ಕಾರವಾರ(ಉತ್ತರ ಕನ್ನಡ): ಕಾರವಾರದ ಕಾಳಿ ನದಿ ಸೇತುವೆ ಕುಸಿದ ಪ್ರದೇಶಕ್ಕೆ ಇಂದು ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಕೆ. ಅವರೊಂದಿಗೆ ರಾಷ್ಪ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಹೆಚ್ಎಐ) ಹಾಗು ಐಆರ್‌ಬಿ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದರು.
ಹೊಸ ಸೇತುವೆ ಮೇಲೆ ದ್ವಿಪಥ ಓಡಾಟಕ್ಕೆ ಅವಕಾಶ ನೀಡಲು ಸೇತುವೆಯ ದೃಢತೆ ಕುರಿತು ಪ್ರಮಾಣಪತ್ರ ನೀಡುವಂತೆ ಜಿಲ್ಲಾಧಿಕಾರಿ ಎನ್ಹೆಚ್ಎಐ ಅಧಿಕಾರಿಗಳಿಗೆ ಮನವಿ ಮಾಡಿದರು.
ಸದ್ಯ ಸೇತುವೆಯಲ್ಲಿ ಕೆಎಸ್ಆರ್‌ಟಿಸಿ ಬಸ್ ಹೊರತುಪಡಿಸಿ ಎಲ್ಲಾ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸರಕು ಸಾಗಾಟ ವಾಹನಗಳ ಓಡಾಟಕ್ಕೂ ಅವಕಾಶ ನೀಡಿದ ಪೊಲೀಸರು ಎರಡೂ ಬದಿ ಬ್ಯಾರಿಕೇಡ್ ಅಳವಡಿಸಿ ನಿಯಂತ್ರಿತವಾಗಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಮಾತನಾಡಿ, ''ಎನ್ಹೆಚ್ಎಐ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಾವು ಹೊಸ ಸೇತುವೆ ಮೇಲೆ ಎರಡು ಬದಿಯಿಂದ ಭಾರೀ ವಾಹನಗಳ ಓಡಾಟದ ಬಗ್ಗೆ ಪಿಟ್ನೆಸ್ ಪ್ರಮಾಣಪತ್ರ ಕೇಳಿದ್ದೆವು. ಅವರು ಮೌಖಿಕವಾಗಿ ಹೊಸ ಬ್ರಿಡ್ಜ್ ಸೇಫ್ ಇರುವ ಬಗ್ಗೆ ತಿಳಿಸಿದ್ದಾರೆ. ನಾವು ಲಿಖಿತವಾಗಿ ಕೊಡುವಂತೆ ಸೂಚನೆ ನೀಡಿದ್ದು, ಅವರು ಕೊಟ್ಟ ಬಳಿಕ ಎಲ್ಲ ವಾಹನಗಳ ಓಡಾಟಕ್ಕೆ ಎರಡು ಬದಿ ಅವಕಾಶ ನೀಡಲಾಗುವುದು. ನಿನ್ನೆ ಪ್ರಾಥಮಿಕ ವರದಿಯಲ್ಲಿ ಓಡಾಡಬಹುದು ಎಂದು ತಿಳಿಸಿದ್ದರಿಂದ ಎಲ್ಲ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ'' ಎಂದು ಹೇಳಿದರು.
ಎನ್ಹೆಚ್ಎಐ ಅಧಿಕಾರಿಗಳು ಸ್ಥಳೀಯ ಮೀನುಗಾರರ ಬೋಟ್ ಮೂಲಕ ಕಾಳಿ ನದಿಯ ಲಾರಿ ಬಿದ್ದ ಸ್ಥಳ ಹಾಗೂ ಸೇತುವೆ ಕುಸಿದ ಸ್ಥಳಕ್ಕೆ ತೆರಳಿದರು.