ದಾವಣಗೆರೆ: ಮುರುಘಾ ಮಠದ ಶಾಖಾ ಮಠದಲ್ಲಿ ಶಾಲಾ ಮಕ್ಕಳಿಗೆ ಬಾದಾಮಿ ಹಾಲು ನೀಡುವ ಮೂಲಕ ನಾಗರ ಪಂಚಮಿ ಹಬ್ಬ ವಿಭಿನ್ನವಾಗಿ ಆಚರಣೆ ಮಾಡಲಾಯಿತು. ವಿರಕ್ತಮಠದ ಪೀಠಾಧಿಪತಿ ಬಸವಪ್ರಭು ಸ್ವಾಮೀಜಿ ಮಠದಲ್ಲೇ ಮಕ್ಕಳಿಗೆ ಕುಡಿಯಲು ಬಾದಾಮಿ ಹಾಲು ನೀಡಿ ಮಕ್ಕಳೊಂದಿಗೆ ನಾಗರ ಪಂಚಮಿ ಹಬ್ಬವನ್ನು ಆಚರಣೆ ಮಾಡಿದರು.
ದಾವಣಗೆರೆ ನಗರದ ವಿರಕ್ತ ಮಠದಲ್ಲಿ ಮಕ್ಕಳನ್ನು ಸೇರಿಸಿದ ಸ್ವಾಮೀಜಿ, "ಕಲ್ಲಿನ ನಾಗರಕ್ಕೆ, ಹುತ್ತಕ್ಕೆ ಹಾಲು ಹಾಕಿ ಮಣ್ಣುಪಾಲು ಮಾಡುವ ಬದಲು ಆ ಹಾಲನ್ನು ಮಕ್ಕಳಿಗೆ, ಹಸಿದವರಿಗೆ ನೀಡಿ" ಎಂದು ಸಂದೇಶ ಸಾರಿದರು.
"ಕಲ್ಲಿನ ನಾಗರಕ್ಕೆ ಹಾಲೆರೆಯುವ ಬದಲು ಮಕ್ಕಳಿಗೆ ನೀಡಿ ನಾಗರ ಪಂಚಮಿಯನ್ನು ಬಸವ ಪಂಚಮಿ ಎಂದು ಆಚರಣೆ ಮಾಡಲಾಗುತ್ತಿದೆ. ಹಸಿದ ಜನರಿಗೆ ಊಟ ಕೊಡುವ ಬದಲು ನಾವು ಹೊಟ್ಟೆ ತುಂಬಿದವರಿಗೆ ಊಟ ಕೊಡುತ್ತೇವೆ. ಹಸಿವು ಎಂದು ಮನೆ ಮುಂದೆ ಬರುವವರಿಗೆ ಅಡಿಗೆ ಆಗಿಲ್ಲ ಮುಂದೆ ಹೋಗಪ್ಪ ಎಂದು ಗದರುತ್ತೇವೆ. ಅದೇ ಹಬ್ಬ ಹರಿದಿನಗಳಲ್ಲಿ ತಿನ್ನಲು ಆಗದ ದೇವರಿಗೆ ಮೃಷ್ಠಾನ್ನ ಭೋಜನ ಸಿದ್ಧಪಡಿಸಿ ನೈವೇದ್ಯಕ್ಕೀಡುತ್ತಾರೆ. ಹಸಿದವನಲ್ಲಿ ದೇವರಿದ್ದಾನೆ. ಹಾಗಾಗಿ ಹಸಿದವರಿಗೆ ಆಹಾರ ನೀಡಿ" ಎಂದು ಮಕ್ಕಳಿಗೆ ಹಾಗೂ ಪೋಷಕರಿಗೆ ಕಿವಿಮಾತು ಹೇಳಿದರು.
ಇದನ್ನೂ ಓದಿ: ನಾಗರಪಂಚಮಿ: ಸುಬ್ರಹ್ಮಣ್ಯ, ಕುಡುಪು ಮೂಲ ನಾಗಬನಗಳಲ್ಲಿ ವಿಶೇಷ ಪೂಜೆ - Nagarapanchami Festival