ವಿಜಯಪುರ : ಚಾಲುಕ್ಯ ನಗರದ ಮನೆಯೊಂದರ ಮುಂದೆ ಅಪರಿಚಿತರು ಮೃತ ನವಜಾತ ಗಂಡು ಶಿಶುವಿನ ಮೃತದೇಹವನ್ನು ಇಟ್ಟು ಪರಾರಿಯಾಗಿದ್ದಾರೆ. ಡಿ ಆರ್ ಸಜ್ಜನ ಎನ್ನುವರ ಮನೆಮುಂದೆ ಮಗುವಿನ ಮೃತದೇಹ ಪತ್ತೆಯಾಗಿದೆ. ಬೆಳಗಿನ ಜಾವ ಮನೆಯವರು ಬಾಗಿಲು ತೆಗೆದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ನವಜಾತ ಗಂಡು ಶಿಶು ಅದಾಗಲೇ ಮೃತಪಟ್ಟಿದ್ದು ತಿಳಿದು ಬಂದಿದೆ. ಮನೆಯ ಗೇಟಿಗೆ ಬೀಗ ಜಡಿದು ಮಲಗಿದ್ದರೂ, ಗೇಟ್ನಿಂದ ಜಿಗಿದು ಮನೆಯ ಅಂಗಳದಲ್ಲಿ ನವಜಾತ ಶಿಶುವನ್ನಿಟ್ಟು ಹೋಗಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮಗುವಿನ ಕಾಲಿನಲ್ಲಿ ಐಸಿಯು ಎಂದು ಬರೆದಿರುವ ಲೇಬಲ್ ಕಂಡು ಬಂದಿದೆ. ಶಿಶುವಿನ ಮೃತದೇಹವನ್ನು ನೋಡಲು ಸ್ಥಳೀಯರು ನೆರೆದಿದ್ದರು. ಕೂಡಲೇ ಮನೆಯವರು ಪೊಲೀಸರಿಗೆ ತುರ್ತು ಕರೆ ಮಾಡಿದರೂ ಯಾರೂ ಸ್ಪಂದಿಸಿಲ್ಲ. ಕೊನೆಗೆ ಆದರ್ಶ ನಗರ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ಸಲ್ಲಿಸಿದ ನಂತರ ಸ್ಥಳಕ್ಕೆ ಬಂದ ಪೊಲೀಸರು ಮೃತ ನವಜಾತ ಶಿಶುವನ್ನು ಕೊಂಡೊಯ್ದಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇನ್ನೊಂದೆಡೆ ಚಾಲುಕ್ಯ ನಗರದಲ್ಲಿ ತಡರಾತ್ರಿ ಮನೆಯೊಂದರಲ್ಲಿ ಕಳ್ಳತನವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಳ್ಳತನ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಇಂತಹ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಪೊಲೀಸ್ ಬೀಟ್ ವ್ಯವಸ್ಥೆ ಹೆಚ್ಚಳ ಮಾಡಬೇಕೆಂದು ಚಾಲುಕ್ಯ ನಗರ ನಿವಾಸಿಗಳು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಇತ್ತೀಚಿನ ಪ್ರಕರಣ- ಹೆತ್ತಗೂಸನ್ನೇ ಬಯಲಿಗೆಸೆದು ಹೋದ ಅವಿವಾಹಿತೆ : ಜನವರಿ 6 ರಂದು ತಡವಾಗಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿರುವ ಘಟನೆ ಅರೆಗುಜ್ಜನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿತ್ತು. ತಾಯಿಯೇ ತನ್ನ ಮಗುವನ್ನು ಎಸೆದು ಹೋಗಿದ್ದು, ಅಚ್ಚರಿಗೆ ಕಾರಣವಾಗಿತ್ತು. ಗರ್ಭ ಧರಿಸಿದ್ದ 25 ವರ್ಷದ ಅವಿವಾಹಿತೆ, ರಾತ್ರಿ ವೇಳೆ ಹೆರಿಗೆ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಗ್ರಾಮದ ಹೊರ ಭಾಗಕ್ಕೆ ಬಂದು ಸ್ವತಃ ಹೆರಿಗೆ ಮಾಡಿಕೊಂಡಿದ್ದಳು. ಸಮಾಜಕ್ಕೆ ಹೆದರಿ ಶಿಶುವನ್ನು ಅಲ್ಲಿಯೇ ಬಿಟ್ಟು ಬಂದಿದ್ದಳು.
ಬೆಳಗ್ಗೆ ಗ್ರಾಮಸ್ಥರು ಶಿಶುವಿನ ಮೃತದೇಹ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಮಕ್ಕಳ ರಕ್ಷಣಾ ಘಟಕ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಮತ್ತು ಪೊಲೀಸರು ಪರಿಶೀಲನೆ ನಡೆಸಿದ್ದರು. ತೀವ್ರ ರಕ್ತಸ್ರಾವದಿಂದ ಬಳಲಿದ್ದ ಯುವತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ನವಜಾತ ಶಿಶುವಿನ ಮೃತದೇಹವನ್ನು ಶವಾಗಾರಕ್ಕೆ ರವಾನೆ ಮಾಡಿದ್ದರು. ಈ ಘಟನೆ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಉಷಾ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ : ತುಮಕೂರು: ಹೆತ್ತಕೂಸನ್ನು ಬಯಲಿಗೆ ಎಸೆದು ಹೋದ ಅವಿವಾಹಿತೆ, ದೂರು ದಾಖಲು