ಚಿಕ್ಕೋಡಿ : ಮಂಗಳವಾರ ಸಂಜೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಲ್ಲಮ್ಮವಾಡಿ (ಕೋಕಟನೂರ) ಗ್ರಾಮದ ಹೊರವಲಯದಲ್ಲಿ ನವ ದಂಪತಿಯ ಕೊಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪ್ರಭಾರಿ ಎಸ್ಪಿ ಬಿ ಎಸ್ ನೇಮಗೌಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊಲೆಯಾದ ಸ್ಥಳಕ್ಕೆ ಬಿ ಎಸ್ ನೇಮಗೌಡ ಹಾಗೂ ಅಥಣಿ ಡಿವೈಎಸ್ಪಿ ಶ್ರೀಪಾದ್ ಜಲದೇ ಹಾಗೂ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್ಚುವರಿ ಎಸ್ಪಿ ನೇಮಗೌಡ, ಮಂಗಳವಾರ ಸಂಜೆ ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರ ಕೊಲೆ ನಡೆದಿದ್ದು, ಇದರಲ್ಲಿ ಯಾಸಿನ್ ಬಾಗೋಡೆ (21) ಹೀನಾಕೌಸರ್ (19) ಕೊಲೆಗೀಡಾದವರು. ತೌಫಿಕ್ ಕ್ಯಾಡಿ ಕೊಲೆ ಆರೋಪಿ ಎಂದು ತಿಳಿಸಿದರು.
ಇಲ್ಲಿ ಮದುವೆ ವಿಚ್ಛೇದನ ವಿಚಾರ ಕೊಲೆಗೆ ಕಾರಣವಾಗಿದೆ ಎಂಬುದು ಪ್ರಾಥಮಿಕ ಮಾಹಿತಿ. ಆರೋಪಿಯನ್ನು ರಾತ್ರಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಯಾವುದರಿಂದ ಕೊಲೆ ಮಾಡಲಾಗಿದೆ ಎಂಬುದಕ್ಕೆ ಸಂಪೂರ್ಣ ತನಿಖೆಯಿಂದಲೇ ಗೊತ್ತಾಗಬೇಕು. ಪ್ರಕರಣ ತನಿಖಾ ಹಂತದಲ್ಲಿರುವಾಗ ಹೆಚ್ಚಿನ ಮಾಹಿತಿಯನ್ನು ನೀಡುವುದಕ್ಕೆ ಬರುವುದಿಲ್ಲ. ಆದಷ್ಟು ಬೇಗನೇ ಸಂಪೂರ್ಣ ತನಿಖೆ ಮುಗಿಸಿ ಮಾಹಿತಿ ನೀಡಲಾಗುವುದೆಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಕೊಲೆ ನಡೆಯುವ ಸಂದರ್ಭದಲ್ಲಿದ್ದ ಪ್ರತ್ಯಕ್ಷದರ್ಶಿ ಮಲ್ಲಿಕಾರ್ಜುನ ಮಾಳಿ ಮಾತನಾಡಿ, ಆರೋಪಿ ತೌಫಿಕ್ ಕ್ಯಾಡಿ ಹಾಗೂ ಕೊಲೆಯಾದ ಯಾಸಿನ್ ಬಾಗೋಡೆ ಸ್ನೇಹಿತರು. ನಮ್ಮ ಮನೆಯ ಹಿಂದೆ ಮುಂದೆ ಅವರ ನಿವಾಸಗಳಿವೆ. ಅವರಿಬ್ಬರೂ ಕಳೆದ ನಾಲ್ಕೈದು ವರ್ಷಗಳಿಂದ ಸ್ನೇಹಿತರೆ ಆಗಿರುವುದರಿಂದ ನಾಲ್ಕು ವರ್ಷದ ಹಿಂದೆ ತೌಫಿಕ್ ಕ್ಯಾಡಿ ಜೊತೆ ಹೀನಾಕೌಸರ್ ಮದುವೆಯನ್ನು ಮಾಡಲಾಗಿತ್ತು. ಆದರೆ ಸ್ನೇಹಿತನ ಹೆಂಡತಿ ಜೊತೆಗೆ ಯಾಸಿನ್ ಪ್ರೇಮ ಬೆಳೆಸಿಕೊಂಡು ಸುತ್ತಾಡುತ್ತಿದ್ದರು. ತೌಫಿಕ್ಗೆ ವಿಷಯ ಗೊತ್ತಾಗಿ ಹೀನಾಕೌಸರ್ಗೆ ವಿಚ್ಛೇದನ ನೀಡಿದ್ದ. ಕಳೆದ ಎರಡು ತಿಂಗಳ ಹಿಂದೆಯಷ್ಟೇ ಯಾಸಿನ್ ಹೀನಾಕೌಸರ್ ಮದುವೆ ನಡೆದಿತ್ತು ಎಂದು ತಿಳಿಸಿದರು.
ತೌಫಿಕ್ಗೆ ದ್ವೇಷ ಇರುವುದರಿಂದ ಮಂಗಳವಾರ ಸಂಜೆ ಈ ರೀತಿ ಇಬ್ಬರನ್ನು ಹತ್ಯೆ ಮಾಡಿದ್ದಾನೆ. ಬಿಡಿಸಿಕೊಳ್ಳಲು ನಾವು ಎಷ್ಟೇ ಪ್ರಯತ್ನ ಮಾಡಿದ್ರು ಇಬ್ಬರನ್ನು ಕೊಲೆ ಮಾಡಿದ. ಕೊಲೆ ತಪ್ಪಿಸಲು ಅಮಿನಾಬಾಯಿ ಬಾಗೋಡೆ ಹಾಗೂ ಮುಸ್ತಫಾ ಮುಲ್ಲಾ ಮುಂದೆ ಬರುತ್ತಿದ್ದಂತೆ ಅವರ ಮೇಲೆ ತೌಫಿಕ್ ಹಲ್ಲೆ ಮಾಡಿದ್ದಾನೆ. ಸದ್ಯ ಅವರನ್ನು ಕೂಡ ಮೀರಜ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಐದು ನಿಮಿಷದಲ್ಲಿ ಈ ದುರಂತ ನಡೆದೋಯ್ತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಆಸ್ತಿ ಹಂಚಿಕೆ ವಿಚಾರ: ಮಗನಿಂದಲೇ ಹೆತ್ತವರ ಕೊಲೆ ಶಂಕೆ