದೊಂದಿಗೆ ಉತ್ತಮ ಸಂಬಂಧ ಹೊಂದಿದ್ದೆ: ರಾಜಕಾರಣ ಏನೇ ಇರಲಿ, ಅದನ್ನು ಬದಿಗಿಟ್ಟು ರಾಜ್ಯದ ಅಭಿವೃದ್ಧಿಗೆ ಸಹಕಾರ ನೀಡಬೇಕಿದೆ. ನಾನು ಎರಡು ಬಾರಿ ಸಿಎಂ ಆಗಿದ್ದರೂ ಸಹ ಕೇಂದ್ರದ ಜೊತೆ ಸಂಘರ್ಷ ಮಾಡಲಿಲ್ಲ. ಆದರೆ, ರಾಜ್ಯ ಸರ್ಕಾರ ಇದನ್ನು ಮಾಡುತ್ತಿಲ್ಲ. ಪಿಎಂ ಮೋದಿ ವಿಕಸಿತ ಭಾರತ ಕನಸನ್ನು ಕಂಡಿದ್ದಾರೆ. ಆದರೆ, ಕೇಂದ್ರದ ಕೆಲ ನೀತಿ ನಿಯಮಗಳ ಕುರಿತು ಎಲ್ಲರ ಮನವೊಲಿಸಿ ಕೆಲಸ ಮಾಡಬೇಕಿದೆ. ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ಮಾಡುತ್ತಿದೆ. ಆದರೆ ಇದಕ್ಕೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ" ಎಂದರು.
ಜೆಡಿಎಸ್ - ಬಿಜೆಪಿ ಮೈತ್ರಿ ಮುಂದುವರೆಯಲಿದೆ: "ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿಯ ಮೈತ್ರಿ ಹೀಗೆ ಮುಂದುರೆಯಲಿದೆ. ಚನ್ನಪಟ್ಟಣ ಚುನಾವಣೆ ಇನ್ನೂ ಮುಂದೆ ಇದೆ ನೋಡೋಣ" ಎಂದು ಹೇಳಿದರು.
ನಾನು ಸಿಎಂ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಟವಲ್ ಹಾಕುತ್ತಿದ್ದಾರೆ: "ನಮ್ಮದು ಇತಿಹಾಸಿಕ ಪಕ್ಷ ಎಂದು ಹೇಳುತ್ತಿದ್ದಾರೆ. ನಾನು ಸಿಎಂ ಸ್ಥಾನದ ಆಕಾಂಕ್ಷಿ ಅಲ್ಲ ಎಂದರು ಹೇಳುತ್ತಲೇ ಸಿಎಂ ಸೀಟ್ಗೆ ಟವಲ್ ಹಾಕುತ್ತಿದ್ದಾರೆ" ಎಂದು ಸಿಎಂ ರೇಸ್ನಲ್ಲಿ ಇರುವವರ ಕುರಿತು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ರಾಜ್ಯ ಮುಖಂಡ ಕೆ.ಬಿ.ಪ್ರಸನ್ನ ಕುಮಾರ್, ಶಾಸಕಿ ಶಾರದ ಪೂರ್ಯ ನಾಯ್ಕ ಇತರರಿದ್ದರು.
ಇದನ್ನೂ ಓದಿ: ಕೋವಿಡ್ ರಿಪೋರ್ಟ್ನಂತೆ ಕೆಂಪಣ್ಣ ವರದಿಯನ್ನೂ ಕ್ಯಾಬಿನೆಟ್ನಲ್ಲಿ ಚರ್ಚಿಸಲಿ: ಹೆಚ್.ಡಿ. ಕುಮಾರಸ್ವಾಮಿ - H D Kumaraswamy