ಬೆಂಗಳೂರು: ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರು ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ನಿಖಿಲ್ ಕುಮಾರಸ್ವಾಮಿ ಅವರು ಕುಟುಂಬ ಸಮೇತರಾಗಿ ಇಂದು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಬೆಳಗ್ಗೆ ಕೆಂಗಲ್ ಆಂಜನೇಯ ದೇವಾಲಯ ಮತ್ತು ಬೆಂಗಳೂರಿನ ಜೆಪಿ ನಗರದ ತಿರುಮಲಗಿರಿ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಕುಟುಂಬ ಸಮೇತ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕೂಡ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ವಿಶೇಷ ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಕಳೆದ ಬಾರಿ ಕೆಲ ಕುತಂತ್ರಿಗಳಿಂದ ನಿಖಿಲ್ ಸೋತಿದ್ದಾರೆ. ಈ ಬಾರಿ ಕುತಂತ್ರಿಗಳ ಮಾತು ಜನರು ಕೇಳುವುದಿಲ್ಲ. ನಿಖಿಲ್ ಅವರನ್ನು ಗೆದ್ದೇ ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಚುನಾವಣೆಯ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಇಂದು ಮಧ್ಯಾಹ್ನ 1 ರಿಂದ 1.30 ರ ಒಳಗೆ ನಾಮಪತ್ರ ಸಲ್ಲಿಸುತ್ತಾರೆ. ಎನ್ಡಿಎ ನಾಯಕರು ಸದ್ಯಕ್ಕೆ ಯಾರೂ ಬರುವುದಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಅಭಿವೃದ್ಧಿ ಆಗ್ತಿದೆ. ಈ ಮೂರು ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಜನ ಆಯ್ಕೆ ಮಾಡುತ್ತಾರೆ. ದೇಶದಲ್ಲಿ ಒಳ್ಳೆಯ ವಾತಾವರಣ ಇದೆ. ನರೇಂದ್ರ ಮೋದಿ ದೇಶಕ್ಕೆ ಸೌಹಾರ್ದತೆಯನ್ನು ತಂದಿದ್ದಾರೆ. ಇದು ನಮಗೂ ಸಹಾಯ ಮಾಡುತ್ತದೆ. ಕಾರ್ಯಕರ್ತರ ಒತ್ತಡಕ್ಕೆ ಮಣಿದು ನಿಖಿಲ್ ಚುನಾವಣೆಗೆ ನಿಲ್ಲಬೇಕಾಯಿತು. ಇಲ್ಲಿ ಸೋಲು ಗೆಲುವು ಸಹಜ. ಇದು ಕಾರ್ಯಕರ್ತರ ಚುನಾವಣೆ. ಭಗವಂತನ ಆಶೀರ್ವಾದದಿಂದ ಗೆಲುವು ಸಾಧಿಸುತ್ತೇವೆ ಎಂದು ಹೇಳಿದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮಾತನಾಡಿ, ನಮ್ಮ ಇಡೀ ವಂಶ ಭಗವಂತನಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ. ಇವತ್ತು ಮೊಮ್ಮಗ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸುವ ಮೊದಲು ಪೂಜಾ ಕೈಂಕರ್ಯಗಳನ್ನು ಸಲ್ಲಿಸಿ, ಭಗವಂತನ ಆರ್ಶಿವಾದ ಪಡೆದಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ದೇವರಲ್ಲಿ ಒಳ್ಳೆಯ ಪ್ರಾರ್ಥನೆ ಮಾಡಿದ್ದೇನೆ. ತಾತ ದೇವೇಗೌಡರು, ತಂದೆ ಕುಮಾರಣ್ಣ, ಪತ್ನಿ ರೇವತಿ ಜೊತೆಗೂಡಿ ಪೂಜೆ ನೆರವೇರಿಸಿದ್ದೇನೆ ಎಂದು ಹೇಳಿದರು.
ಎನ್ಡಿಎ ಮೈತ್ರಿಕೂಟಕ್ಕೆ ತೊಂದರೆ ಆಗದಂತೆ ನಾವು ಗೆಲ್ಲುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರ ವಿಶ್ವಾಸ ಉಳಿಸುವ ಕೆಲಸ ಮಾಡುತ್ತೇನೆ. ಮೂರು ಕ್ಷೇತ್ರದ ಜನರ ಜೊತೆಗೆ ಚರ್ಚೆ ಮಾಡಿದ್ದೇನೆ. ಮೂರು ಕ್ಷೇತ್ರಗಳ ಬಗ್ಗೆ ದೇವರಲ್ಲಿ ಪೂಜೆ ಮಾಡಿದ್ದೇನೆ. ನನ್ನ ಪರವಾಗಿ ಎರಡು ಪಕ್ಷದ ಕಾರ್ಯಕರ್ತರು ಅತೀ ಉತ್ಸಾಹದಿಂದ ಕೆಲಸ ಮಾಡ್ತಿದ್ದಾರೆ. ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ನನಗೆ ಸಂಪೂರ್ಣ ವಿಶ್ವಾಸ ಇದೆ, ಚನ್ನಪಟ್ಟಣದಲ್ಲಿ ಒಬ್ಬ ಯುವಕನಿಗೆ ಕೆಲಸ ಮಾಡಲು ಜನರು ಅವಕಾಶ ನೀಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿ.ಪಿ.ಯೋಗೇಶ್ವರ್ ಬಗ್ಗೆ ನಾನು ಮಾತನಾಡಲ್ಲ. ಮುಂದಿನ ತಿಂಗಳು ಮತದಾರ ಪ್ರಭುಗಳು ನನಗೆ ಆಶೀರ್ವಾದ ಮಾಡ್ತಾರೆ ಎಂದು ತಿಳಿಸಿದರು.
ಇಂದು ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಜೆ.ಪಿ ನಗರ ನಿವಾಸದಿಂದ ನಿಖಿಲ್ ಕುಮಾರಸ್ವಾಮಿ ಅವರು ಹೆಚ್.ಡಿ.ಕುಮಾರಸ್ವಾಮಿ ಹಾಗೂ ಕುಟುಂಬ ಸಮೇತ ಚನ್ನಪಟ್ಟಣಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಇದನ್ನೂ ಓದಿ: ₹70 ಕೋಟಿ ಆಸ್ತಿಯ ಒಡೆಯ ಸಿ.ಪಿ.ಯೋಗೇಶ್ವರ್: ಸಾಲ ಎಷ್ಟು ಗೊತ್ತೇ?