ಬೆಂಗಳೂರು: ಮುಡಾ ಅಕ್ರಮ ಆರೋಪ ಸಂಬಂಧ ನಾಳೆಯಿಂದ ಬಿಜೆಪಿ ಜೆಡಿಎಸ್ ಹಮ್ಮಿಕೊಂಡಿರುವ ಪಾದಯಾತ್ರೆಯ ರೂಪುರೇಷೆಗಳ ಕುರಿತು ಇದುವರೆಗೂ ಯಾವುದೇ ಮಾಹಿತಿಯಿಲ್ಲ. ಜೊತೆಗೆ ಪಾದಯಾತ್ರೆಗೆ ನನ್ನ ಮಟ್ಟದಲ್ಲಿ ಯಾರು ಬಂದು ಇದುವರೆಗೂ ಅನುಮತಿ ಕೇಳಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಬಿಜೆಪಿ ಜೆಡಿಎಸ್ ಪಾದಯಾತ್ರೆಯ ಕುರಿತು ಪ್ರತಿಕ್ರಿಯೆ ನೀಡಿದ ಬೆಂಗಳೂರು ಪೊಲೀಸ್ ಆಯುಕ್ತರು, ರಾಜ್ಯ ಹೈಕೋರ್ಟಿನ ಆದೇಶದನ್ವಯ ನಗರದಲ್ಲಿ ಪ್ರತಿಭಟನೆ, ರ್‍ಯಾಲಿ, ಪಾದಯಾತ್ರೆಗೆ ಅನುಮತಿ ಇಲ್ಲ. ಆದರೂ ಸಹ ಪೂರಕವಾಗಿ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.
ಪಾದಯಾತ್ರೆಗೆ ನನ್ನ ಮಟ್ಟದಲ್ಲಿ ಯಾರು ಬಂದು ಇದುವರೆಗೂ ಅನುಮತಿ ಕೇಳಿಲ್ಲ. ಪ್ರತಿಭಟನೆಗೆ ಬೆಂಗಳೂರಿನಲ್ಲಿ ಯಾವುದೇ ಅವಕಾಶವಿಲ್ಲ. ಎಲ್ಲಿಂದ, ಯಾವ ರೀತಿ ಪಾದಯಾತ್ರೆ ಮಾಡುತ್ತಾರೆ ಎಂಬುದು ಇನ್ನೂ ಸಹ ಗೊತ್ತಿಲ್ಲ. ನಾವು ಪೂರಕವಾದ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ದಲ್ಲಿನ ಅಕ್ರಮ ಆರೋಪ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ಆಗಸ್ಟ್ 3 ರಿಂದ ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಪಾದಯಾತ್ರೆಗೆ ಸರ್ಕಾರದಿಂದ ಅನುಮತಿ ನೀಡುವುದಿಲ್ಲ, ಆದರೆ ಪಾದಯಾತ್ರೆಗೆ ಯಾವುದೇ ಅಡ್ಡಿ ಮಾಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಈ ಮೊದಲು ಸ್ಪಷ್ಟಪಡಿಸಿದ್ದರು.
ಶನಿವಾರ ಬೆಳಗ್ಗೆ 8:30ಕ್ಕೆ ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ನಾಯಕರ ಪಾದಯಾತ್ರೆ ಆರಂಭವಾಗಲಿದೆ. ಜೆಡಿಎಸ್ ಜೊತೆಗಿನ ಗೊಂದಲಗಳೇನೇ ಇದ್ದರೂ ಕುಮಾರಸ್ವಾಮಿ ಅವರು ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಎರಡೂ ಪಕ್ಷಗಳ ಸಂಸದರು, ಶಾಸಕರು ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಗುರುವಾರ ಮಾಹಿತಿ ನೀಡಿದ್ದರು.
ವಾಲ್ಮೀಕಿ ನಿಗಮ ಮತ್ತು ಮುಡಾ ಹಗರಣವನ್ನು ಮುಂದಿಟ್ಟು ಬಿಜೆಪಿ ಮತ್ತು ಜೆಡಿಎಸ್ ಸದನದಲ್ಲಿ ಒಟ್ಟಾಗಿ ಹೋರಾಟ ಮಾಡುತ್ತಿವೆ. ಸದನ ಮುಗಿದ ಬಳಿಕ ಈ ಹೋರಾಟ ಮುಂದುವರೆಸಲು ನಿರ್ಧರಿಸಲಾಗಿತ್ತು. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್‌ದಾಸ್ ಅಗರ್ವಾಲ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಹಲವು ನಾಯಕರು ಈ ಬಗ್ಗೆ ಚರ್ಚಿಸಿದ್ದು, ಆಗಸ್ಟ್ 3 ರಂದು ನೈಸ್ ರಸ್ತೆ ಜಂಕ್ಷನ್‌ನಿಂದ ಪಾದಯಾತ್ರೆ ಹೊರಡಲಿದೆ ಎಂದು ಬಿ.ವೈ ವಿಜಯೇಂದ್ರ ಪ್ರಕಟಿಸಿದ್ದರು.
ಕಾಂಗ್ರೆಸ್ನಿಂದ ಕೌಂಟರ್: ಬಿಜೆಪಿ ಜೆಡಿಎಸ್ ಪಾದಯಾತ್ರೆಗೆ ಕಾಂಗ್ರೆಸ್ ಕೌಂಟರ್ ಕೊಡಲು ಸಜ್ಜಾಗಿದೆ. ಪಾದಯಾತ್ರೆ ಹೋಗುವ ಕಡೆಯಲ್ಲೆಲ್ಲ ಒಂದು ದಿನ ಮುಂಚಿತವಾಗಿಯೇ ನೈತಿಕತೆ ಪ್ರಶ್ನೆ ಸಭೆ ನಡೆಸಿ, ಬಿಜೆಪಿ ನಾಯಕರಿಗೆ ತಿರುಗೇಟು ನೀಡುವ ತಂತ್ರವನ್ನು ಕಾಂಗ್ರೆಸ್ ನಾಯಕರು ಹೆಣೆದಿದ್ದಾರೆ.
ಇದನ್ನೂ ಓದಿ: ಬಿಜೆಪಿ ಪಾದಯಾತ್ರೆಗೆ ಕೌಂಟರ್; ಕಾಂಗ್ರೆಸ್ನಿಂದ ನೈತಿಕತೆ ಪ್ರಶ್ನೆಯ ಸಭೆ - Congress Counter to BJP