ಬೆಂಗಳೂರು: ಸೇವಾ ಹಿರಿತನ, ಬಡ್ತಿ ಮತ್ತಿತರ ಸೇವಾ ವಿಷಯಗಳಿಗೆ ಸಂಬಂಧಿಸಿದ ದೂರುಗಳನ್ನು ವಿಚಾರಣೆ ನಡೆಸಿ ನಿರ್ಧಾರ ಕೈಗೊಳ್ಳಲು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಕ್ರಮ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕ ಸದಸ್ಯಪೀಠ ರಾಷ್ಟ್ರೀಯ ಆಯೋಗದ ಆದೇಶವನ್ನು ರದ್ದು ಮಾಡಿ ಆದೇಶಿಸಿದೆ. ಸೇವಾ ನಿಯಮಗಳಿಗೆ ಸಂಬಂಧಿಸಿದ ಅದರಲ್ಲೂ ವಿಶೇಷವಾಗಿ ಬಡ್ತಿ, ಸೇವಾ ಹಿರಿತನ ವಿಚಾರದಲ್ಲಿ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ದೂರುಗಳನ್ನು ಪುರಸ್ಕರಿಸುವ ಅಧಿಕಾರವಿಲ್ಲ. ಅಂತಹ ವಿಚಾರಗಳು ಆಡಳಿತಾತ್ಮಕ ಕಾನೂನು ವ್ಯಾಪ್ತಿಗೆ ಒಳಪಡಲಿದ್ದು, ಆಡಳಿತಾತ್ಮಕ ನ್ಯಾಯಮಂಡಳಿಗಳು ಅಂತಹ ವಿಚಾರದಲ್ಲಿ ವ್ಯಾಜ್ಯಗಳ ವಿಚಾರಣೆ ನಡೆಸಿ ಸೂಕ್ತ ಆದೇಶಗಳನ್ನು ನೀಡುವ ಅಧಿಕಾರ ಹೊಂದಿವೆ ಎಂದು ಪೀಠ ತಿಳಿಸಿದೆ.
ಅಲ್ಲದೇ, ಈ ಪ್ರಕರಣದಲ್ಲಿ ರಾಷ್ಟ್ರೀಯ ಆಯೋಗ ಸುಪ್ರೀಂ ಕೋರ್ಟ್‌ನ ತೀರ್ಪುಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡಿದೆ. ಸಂವಿಧಾನದ ಕಲಂ 338 ರಡಿ ಪರಿಶಿಷ್ಟ ಜಾತಿಗೆ ಸಂಬಂಧಿಸಿದ ರಕ್ಷಣೆ, ಕಲ್ಯಾಣ ಮತ್ತು ಸಾಮಾಜಿಕ ಆರ್ಥಿಕ ಬೆಳವಣಿಗೆ ಕುರಿತ ವಿಚಾರಗಳ ಬಗ್ಗೆ ತನಿಖೆ, ಮೇಲ್ವಿಚಾರಣೆ ನಡೆಸಿ ಸೂಕ್ತ ನಿರ್ದೇಶನಗಳನ್ನು ನೀಡಬಹುದಾಗಿದೆ. ಆದರೆ, ಸೇವಾ ವಿಚಾರದಲ್ಲಿ ಆ ಅಧಿಕಾರವಿಲ್ಲ ಎಂದು ನ್ಯಾಯಪೀಠ ಆದೇಶಿಸಿದೆ.
ಪರಿಶಿಷ್ಟ ಜಾತಿಗಳ ಹಕ್ಕು ಮತ್ತು ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಎನ್‌ಸಿಎಸ್‌ಸಿ ಮಹತ್ವದ ಪಾತ್ರ ವಹಿಸಲಿದೆ. ಆದರೆ, ಅದು ಕೆಲವೊಮ್ಮೆ ಸಂವಿಧಾನ, ನಿಯಮ ಹಾಗೂ ಅಧಿಕಾರ ವ್ಯಾಪ್ತಿಯನ್ನು ಮೀರಿ ವರ್ತಿಸುತ್ತದೆ ಎಂದು ಹೇಳಿರುವ ನ್ಯಾಯಾಲಯ, ಆಯೋಗ ಇನ್ನಾದರೂ ಸೇವಾ ವ್ಯಾಜ್ಯಗಳ ಪರಿಹಾರಕ್ಕೆ ಮುಂದಾಗದೇ ತನ್ನ ಸಂವಿಧಾನ ಬದ್ಧ ಕರ್ತವ್ಯಗಳನ್ನು ಪಾಲಿಸಬೇಕು ಎಂದು ನಿರ್ದೇಶನ ನೀಡಿದೆ.
ಪ್ರಕರಣದ ಹಿನ್ನೆಲೆ:ಲೋಕೋಪಯೋಗಿ ಇಲಾಖೆಯ ತುಮಕೂರು ವಿಭಾಗದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಸೇವೆ ಸಲ್ಲಿಸುತ್ತಿದ್ದ ವಿ ಶ್ರೀನಿವಾಸ ತಮ್ಮ ಅರ್ಹತೆಗೆ ಅನುಗುಣವಾಗಿ ಉನ್ನತ ಹುದ್ದೆ ನೀಡಿಲ್ಲ ಎಂದು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ದೂರು ನೀಡಿದ್ದರು. ಅದನ್ನು ಆಲಿಸಿದ ಆಯೋಗ 15 ದಿನಗಳಲ್ಲಿ ಇಲಾಖೆಯ ಮುಖ್ಯ ಎಂಜಿನಿಯರ್ ಅರ್ಜಿದಾರರಿಗೆ ಸೂಕ್ತ ಬಡ್ತಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿತ್ತು. ಅದನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿ, ಅಯೋಗ ತನ್ನ ಅಧಿಕಾರ ವ್ಯಾಪ್ತಿ ಮೀರಿ ನಿರ್ದೇಶನ ನೀಡಿದೆ. ಹಾಗಾಗಿ ಅದನ್ನು ರದ್ದುಗೊಳಿಸಬೇಕು ಎಂದು ವಿಭಾಗೀಯ ಪೀಠವನ್ನು ಕೋರಿತ್ತು.
ಇದನ್ನೂಓದಿ:ಬೋರ್ಡ್ ಪರೀಕ್ಷೆ ಪ್ರಶ್ನಿಸಿದ್ದ ಅರ್ಜಿ ವಿಸ್ತೃತ ಪೀಠಕ್ಕೆ ವರ್ಗಾವಣೆ ಕೋರಿದ್ದ ಮನವಿ ತಿರಸ್ಕೃತ