ರಾಮನಗರ : ಜನರ ತೀರ್ಮಾನಕ್ಕೆ ತಲೆ ಬಾಗುವೆ. ಸೋಲಿನಿಂದ ನಾನು ಎದೆಗುಂದುವ ಪ್ರಶ್ನೆಯೇ ಇಲ್ಲ. ಸೋಲು ಗೆಲುವನ್ನ ನಾನು ಸಮಾನವಾಗಿ ಸ್ವೀಕಾರ ಮಾಡುತ್ತೇನೆ ಎಂದು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ರಾಮನಗರದ ಬಿಡದಿ ತೋಟದ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜಿಲ್ಲೆಯಲ್ಲಿ ಎಲ್ಲರಿಗೂ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಜನರ ಪ್ರೀತಿ, ವಾತ್ಸಲ್ಯ ಸಿಕ್ಕಿದೆ. ನಾನು ಈ ಜಿಲ್ಲೆಯ ಮಗ ಅಂತ ಭಾವಿಸುತ್ತೇನೆ. ಚನ್ನಪಟ್ಟಣ ಫಲಿತಾಂಶ ಆಘಾತ ತಂದಿದೆ. ಒಬ್ಬ ಯುವಕನಿಗೆ 87 ಸಾವಿರ ಮತ ಬಂದಿದೆ. ಇದು ಬಯಸದೇ ಬಂದ ಚುನಾವಣೆ. ನಿಮ್ಮ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.
ಜನ ಈಗಾಗಲೇ ತೀರ್ಪನ್ನ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜನರ ತೀರ್ಮಾನವೇ ಅಂತಿಮ. ಅದಕ್ಕೆ ನಾವು ತಲೆಬಾಗಬೇಕಾಗುತ್ತೆ. ಎಲ್ಲಿ ನಾವು ಎಡವಿದ್ದೇವೆ, ಎಲ್ಲಿ ಮುಂದೆ ಸರಿಪಡಿಸಿಕೊಂಡು ಹೋಗಬೇಕು ಎಂಬಂತಹ ವಿಷಯಗಳ ಬಗ್ಗೆ ನಾವೇ ಕುಳಿತುಕೊಂಡು ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸುತ್ತೇವೆ ಎಂದರು.
ಎಲ್ಲರ ಜೊತೆಯಲ್ಲಿಯೂ ಇದ್ದೇವೆ: ಪಕ್ಷ ಇದ್ದರೆ ನಿಖಿಲ್ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿಯಿಂದ ಪಕ್ಷವಲ್ಲ. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಚಿಂತನೆ ಮಾಡುತ್ತೇನೆ ಎಂದರು. ನಾವು ಚುನಾವಣೆ ಸಂದರ್ಭದಲ್ಲಿ ಹೇಳಿದ್ವಿ, ಒಂದೂವರೆ ಕೋಟಿಯಷ್ಟು ಅನುದಾನ ತಂದು ಚನ್ನಪಟ್ಟಣ ನಗರದ ಅಭಿವೃದ್ಧಿಗೆ ಹೂಡಿಕೆ ಮಾಡಿದ್ವಿ. ಆದರೆ ನಮ್ಮಲ್ಲಿ ಪ್ರಚಾರದ ಕೊರತೆ. ನಾವು ಪ್ರಚಾರ ಪಡೆದುಕೊಳ್ಳಲು ಹೋಗಲಿಲ್ಲ. ಅದು ಬಹುಶಃ ನಮ್ಮಲ್ಲಿರುವ ದೊಡ್ಡ ಲೋಪ ದೋಷ ಎಂದು ನಮಗೆ ಅರಿವಾಗಿದೆ. ನಾವು ಒಂದು ಸಮುದಾಯದ, ಒಂದು ಜಾತಿಯ ಪರವಾಗಿ ಕೆಲಸ ಮಾಡಿಲ್ಲ, ಎಲ್ಲರ ಜೊತೆಯಲ್ಲಿಯೂ ಇದ್ದೇವೆ. ಮುಂದೆಯೂ ಇರುತ್ತೇವೆ ಎಂದು ಹೇಳಿದರು.
ಅಧಿಕಾರ, ಹಣಬಲ, ತೋಳ್ಬಲ ಯಾರಿಗೆ ಎಷ್ಟಿದೆ ಎಂಬುದು ಜಗಜ್ಜಾಹೀರ. ಈ ಚುನಾವಣೆಯಲ್ಲಿ ದುಡ್ಡು ಕಾಸಿನ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ಮುಂದಿನ ದಿನಗಳಲ್ಲಿ ಇವುಗಳಿಗೆ ಕಡಿವಾಣ ಹಾಕಬೇಕು ಎಂದರು.
ಅಭಿವೃದ್ಧಿ ಕಾರ್ಯದಲ್ಲಿ ತೊಡಗುತ್ತೇನೆ : ಜೆಡಿಎಸ್, ಬಿಜೆಪಿ ಕಾರ್ಯಕರ್ತರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಹೆಚ್. ಡಿ ದೇವೇಗೌಡರು ಮತ್ತು ಹೆಚ್. ಡಿ ಕುಮಾರಸ್ವಾಮಿ ಅವರನ್ನು ಬೆಳೆಸಿದ್ದು ರಾಮನಗರ ಜಿಲ್ಲೆಯ ಜನರು. ನಾನು ರಾಮನಗರದಲ್ಲಿ ಜನಿಸಿಲ್ಲ. ಆದರೆ ಭಾವನಾತ್ಮಕ ಸಂಬಂಧ ಹೊಂದಿದ್ದೇನೆ. ನಾನು ಕುಮಾರಸ್ವಾಮಿ ಅವರ ಜೊತೆ ಸೇರಿ ಜಿಲ್ಲೆಯ ಅಭಿವೃದ್ಧಿ ಕಾರ್ಯದಲ್ಲಿ ತೊಡಗುತ್ತೇನೆ ಎಂದು ಇದೇ ವೇಳೆ ತಿಳಿಸಿದ್ದಾರೆ.
ಒಂದು ಸಮುದಾಯದ ಮತ ಕಾಂಗ್ರೆಸ್ಗೆ ಮಾತ್ರ ಹೋಗಿವೆ - ಒಂದು ನಿರ್ದಿಷ್ಟ ಸಮುದಾಯದ ಮತಗಳು ಕಾಂಗ್ರೆಸ್ ಪರವಾಗಿ ಕ್ರೋಢೀಕರಣ ಆಗಿವೆ. ಈ ಪಕ್ಷ ಸ್ಥಾಪನೆಯಾದಾಗಿಂದ ಆ ಸಮುದಾಯದ ಪರವಾಗಿಯೂ ನಮ್ಮ ಪಕ್ಷ ಹೋರಾಟ ನಡೆಸಿತ್ತು. ದೇವೇಗೌಡರು ಮೀಸಲಾತಿ ನೀಡಿದ್ದರು. ಅವರಿಗೆ ದೇವೇಗೌಡರು, ಕುಮಾರಸ್ವಾಮಿ ಅವರು ಸಾಕಷ್ಟು ಒಳ್ಳೆಯದು ಮಾಡಿದ್ದಾರೆ. ಆದರೂ ಆ ಸಮುದಾಯ ನಮ್ಮ ಪರ ಮತ ಹಾಕಿಲ್ಲ. ಈ ಬಗ್ಗೆ ಹೆಚ್ಚು ಚರ್ಚೆ ಮಾಡಲು ನಾನು ಬಯಸುವುದಿಲ್ಲ ಎಂದು ನಿಖಿಲ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದನ್ನೂ ಓದಿ : ಚನ್ನಪಟ್ಟಣದಲ್ಲಿ ಗೆಲುವಿನ ಪತಾಕೆ ಹಾರಿಸಿದ ಸೈನಿಕ; ರಾಜಕೀಯದ ಚಕ್ರವ್ಯೂಹದಲ್ಲಿ ಮತ್ತೆ ಸೋತ ಅಭಿಮನ್ಯು