ಬೆಂಗಳೂರು : ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸುಮಾರು 8035.09 ಕೋಟಿ ರೂ. ಬಡ್ಡಿ ರಹಿತ ಸಾಲ ಕೊಡಲಾಗಿದೆ. ಆದರೆ, ಇದನ್ನು ಕಾಂಗ್ರೆಸ್ ನವರು ಎಲ್ಲೂ ಮಾತನಾಡಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಕ್ರೋಶ ಹೊರಹಾಕಿದ್ದಾರೆ.
ಮಲ್ಲೇಶ್ವರದಲ್ಲಿರುವ ಮಾಧ್ಯಮ ಕೇಂದ್ರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, 15ನೇ ಹಣಕಾಸು ಆಯೋಗ ತನ್ನ ಮಧ್ಯಂತರ ವರದಿಯಲ್ಲಿ 5495 ವಿಶೇಷ ಅನುದಾನ ಕೊಡಬೇಕು ಅಂತ ಶಿಫಾರಸ್ಸು ಮಾಡಿದ್ದು ಹೌದು. ಆದರೆ, ಅಂತಿಮ ವರದಿಯಲ್ಲಿ ಆ ಶಿಫಾರಸು ಇರಲಿಲ್ಲ. ಹಾಗಾಗಿ ಆ ವಿಶೇಷ ಅನುದಾನ ಕರ್ನಾಟಕಕಕ್ಕೆ ಕೊಡುವ ಪ್ರಶ್ನೆಯೇ ಬರಲ್ಲ. ಮತ್ತೊಂದು 6000 ಸಾವಿರ ಕೋಟಿ ರೂ. ವಿಶೇಷ ಅನುದಾನ ಕೊಡಬೇಕು ಅಂತಾರೆ, ಅದು ಸುಳ್ಳು. ಹಣಕಾಸು ಆಯೋಗ ಹೇಳದೇ ಹೋದರೂ ರಾಜ್ಯಕ್ಕೆ ಕೇಂದ್ರ 8035.09 ಕೋಟಿ ರೂ. ಬಡ್ಡಿರಹಿತ ಸಾಲ ಕೊಡಲಾಗಿದೆ. ಆದರೆ, ಈ ಬಗ್ಗೆ ಕಾಂಗ್ರೆಸ್ ಎಲ್ಲೂ ಪ್ರಸ್ತಾಪ ಮಾಡಿಲ್ಲ ಎಂದು ತಿರುಗೇಟು ನೀಡಿದರು.
ರಾಜ್ಯ ಸರ್ಕಾರ ಜಲ ಯೋಜನೆಗಳಿಗೆ ಉತ್ತೇಜನ ಕೊಟ್ಟಿಲ್ಲ. ಸುಮಾರು 20 ಸಾವಿರ ಕೋಟಿ ಮೊತ್ತದ ನೀರಾವರಿ ಯೋಜನೆಗಳು ಸ್ಥಗಿತವಾಗಿವೆ. ಇದೀಗ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ರಾಜ್ಯಾದ್ಯಂತ ನೀರಿನ ಸಮಸ್ಯೆ ಸೃಷ್ಟಿಯಾಗಿದೆ. ಕಾಲರಾ ಸೇರಿದಂತೆ ಕೆಲ ಕಾಯಿಲೆಗಳು ಹಬ್ಬುವ ಆತಂಕ ಇದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್ ದುರದೃಷ್ಟಕರ : ಬೆಂಗಳೂರಿನ ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ ಬಳಿಕ ಇಲ್ಲಿನ ಆರೋಗ್ಯ ಸಚಿವರು ಪ್ರಕರಣದ ಸಾಕ್ಷಿಯೊಬ್ಬರ ಮಾಹಿತಿ ಬಹಿರಂಗಪಡಿಸಿದ್ದು ಸರಿಯಲ್ಲ. ಸಾಕ್ಷಿಗಳ ರಕ್ಷಣೆ ಮಾಡಬೇಕೆಂಬ ಕನಿಷ್ಟ ಜ್ಞಾನ ಇಲ್ಲವಾ ಇವರಿಗೆ? ಜವಾಬ್ದಾರಿ ಇಲ್ವಾ?. ಕಾಂಗ್ರೆಸ್ ನಿಂದ ಓಲೈಕೆ ರಾಜಕಾರಣ ನಡೆಯುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಟೀಕಿಸಿದರು.
ವಿಧಾನಸೌಧಲ್ಲಿ ಪಾಕ್ ಪರ ಘೋಷಣೆ ಪ್ರಕರಣ ನಡೆಯಬಾರದಾಗಿತ್ತು. ಈ ಪ್ರಕರಣದಲ್ಲಿ ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಚಾಮರಾಜಪೇಟೆಯಲ್ಲಿ ಪಶುಸಂಗೋಪನೆ ಇಲಾಖೆ ಜಮೀನು ಅಲ್ಪಸಂಖ್ಯಾತ ಇಲಾಖೆಗೆ ಕೊಟ್ಟಿದ್ದೇಕೆ?, ಇದು ಓಲೈಕೆ ರಾಜಕಾರಣ ಅಲ್ವಾ?
ಮಹಿಳೆಯರ ರಕ್ಷಣೆಗೆ ಸರ್ಕಾರ ಆದ್ಯತೆ ನೀಡಿಲ್ಲ. ದಾವಣಗೆರೆ ಬಿಜೆಪಿ ಅಭ್ಯರ್ಥಿ ಬಗ್ಗೆ ಕಾಂಗ್ರೆಸ್ ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹೇಳಿಕೆಯನ್ನು ಯಾರೂ ಒಪ್ಪಲ್ಲ. ಮಹಿಳೆಯರ ಕುರಿತು ಅವರ ದೃಷ್ಟಿಕೋನ ಏನು ಅನ್ನುವುದು ಇದರಿಂದ ಗೊತ್ತಾಗುತ್ತದೆ. ಶಾಮನೂರು ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದು ನಿರ್ಮಲಾ ಸೀತಾರಾಮನ್ ಕಿಡಿಕಾರಿದರು.
ಕಾಂಗ್ರೆಸ್ ಪ್ರಣಾಳಿಕೆ ಅವೈಜ್ಞಾನಿಕ : ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಜಾರಿ ಮಾಡಲಾಗದ ಘೋಷಣೆಗಳಿವೆ. ಹಣಕಾಸು ಮುಗ್ಗಟ್ಟು ಎದುರಾಗುವಂತಹ ಫ್ರೀ ಸ್ಕೀಮ್ ಗಳನ್ನು ಘೋಷಿಸಲಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಘೋಷಿಸಿರುವ ಉಚಿತ ಸ್ಕೀಂಗಳನ್ನು ಇನ್ನೂ ಜಾರಿ ಮಾಡಲು ಅವರಿಗೆ ಆಗಿಲ್ಲ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅವೈಜ್ಞಾನಿಕವಾಗಿ ಘೋಷಣೆಗಳಿವೆ. ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ನಿರ್ಮಲಾ ಸೀತಾರಾಮನ್ ಅಸಮಾಧಾನ ವ್ಯಕ್ತಪಡಿಸಿದರು.
ಬರ ಪರಿಹಾರ ವಿಳಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್, ದೇಶದಲ್ಲಿ 12 ರಾಜ್ಯಗಳಲ್ಲಿ ನೈಸರ್ಗಿಕ ವಿಕೋಪಗಳಾಗಿವೆ. ಎಸ್‌ಡಿಆರ್‌ಎಫ್ ಅಡಿ 929.60 ಅನುದಾನ ಇದೆ. ಇದರಲ್ಲಿ 697 ಕೋಟಿ ರೂ. ಕೇಂದ್ರ ಪಾಲು ಕೊಡಲಾಗಿದೆ. ಈ ಹಣ ಮುಂಚಿತವಾಗಿಯೇ ಬಿಡುಗಡೆ ಮಾಡಲಾಗಿದೆ. ಬರಕ್ಕೆ ಕೇಂದ್ರ ಹಣ ಕೊಟ್ಟಿಲ್ಲ ಅಂತಾರೆ, ಆದರೆ ಈಗಾಗಲೇ ಎಸ್‌ಡಿಆರ್‌ಎಫ್ ನಲ್ಲಿ ಹಣ ಇದೆ. ಈಗ ಪ್ರಸ್ತಾವನೆ ಸಲ್ಲಿಸಿರುವ ಪರಿಹಾರವೂ ಬರಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಬರ ಪರಿಹಾರ ವಿಳಂಬ ಮಾಡಲ್ಲ. ಈಗಾಗಲೇ ತೆರಿಗೆ ಹಂಚಿಕೆ ಕಳೆದ ಮಾರ್ಚ್ ವರೆಗೆ ಪೂರ್ಣ ಕೊಡಲಾಗಿದೆ. ನಾಲ್ಕು ಪಟ್ಟು ಹೆಚ್ಚು ಕೊಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯಸಭೆ ಸದಸ್ಯ ಲೆಹರ್ ಸಿಂಗ್ ಉಪಸ್ಥಿತರಿದ್ದರು.