ಬೆಂಗಳೂರು : ಗುರುವಾರ ಬೆಳಗ್ಗೆ 10 ಗಂಟೆಯಿಂದ ಸುಮಾರು ಒಂದೂವರೆ ಗಂಟೆಗಳ ಕಾಲ ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಸದ್ಯ ತಾಂತ್ರಿಕ ದೋಷವನ್ನು ಸರಿಪಡಿಸಲಾಗಿದ್ದು, ಸಂಚಾರ ಯಥಾಸ್ಥಿತಿಗೆ ಮರಳಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ಅಡಚಣೆ ಉಂಟಾದ ಕಾರಣ ಬೆಳಗ್ಗೆ ಸುಮಾರು 10 ಗಂಟೆಯ ಸಮಯದಲ್ಲಿ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ತಾಂತ್ರಿಕ ಸಮಸ್ಯೆಯನ್ನು ಬಿಎಂಆರ್‌ಸಿಎಲ್ ತ್ವರಿತವಾಗಿ ದುರಸ್ತಿಗೊಳಿಸಿದೆ. ಏಕಾಏಕಿ ರೈಲು ಓಡಾಟ ಸ್ಥಗಿತಗೊಂಡು ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರು. ಮತ್ತೆ ಕಳೆದ ಒಂದು ಗಂಟೆಯಿಂದ ರೈಲುಗಳು ಓಡಾಡುತ್ತಿವೆ. ಪ್ರಯಾಣಿಕರ ಸಾಂದ್ರತೆ ಕಡಿಮೆಯಾಗಿ ಸಹಜ ಸ್ಥಿತಿಗೆ ಮರಳಲು ಇನ್ನೂ ಕೆಲ ಸಮಯ ಬೇಕಾಗಬಹುದು ಎಂದು ಬಿಎಂಆರ್‌ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀನಿವಾಸ್ ರಾಜಗೋಪಾಲ್ ತಿಳಿಸಿದ್ದಾರೆ.
ಸಮಸ್ಯೆ ಕಂಡುಬಂದ ನಂತರ ದೋಷಯುಕ್ತ ರೈಲನ್ನು ಪಾಕೆಟ್ ಟ್ರ್ಯಾಕ್‌ಗೆ ಕೊಂಡೊಯ್ಯಲಾಯಿತು. ಈಗ ರೈಲು ಸೇವೆ ಎಂದಿನಂತೆ ಆರಂಭಿಸಲಾಗಿದೆ ಮತ್ತು ಸಾಮಾನ್ಯ ಸ್ಥಿತಿಗೆ ಸೇವೆ ಒದಗಿಸಲು ಸುಮಾರು ಒಂದು ಗಂಟೆ ತೆಗೆದುಕೊಳ್ಳಬಹುದು. ಉಂಟಾದ ಅನಾನುಕೂಲತೆಗಾಗಿ ಸಂಸ್ಧೆಯಿಂದ ವಿಷಾದಿಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ : ಸೆಪ್ಟೆಂಬರ್ ಅಂತ್ಯಕ್ಕೆ ನಮ್ಮ ಮೆಟ್ರೋ ಹಳದಿ ಮಾರ್ಗದ ರೈಲಿನ ಪ್ರಾಯೋಗಿಕ ಸಂಚಾರ - Namma Metro