ಬೆಂಗಳೂರು : ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜ್ ಮುನೀರ್ ಎಂಬಾತನನ್ನು ಎನ್‌ಐಎ ಅಧಿಕಾರಿಗಳು 7 ದಿನಗಳ ಕಾಲ ಬುಧವಾರ ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿಯಾದ ಮಾಜ್ ಮುನೀರ್ ಪರಪ್ಪನ ಅಗ್ರಹಾರ ಜೈಲ್ಲಿನಲ್ಲಿದ್ದ.
ಈತ ಶಿವಮೊಗ್ಗದ ತೀರ್ಥಹಳ್ಳಿ ಮೂಲದವನಾಗಿದ್ದು, ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣದಲ್ಲಿ ಬಂಧಿತನಾಗಿದ್ದ. ಇದೀಗ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದಿರುವ ಎನ್‌ಐಎ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ರಾಮೇಶ್ವರಂ ಕೆೆಫೆಯಲ್ಲಿ ನಡೆದ ಬಾಂಬ್ ಸ್ಫೋಟಕ್ಕೂ ಬಳ್ಳಾರಿ ಮಾಡ್ಯೂಲ್ಗೂ ಸಾಮ್ಯತೆ ಇರುವುದು ಎನ್‌ಐಎ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಇದಕ್ಕೂ ಮುನ್ನ ಕಳೆದ ವರ್ಷ ಡಿಸೆಂಬರ್ 17 ರಂದು ಬಳ್ಳಾರಿ ಮಾಡ್ಯೂಲ್ (ಬಳ್ಳಾರಿಯನ್ನು ಕೇಂದ್ರವನ್ನಾಗಿಸಿಕೊಂಡು ಕೃತ್ಯ) ಪ್ರಕರಣದಲ್ಲಿ ಬಂಧನಕ್ಕೊಳಗಾಗಿ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಬಳ್ಳಾರಿ ಮೂಲದ ಮಿನಾಜ್ ಅಲಿಯಾಸ್ ಎಂ.ಡಿ ಸುಲೇಮಾನ್, ಸೈಯದ್ ಸಮೀರ್ ಮತ್ತು ಮಹಾರಾಷ್ಟ್ರದ ಮುಂಬೈನಲ್ಲಿ ಅನಾಸ್ ಇಕ್ಬಾಲ್ ಶೇಕ್, ದೆಹಲಿಯಲ್ಲಿ ಶಯಾನ್ ರೆಹಮಾನ್ ಅಲಿಯಾಸ್ ಹುಸೇನ್‌ನನ್ನು ಎರಡು ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು.
2023ರ ಡಿ. 17ರಂದು ರಾಜ್ಯ ಸೇರಿ ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ಐಸಿಸ್) ಉಗ್ರ ಸಂಘಟನೆಗಳು ಸಂಚು ರೂಪಿಸಿದ್ದ ಮಾಹಿತಿ ಸಂಗ್ರಹಿಸಿದ್ದ ರಾಷ್ಟ್ರೀಯ ತನಿಖಾ ದಳ(ಎನ್‌ಐಎ), ಸ್ಥಳೀಯ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಪ್ರಕರಣವನ್ನು ಬಯಲಿಗೆ ಎಳೆದಿತ್ತು. ಈ ವೇಳೆ, ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಲ್ಲಿ 7 ಮಂದಿಯನ್ನು ಬಂಧಿಸಲಾಗಿತ್ತು.
ಬಾಂಬರ್ ಫೋಟೋಗಳನ್ನು ಬಿಡುಗಡೆಗೊಳಿಸಿದ ಎನ್ಐಎ : ಮತ್ತೊಂದೆಡೆ ಸ್ಫೋಟ ಸಂಭವಿಸಿ 15 ದಿನ ಕಳೆದರೂ ಆರೋಪಿಯ ಸುಳಿವು ಪತ್ತೆಯಾಗುತ್ತಿಲ್ಲ. ಪ್ರಕರಣದ ತನಿಖೆ ಆರಂಭಿಸಿರುವ ಎನ್ಐಎ ಅಧಿಕಾರಿಗಳು, ಆರೋಪಿಯ ಜಾಡು ಹಿಡಿದು ಹೊರಟಿದ್ದಾರೆ. ಈ ನಡುವೆ ಶಂಕಿತನ ಕೆಲ ಫೋಟೋಗಳನ್ನು ಎನ್ಐಎ ಬಿಡುಗಡೆಗೊಳಿಸಿ, ಆರೋಪಿಯನ್ನು ಯಾರಾದರೂ ನೋಡಿದ್ದಲ್ಲಿ ಅಥವಾ ಆತನ ಬಗ್ಗೆ ಸುಳಿವಿದ್ದಲ್ಲಿ ಮಾಹಿತಿ ನೀಡುವಂತೆ ಎನ್ಐಎ ಕೋರಿದೆ. ಆರೋಪಿಯ ಮತ್ತಷ್ಟು ಫೋಟೋಗಳನ್ನು ಬಿಡುಗಡೆಗೊಳಿಸಿದ್ದು, ಆರೋಪಿಯ ಕುರಿತು ಯಾವುದೇ ಸುಳಿವಿದ್ದಲ್ಲಿ ಕೆಳಕಂಡ ಸಂಪರ್ಕ ಸಂಖ್ಯೆ ಅಥವಾ ಮೇಲ್ ಐಡಿಯನ್ನು ಸಂಪರ್ಕಿಸುವಂತೆ ತಿಳಿಸಿದೆ. ಸಂಪರ್ಕಿಸಬೇಕಿರುವ ವಿವರ Tel:- 080-29510900, 8904241100, Mail: info.blr.nia.gov.in
ಇದನ್ನೂ ಓದಿ : ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಶಂಕಿತನಿಗೆ ಕಲ್ಯಾಣ ಕರ್ನಾಟಕದಲ್ಲಿ ಶೋಧ