ಬಾಗಲಕೋಟೆ: ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಬಳಿಕ ಬಾಗಲಕೋಟೆಗೆ ಆಗಮಿಸಿದ ನಾರಾಯಣ ಸಾ ಭಾಂಡೆಗೆ ಅವರಿಗೆ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತ ಕೋರಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಇದು ಬಿಜೆಪಿ ಗೆಲುವು, ಕೇವಲ ನಾರಾಯಣ ಸಾ ಭಾಂಡಗೆ ಗೆಲುವುಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಪಕ್ಷ ರಾಜ್ಯಸಭಾ ಸದಸ್ಯತ್ವ ನೀಡಿದೆ. ಇದು ಕೇವಲ ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಇಲ್ಲಿ ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ರಾಷ್ಟ್ರ ದೊಡ್ಡದು. ನಿಷ್ಠಾವಂತರು ಮತ್ತು ರಾಷ್ಟ್ರವಾದಿಗಳನ್ನು ಪಕ್ಷ ಗುರುತಿಸುತ್ತದೆ. ಮುಂಬರುವ ದಿನಮಾನಗಳಲ್ಲಿ ಪಕ್ಷಕ್ಕಾಗಿ ಇನ್ನೂ ಹೆಚ್ಚು ದುಡಿಯುವೆ. ಈ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದು ಮತ್ತೆ ಮೋದಿ ಅವರನ್ನು ಪ್ರಧಾನಿಯಾಗಿ ಮಾಡಲು ಶ್ರಮಿಸುತ್ತೇನೆ" ಎಂದರು.
"ಮೋದಿ ಅಂದ್ರೆ ಅಭಿವೃದ್ಧಿ, ಅಭಿವೃದ್ಧಿ ಅಂದ್ರೇನೆ ಮೋದಿ. ನಾವು ಏನೇನು ಹೇಳಿದ್ದೇವೋ ಎಲ್ಲವನ್ನೂ ಮಾಡಿದ್ದೇವೆ. ಆರ್ಟಿಕಲ್ 370 ರದ್ದುಗೊಳಿಸಿದೆವು, ರಾಮ ಮಂದಿರ ಕಟ್ಟಿದೆವು, ಇನ್ಮುಂದೆ ಕಾಮನ್ ಸಿವಿಲ್ ಕೋಡ್ ಜಾರಿಗೆ ತರುತ್ತೇವೆ. ಸಿಎಎ ಯಾವಾಗ ಜಾರಿಗೆ ಬರುತ್ತೆ ಅನ್ನೋದನ್ನು ಕೇಂದ್ರ ಸರ್ಕಾರ ನಿರ್ಣಯ ಮಾಡುತ್ತೆ. ಆದರೆ ಖಂಡಿತವಾಗಿಯೂ ಜಾರಿಗೆ ತರುತ್ತೇವೆ" ಎಂದು ತಿಳಿಸಿದರು.
ಬಳಿಕ ಜಾತಿಗಣತಿ ವಿಚಾರಕ್ಕೆ ಪ್ರತಿಕ್ರಿಯಿಸಿ, "ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮಾಜ ದೊಡ್ಡದು. ಸಮಾಜವು ಜಾತಿ ಗಣತಿ ಜಾರಿಗೆ ವಿರೋಧ ಮಾಡಿದೆ. ಆದಾಗ್ಯೂ ಸಿಎಂ ವರದಿ ಜಾರಿಗೆ ತರುತ್ತಾರೆ ಅಂದರೆ, ಮುಂದಿನ ದಿನಗಳಲ್ಲಿ ಆ ಸಮಾಜ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸುತ್ತದೆ" ಎಂದರು.