ಹಾವೇರಿ: ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಪಂಚಮಿಯ ಎರಡನೇಯ ದಿನವಾದ ಇಂದು ಮಹಿಳೆಯರು ಶುಚಿಭೂತರಾಗಿ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ನಾಗಬನಗಳಿಗೆ ತೆರಳಿ ಸರತಿಯಲ್ಲಿ ನಿಂತು ಕಲ್ಲಿನ ನಾಗಪ್ಪನಿಗೆ ಹಾಲೆರೆದು ಪೂಜೆ ಸಲ್ಲಿಸಿ ಸಂಭ್ರಮಿಸಿದರು. ವಿವಿಧ ಥರದ ಉಂಡೆ ಉಸುಳೆಗಳನ್ನು ನಾಗಪ್ಪನಿಗೆ ನೈವೇದ್ಯ ಅರ್ಪಿಸಿದರು. ಜಿಟಿ ಜಿಟಿ ಮಳೆ ನಡುವೆಯೂ ಮಹಿಳೆಯರು ನಾಗಬನಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
"ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿ ಹಬ್ಬವನ್ನು ಮೂರು ದಿನಗಳ ಕಾಲ ಆಚರಿಸಲಾಗುತ್ತದೆ. ಮೊದಲ ದಿನವಾದ ಬುಧವಾರ ಮನೆಯಲ್ಲಿ ರೊಟ್ಟಿ ಪಂಚಮಿ ಆಚರಿಸಿ ಪಂಚಮಿಗೆ ಬೇಕಾಗುವ ರೊಟ್ಟಿ ಮತ್ತು ಉಂಡೆಗಳನ್ನು ಕಟ್ಟಿದೆವು. ಶೇಂಗಾ, ಎಳ್ಳು, ರವೆ ಬೊಂದಿ ಸೇರಿದಂತೆ ವಿವಿಧ ಬಗೆಯ ಉಂಡೆಗಳನ್ನು ಸಿದ್ದಪಡಿಸಿಕೊಂಡೆವು. ಇಂದು ನಾಗಬನಗಳಿಗೆ ತೆರಳಿ ನಾಗಪ್ಪನಿಗೆ ಹಾಲೆರೆದು ಪೂಜೆ ಸಲ್ಲಿಸುತ್ತಿದ್ದೇವೆ. ಶುಕ್ರವಾರ ಮನೆಯಲ್ಲಿನ ಮಣ್ಣಿನ ನಾಗಪ್ಪನಿಗೆ ಹಾಲೆರೆದು ಪೂಜೆ ಸಲ್ಲಿಸುತ್ತೇವೆ. ಜೋಕಾಲಿಗಳನ್ನು ಕಟ್ಟಿ ಆಡುವ ಮೂಲಕ ಹಬ್ಬವನ್ನು ಸಂಭ್ರಮಿಸುತ್ತೇವೆ" ಎಂದು ಗೃಹಿಣಿ ರೇಖಾ ತಿಳಿಸಿದರು.
ಇದನ್ನೂ ಓದಿ: ಶ್ರಾವಣಮಾಸದ ಮೊದಲ ಹಬ್ಬ: ಸೋಮೇಶ್ವರ ಸನ್ನಿಧಾನದಲ್ಲಿ ಮಹಿಳೆಯರಿಂದ ನಾಗರಪಂಚಮಿ ಆಚರಣೆ - Nagara Panchami Celebration