ಬೆಂಗಳೂರು: ಜೈಲಿನಲ್ಲಿ ಖೈದಿಗಳನ್ನು ಭಯೋತ್ಪಾದಕ ಕೃತ್ಯಗಳಿಗೆ ಪ್ರೇರೇಪಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು 7 ರಾಜ್ಯಗಳ 17 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕರ್ನಾಟಕ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿರುವ ಪ್ರಕರಣಗಳ ಕುರಿತು ಆರೋಪಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಬೆಳಗ್ಗೆಯಿಂದಲೇ ಶೋಧ ನಡೆಯುತ್ತಿದೆ.
ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯು ಬೆಂಗಳೂರಿನ ಜೈಲಿನಲ್ಲಿರುವ ಖೈದಿಗಳನ್ನು ಉಗ್ರವಾದಕ್ಕೆ ಪ್ರೇರೇಪಿಸಿ, ಫಿದಾಯಿನ್ಗಳಾಗಿ ಬದಲಾಯಿಸುತ್ತಿರುವ ಆರೋಪ ಪ್ರಕರಣದಲ್ಲಿ ಇದೇ ವರ್ಷದ ಜನವರಿ 12ರಂದು 8 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಎನ್ಐಎ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಜೀವಾವಧಿ ಶಿಕ್ಷೆಗೆ ಗುರಿಯಾಗಿ 2013ರಿಂದಲೂ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಟಿ.ನಜೀರ್ ಸೇರಿದಂತೆ ಸೈಯದ್ ಸುಹೈಲ್ ಖಾನ್ ಅಲಿಯಾಸ್ ಸುಹೈಲ್, ಮೊಹಮ್ಮದ್ ಉಮರ್ ಅಲಿಯಾಸ್ ಉಮರ್, ಜಾಹಿದ್ ತಬ್ರೇಜ್ ಅಲಿಯಾಸ್ ತಬ್ರೇಜ್, ಮುದಾಸೀರ್ ಪಾಶಾ ಹಾಗೂ ಮೊಹಮ್ಮದ್ ಫೈಸಲ್ ರಬ್ಬಾನಿ ಅಲಿಯಾಸ್ ಸಾದತ್ ಮತ್ತು ವಿದೇಶಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗಿರುವ ಜುನೈದ್ ಅಹಮದ್ ಅಲಿಯಾಸ್ ಜೆ.ಡಿ ಹಾಗೂ ಮೊಹಮ್ಮದ್ ಸಲ್ಮಾನ್ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು.
ಪ್ರಕರಣದ ಹಿನ್ನೆಲೆ: ಕಳೆದ ವರ್ಷದ ಜುಲೈ 18ರಂದು ಆರೋಪಿಗಳು ವಾಸವಿದ್ದ ಮನೆಯೊಂದರ ಮೇಲೆ ದಾಳಿ ಮಾಡಿದ್ದ ಬೆಂಗಳೂರಿನ ಸಿಸಿಬಿ ಪೊಲೀಸರು ಶಸ್ತ್ರಾಸ್ತ್ರ, ಹ್ಯಾಂಡ್ ಗ್ರೆನೇಡ್, ವಾಕಿ ಟಾಕಿಗಳ ಸಹಿತ 7 ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಪ್ರಕರಣದ ತನಿಖೆಯನ್ನು ಎನ್‌ಐಎ ಆರಂಭಿಸಿತ್ತು.
2017ರ ಅವಧಿಯಲ್ಲಿ ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದ ಸಲ್ಮಾನ್ ಖಾನ್ ಹಾಗೂ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ಉಳಿದ ಆರೋಪಿಗಳಿಗೆ ಜೈಲಿನಲ್ಲಿ ಟಿ.ನಜೀರ್ ಸಂಪರ್ಕ ದೊರೆತಿತ್ತು. ಜೈಲಿನಲ್ಲಿ ಎಲ್ಲರನ್ನೂ ತನ್ನ ಬ್ಯಾರಕ್ಗೆ ಶಿಫ್ಟ್ ಮಾಡಿಸಿಕೊಳ್ಳುವಲ್ಲಿಯೂ ಯಶಸ್ವಿಯಾಗಿದ್ದ ಟಿ.ನಜೀರ್, ಆರಂಭದಲ್ಲಿ ಜುನೈದ್ ಅಹಮದ್, ಸಲ್ಮಾನ್ ಖಾನ್ ಹಾಗೂ ನಂತರದಲ್ಲಿ ಉಳಿದ ಆರೋಪಿಗಳನ್ನು ಲಷ್ಕರ್-ಎ-ತೊಯ್ಬಾ ಸಂಘಟನೆಯ ಸದಸ್ಯರನ್ನಾಗಿ ಸೇರಿಸಿಕೊಂಡಿದ್ದ ಎಂಬುದು ಎನ್ಐಎ ತನಿಖೆಯಲ್ಲಿ ಬಹಿರಂಗವಾಗಿದೆ.
ಆಘಾತಕಾರಿ ಸಂಚು!: ಜೈಲಿನಿಂದ ಬಿಡುಗಡೆಯಾದ ಬಳಿಕ ಕೆಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ವಿದೇಶಕ್ಕೆ ತೆರಳಿರುವ ಜುನೈದ್ ಅಹಮದ್, ಇಲ್ಲಿನ ಜೈಲಿನೊಳಗೆ ಹಾಗೂ ಹೊರಗಿನ ಚಟುವಟಿಕೆಗಳಿಗೆ ಲಷ್ಕರ್-ಎ-ತೊಯ್ಬಾ ವಿದೇಶದಿಂದಲೇ ಹಣ ಒದಗಿಸುತ್ತಿದೆ. ಅಲ್ಲದೆ ಹ್ಯಾಂಡ್ ಗ್ರೆನೇಡ್, ವಾಕಿಟಾಕಿಗಳನ್ನು ಉಳಿದ ಆರೋಪಿಗಳಿಗೆ ತಲುಪಿಸುವ ಜವಾಬ್ದಾರಿಯನ್ನು ಸಲ್ಮಾನ್ ಖಾನ್ಗೆ ನೀಡಲಾಗಿತ್ತು. ಅವುಗಳನ್ನು ಬಳಸಿ ಟಿ.ನಜೀರ್ನನ್ನು ನ್ಯಾಯಾಲಯಕ್ಕೆ ಕರೆದೊಯ್ಯುವಾಗ ಆತ್ಮಾಹುತಿ ದಾಳಿ ಮಾಡಿ, ಆತ ಪರಾರಿಯಾಗಲು ನೆರವಾಗಲು ಬೇಕಾದ ಸಿದ್ಧತೆಗಳನ್ನು ಆರೋಪಿಗಳು ಆರಂಭಿಸಿದ್ದರು. ಕೃತ್ಯದ ತಯಾರಿಯ ಭಾಗವಾಗಿ ಪೊಲೀಸ್ ಕ್ಯಾಪ್‌ಗಳನ್ನು ಕದಿಯಲು ಮತ್ತು ಸರ್ಕಾರಿ ಬಸ್‌ಗಳಿಗೆ ಬೆಂಕಿ ಹಚ್ಚಿ ತಪ್ಪಿಸಿಕೊಳ್ಳುವಂತೆಯೂ ಸಹ ಆರೋಪಿಗಳಿಗೆ ಜುನೈದ್ ಸೂಚನೆ ನೀಡಿದ್ದ ಎಂಬುದು ಎನ್ಐಎ ತನಿಖೆಯಲ್ಲಿ ಬಹಿರಂಗವಾಗಿತ್ತು.
ಇದನ್ನೂ ಓದಿ: ಕಡಬದಲ್ಲಿ ಆ್ಯಸಿಡ್ ದಾಳಿ ಪ್ರಕರಣ: ಎಂಬಿಎ ವಿದ್ಯಾರ್ಥಿಯಿಂದ ಕೃತ್ಯ