ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳದ ಕುರಿತು ಇತ್ತೀಚೆಗೆ ಕೆಲ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಆಸ್ತಿ ತೆರಿಗೆ ಹೆಚ್ಚಳದ ಸಂಬಂಧ ಯಾವುದೇ ಪ್ರಸ್ತಾವನೆಯಾಗಲಿ, ಚಿಂತನೆಯಾಗಲಿ ಇರುವುದಿಲ್ಲವೆಂದು ಬಿಬಿಎಂಪಿ ಸ್ಪಷ್ಟನೆ ನೀಡಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ವಿಚಾರವಾಗಿ ಯಾವುದೇ ಪ್ರಸ್ತಾವನೆ ಇರುವುದಿಲ್ಲ. ಈ ರೀತಿಯ ಊಹಾಪೋಹಗಳಿಗೆ ಯಾರೂ ಕಿವಿಗೊಡಬಾರದು ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.
ಆಸ್ತಿ ತೆರಿಗೆ ಬಗ್ಗೆ ಡಿಕೆಶಿ ಇತ್ತೀಚೆಗೆ ಹೇಳಿದ್ದೇನು?: ''ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿ ತೆರಿಗೆ ಪಾವತಿಸಲು ಒಂದು ಬಾರಿ ಪರಿಹಾರ ಯೋಜನೆಯನ್ನು (OTS) ಜಾರಿಗೊಳಿಸಲಾಗಿದೆ. ಜು.31ರವರೆಗೆ ಒಟಿಎಸ್ ಉಪಯೋಗ ಪಡೆಯಬಹುದಾಗಿದೆ. ಬಳಿಕ ಯಾವುದೇ ಕಾರಣಕ್ಕೂ ಅವಧಿ ವಿಸ್ತರಣೆ ಮಾಡುವುದಿಲ್ಲ'' ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ಸ್ಪಷ್ಟಪಡಿಸಿದ್ದರು.
''ಬಿಬಿಎಂಪಿ ಕಾಯ್ದೆಯಲ್ಲಿ ಆಸ್ತಿ ತೆರಿಗೆ ಬಾಕಿ ವಸೂಲಾತಿಗೆ ಅವಕಾಶ ಇದೆ. ಆದಾಗ್ಯೂ ನಾಗರಿಕರಿಗೆ ಸಹಾಯ ಮಾಡಲು ಸರ್ಕಾರ ಮತ್ತು ಬಿಬಿಎಂಪಿ ಒಟಿಎಸ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಈ ವ್ಯವಸ್ಥೆ ಅಡಿ ಆಸ್ತಿ ತೆರಿಗೆಯ ಬಾಕಿಯ ಮೇಲೆ ಪಾವತಿಸಬೇಕಾದ ಬಡ್ಡಿಯನ್ನು ಮನ್ನಾ ಮಾಡಲಾಗಿದೆ. ಜೊತೆಗೆ ದಂಡವನ್ನು ಅರ್ಧಕ್ಕೆ ಇಳಿಕೆ ಮಾಡಲಾಗಿದೆ. ಇದರ ಅನುಕೂಲವನ್ನು ಬೆಂಗಳೂರಿಗರು ಇದರ ಲಾಭವನ್ನು ಪಡೆಯಬೇಕು'' ಎಂದು ತಿಳಿಸಿದರು.
ಒನ್ ಟೈಂ ಸೆಟಲ್ ಮೆಂಟ್ ವ್ಯವಸ್ಥೆ: ''ನಮಗೆ ಒಟ್ಟು ₹5,230 ಕೋಟಿ ಆಸ್ತಿ ತೆರಿಗೆ ಬರಬೇಕಿದೆ. ಬೆಂಗಳೂರಲ್ಲಿ 20 ಲಕ್ಷ ಆಸ್ತಿಗಳನ್ನು ಗುರುತು ಮಾಡಿದ್ದೇವೆ. ಈಗಾಗಲೇ 8.6 ಲಕ್ಷ ಆಸ್ತಿದಾರರು ತೆರಿಗೆ ಪಾವತಿ ಮಾಡಿದ್ದಾರೆ. ಈವರೆಗೆ ₹1,300 ಕೋಟಿ ಆಸ್ತಿ ತೆರಿಗೆ ಪಾವತಿ ಮಾಡಿದ್ದಾರೆ. ಇನ್ನೂ ₹3,900 ಕೋಟಿ ಆಸ್ತಿ ತೆರಿಗೆ ಪಾವತಿಯಾಗಬೇಕಿದೆ. ಜು.31ರೊಳಗೆ ಒನ್ ಟೈಂ ಸೆಟಲ್ ಮೆಂಟ್ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ಈ ಯೋಜನೆ ಜಾರಿಗೆ ಬಂದ ನಂತರ ಇಲ್ಲಿಯವರೆಗೆ 4 ಲಕ್ಷ ಸುಸ್ತಿದಾರರು ಸುಮಾರು 50 ಸಾವಿರ ಜನರು ಮಾತ್ರ ತೆರಿಗೆ ಪಾವತಿಸಿದ್ದಾರೆ. ಜು.31ರ ನಂತರ ಬಳಿಕ ಈ ಯೋಜನೆಯನ್ನು ವಿಸ್ತರಣೆ ಮಾಡುವುದಿಲ್ಲ. ನಿಗದಿತ ಸಮಯದೊಳಗೆ ಸಾರ್ವಜನಿಕರು ಇದರ ಅನುಕೂಲ ಪಡೆದುಕೊಳ್ಳಬೇಕು. ನಂತರ ಅವಧಿಯನ್ನು ವಿಸ್ತರಿಸಲಾಗುವುದಿಲ್ಲ. ನಾಗರಿಕರು ಆನ್ಲೈನ್ನಲ್ಲಿ ಆಸ್ತಿ ತೆರಿಗೆಯನ್ನು ಸುಲಭವಾಗಿ ಪಾವತಿಸಲು ವೆಬ್ಸೈಟ್- https://bbmptax.karnataka.gov.in ಅನ್ನು ಬಳಸಬಹುದು'' ಎಂದು ಮಾಹಿತಿ ನೀಡಿದ್ದರು.
ಇದನ್ನೂ ಓದಿ: ತ್ಯಾಜ್ಯಗಳ ನಿಯಂತ್ರಣ, ನಿರ್ವಹಣೆಗೆ ಪ್ರತಿ ತಿಂಗಳು ಜಾಗೃತಿ ಮಾಸಾಚರಣೆ: ಸಚಿವ ಈಶ್ವರ್ ಖಂಡ್ರೆ - Eshwar Khandre