ಬೆಂಗಳೂರು: ''ಕುಮಾರಣ್ಣನ ಹಣೆಬರಹ ಬರೆಯುವುದು ಆ ಭಗವಂತ, ಆ ಭಗವಂತನ ಜೊತೆಯಲ್ಲಿ ರಾಜ್ಯದ ಏಳೂವರೆ ಕೋಟಿ ಜನತೆಯೂ ಹಣೆಬರಹ ಬರೆಯುತ್ತಾರೆ. ಹಾಗಾಗಿ, ಕಾದು ನೋಡೋಣ'' ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟಾಂಗ್ ನೀಡಿದರು.
ಜೆಪಿ ನಗರದ ತಮ್ಮ ನಿವಾಸದ ಬಳಿ ಸೋಮವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ''ಯಾರ, ಯಾರ ಹಣೆಬರಹ ಭಗವಂತ ಏನೇನು ಬರೆಯುತ್ತಾನೆ, ಏನೇನು ಬರೆದಿದ್ದಾನೆ ಮುಂದೆ ಹೋಗುತ್ತಾ, ಹೋಗುತ್ತಾ ಗೊತ್ತಾಗುತ್ತದೆ'' ಎಂದರು.
ಕುಮಾರಸ್ವಾಮಿ ನನ್ನ ನಾಶ ಮಾಡೋಕೆ ನೋಡುತ್ತಾರೆ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ''ನಾವು ಯಾವತ್ತೂ ಡಿ.ಕೆ.ಶಿವಕುಮಾರ್ ಅವರನ್ನು ನೆನಪು ಮಾಡಿಕೊಳ್ಳುವುದಿಲ್ಲ. ಆದರೆ ಡಿ.ಕೆ. ಶಿವಕುಮಾರ್, ನಮಗೆ ಸದಾ ಅವರದೇ ಚಿಂತೆ ಎಂಬಂತೆ ಮಾತನಾಡಿದ್ದಾರೆ. ನಾವು ನೆನಪು ಮಾಡಿಕೊಂಡರೆ ಒಳ್ಳೆಯದಾಗಲಿ ಎಂದು ಹೇಳುತ್ತೇವೆ'' ಎಂದರು.
''ರಾಜಕೀಯವಾಗಿ ತೆಗೆದುಕೊಳ್ಳುತ್ತಿರುವ ಅವರ ನಡೆ, ಬೆಂಗಳೂರು ದಕ್ಷಿಣಕ್ಕೆ ರಾಮನಗರ ಜಿಲ್ಲೆಯನ್ನು ಸೇರಿಸಿರುವುದು. ರಾಮನಗರ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾವಣೆ ಮಾಡಿದರೆ, ಅನೇಕ ತಾಂತ್ರಿಕ ಸಮಸ್ಯೆಗಳಾಗುತ್ತವೆ. ಕಂದಾಯ ರೆಕಾರ್ಡ್, ಸರ್ಕಾರದ ದಾಖಲೆಗಳು ಐದು ತಾಲೂಕುಗಳ ಬದಲಾವಣೆ ಆಗಬೇಕು. ಅಷ್ಟು ಸುಲಭವಾಗಿ ಹೆಸರು ಬದಲಾವಣೆ ಮಾಡಲು ಸಾಧ್ಯವಿಲ್ಲ'' ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ರಾಮನ ಹೆಸರು ಅಳಿಸುವ ಪ್ರಯತ್ನ: ''ಈ ಹಿಂದೆ 2006ರಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ರಚನೆ ಮಾಡಿದ್ದರು. ಅಂದು ಯಾರೂ ವಿರೋಧ ಮಾಡಿರಲಿಲ್ಲ. ಎಲ್ಲರೂ ಸಹ ಅಭಿಮತ ವ್ಯಕ್ತಪಡಿಸಿದ್ದರು. ಆದರೆ, ಈಗ ರಾಮನ ಹೆಸರನ್ನು ಅಳಿಸುವ ಪ್ರಯತ್ನವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಅವರನ್ನು ಆ ರಾಮನೇ ನೋಡಿಕೊಳ್ಳುತ್ತಾನೆ'' ಎಂದು ಹೇಳಿದರು.
''ಮುಂದಿನ ದಿನಗಳಲ್ಲಿ ರಾಮನಗರದ ಇತಿಹಾಸ, ರಾಮನ ಇತಿಹಾಸ ಯಾರಿಗೂ ಅಳಿಸುವ ಶಕ್ತಿ ಇಲ್ಲ. ಕಾಂಗ್ರೆಸ್ ಕೈಯಲ್ಲಿ ಅಧಿಕಾರ ಇದೆ. ಏನು ಬೇಕಾದರೂ ತೀರ್ಮಾನ ಮಾಡಲಿ. ಮುಂದಿನ ದಿನಗಳಲ್ಲಿ ರಾಜ್ಯದ ಜನತೆ, ಭಗವಂತ, ಕುಮಾರಸ್ವಾಮಿ ಅವರಿಗೆ ಶಕ್ತಿ ಕೊಡುತ್ತಾನೆ. ಆಗ ರಾಮನಗರ ಜಿಲ್ಲೆ ಹೆಸರನ್ನು ಮರು ಸ್ಥಾಪನೆ ಮಾಡುತ್ತೇವೆ'' ಎಂದು ತಿಳಿಸಿದರು.
ಬಿಜೆಪಿ-ಜೆಡಿಎಸ್ ಪಾದಯಾತ್ರೆ ಇಬ್ಬರೂ ಮಾಡಿರುವ ಪಾಪ ತೊಳೆದುಕೊಳ್ಳಲು ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ, ''ಈ ಸರ್ಕಾರ ಬಂದ ಮೇಲೆ ಹಗರಣದಲ್ಲಿಯೇ ಮುಳುಗಿದೆ. ಹಗರಣಗಳ ವಿರುದ್ಧ ಹೋರಾಟ ಮಾಡಲು ಮುಂದಾದರೆ ಈ ರೀತಿ ಮಾತನಾಡುವುದು ಸರಿಯಲ್ಲ'' ಎಂದು ನಿಖಿಲ್ ಕಿಡಿಕಾರಿದರು.
ಹೆಚ್ಡಿಕೆ ಆರೋಗ್ಯ ಚೆನ್ನಾಗಿದೆ: ''ಕುಮಾರಸ್ವಾಮಿ ಅವರು ಆರೋಗ್ಯವಾಗಿದ್ದಾರೆ. ನಿನ್ನೆ ಸಣ್ಣಪುಟ್ಟ ವ್ಯತ್ಯಾಸಗಳಾಗಿತ್ತು. ಆಸ್ಪತ್ರೆಯಲ್ಲಿ ಎಲ್ಲ ತಪಾಸಣೆ ಮಾಡಿಸಿದ್ದೇವೆ. ಕೆಲಸದ ಒತ್ತಡದಿಂದ ಅವರು ಮಾಮೂಲಿಯಂತೆ ಆರೋಗ್ಯ ತಪಾಸಣೆ ಮಾಡಿಸಿಕೊಂಡಿರಲಿಲ್ಲ. ಈಗ ಅವರು ಆರೋಗ್ಯವಾಗಿದ್ದು, ಇಂದು ಅಥವಾ ನಾಳೆ ದೆಹಲಿಗೆ ತೆರಳುತ್ತಾರೆ'' ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಇದನ್ನೂ ಓದಿ: 'ಕೆಟ್ಟ ಸಂಪ್ರದಾಯ ಹುಟ್ಟುಹಾಕಬಾರದೆಂದು ಸದನದಲ್ಲಿ ಮುಡಾ ಚರ್ಚೆಗೆ ಅವಕಾಶ ನೀಡಿಲ್ಲ': ಸ್ಪೀಕರ್ ಯು.ಟಿ. ಖಾದರ್ - U T Khader