ಬೆಂಗಳೂರು: ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣದಲ್ಲಿ ಗಣಪತಿ ನಿಮಜ್ಜನ ಮೆರವಣಿಗೆ ವೇಳೆ ನಡೆದ ಗಲಭೆ ಸಂಬಂಧ ರಚಿಸಲಾಗಿದ್ದ ಸತ್ಯಶೋಧನಾ ಸಮಿತಿಯು ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ವರದಿ ಸಲ್ಲಿಸಿತು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಗೆ ಆಗಮಿಸಿದ ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ್, ನೇತೃತ್ವದಲ್ಲಿ ರಚಿಸಲಾಗಿದ್ದ ಬೈರತಿ ಬಸವರಾಜ್, ಭಾಸ್ಕರ ರಾವ್, ನಾರಾಯಣಗೌಡರನ್ನು ಒಳಗೊಂಡ ಸತ್ಯ ಶೋಧನಾ ಸಮಿತಿ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿ ಮಾಡಿತು. ನಾಗಮಂಗಲ ಗಲಭೆ ಘಟನೆ ಸಂಬಂಧ ಸ್ಥಳದ ಅಧ್ಯಯನ ಕುರಿತಾದ ಸಮಗ್ರ ವಿವರಗಳನ್ನೊಳಗೊಂಡ ವಿಸ್ತೃತ ವರದಿಯನ್ನು ಸಲ್ಲಿಕೆ ಮಾಡಿತು. ವರದಿ ಸ್ವೀಕರಿಸಿದ ವಿಜಯೇಂದ್ರ ಫೋಟೋ ಪ್ರತಿಗಳನ್ನು ಒಳಗೊಂಡ ವಿವರಣೆಯನ್ನು ಪರಿಶೀಲಿಸಿದರು. ಕಾಲಮಿತಿಯಲ್ಲಿ ವರದಿ ನೀಡಿದ ತಂಡವನ್ನು ಶ್ಲಾಘಿಸಿದರು.

ನಂತರ ಮಾತನಾಡಿದ ವಿಜಯೇಂದ್ರ, "ನಾಗಮಂಗಲದಲ್ಲಿ ಹಿಂದು ಯುವಕರು ಗಣೇಶೋತ್ಸವ ಮಾಡುವಾಗ ಒಂದು ಕೋಮಿನ ದೇಶದ್ರೋಹಿಗಳು ಕತ್ತಿ ತಲ್ವಾರ್ ತಗೊಂಡು, ಹಿಂದೂಗಳ ಅಂಗಡಿ ಮುಂಗಟ್ಟಿನ ಮೇಲೆ ದಾಳಿ ಮಾಡಿದ್ದರು. ಆಸ್ತಿ ಪಾಸ್ತಿ ನಷ್ಟ ಮಾಡಿದ್ದರು. ಪೊಲೀಸ್ ಕಣ್ಮುಂದೆ ನಡೆದಿದ್ದ ದುರ್ಘಟನೆ ಇದಾಗಿತ್ತು. ನಾವು ನಾಗಮಂಗಲಕ್ಕೆ ಹೋಗಿದ್ದೆವು. ಪ್ರತ್ಯಕ್ಷವಾಗಿ ಜನರನ್ನು ಮಾತನಾಡಿಸಿದ್ದೇವೆ. ಡಾ.ಅಶ್ವತ್ ನಾರಾಯಣ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದೆವು. ಅಲ್ಲಿನ ಸತ್ಯಾಸತ್ಯತೆ ಅರ್ಥ ಮಾಡಿಕೊಂಡು ವರದಿ ನೀಡಿದ್ದಾರೆ. ಗಲಭೆ ಘಟನೆ ಕುರಿತು ಎನ್ಐಎ ತನಿಖೆ ಅಗತ್ಯವಿದೆ" ಎಂದರು.

ನಾಗಮಂಗಲದಲ್ಲಿ ರಾಜಕೀಯ, ತುಷ್ಟೀಕರಣದಿಂದ ಗಲಭೆ: "ನಾಗಮಂಗಲದಲ್ಲಿ ಅದ್ಭುತವಾದ ಸೌಹಾರ್ದತೆ ಇತ್ತು. ಕಾಲಕಾಲದಲ್ಲಿ ರಾಜಕೀಯದ ಹಸ್ತಕ್ಷೇಪ, ವಿಭಜನೆಯ ರಾಜಕಾರಣ ಮತ್ತು ತುಷ್ಟೀಕರಣದ ಕಾರಣದಿಂದ ಗಲಭೆ ನಡೆದಿದೆ. ಮತಕ್ಕಾಗಿ ಆಪಾದಿತರ ಕೇಸುಗಳನ್ನು ಹಿಂಪಡೆಯಲಾಗಿದೆ. ಪೊಲೀಸರ ಸಂಪೂರ್ಣ ವೈಫಲ್ಯತೆ ಕಾಣುತ್ತದೆ. ಪೊಲೀಸರ ಕೈಕಟ್ಟಿ ಹಾಕಿದ್ದರು. ಏನೂ ಕ್ರಮ ಕೈಗೊಳ್ಳಲು ಅವರಿಗೆ ಅವಕಾಶ ಇರಲಿಲ್ಲ. ಯಾರ ಮೇಲೂ ಕೇಸ್ ಮಾಡುವ ಆಗಿಲ್ಲ. ಯಾರ ಮೇಲೂ ಕ್ರಮ ಕೈಗೊಳ್ಳುವಂತಿಲ್ಲ ಎಂಬ ಸ್ಥಿತಿ ಪೊಲೀಸರದ್ದಾಗಿತ್ತು" ಎಂದು ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್ ವಿಶ್ಲೇಷಿಸಿದರು.

ಇದೊಂದು ಪೂರ್ವಯೋಜಿತ ಕೃತ್ಯ: "25ರಿಂದ 30 ಜನರು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮಾಡುತ್ತಿದ್ದರು. ಆಗ ಗಲಭೆ ಆಗಿದೆ. ಕಳೆದ ವರ್ಷವೂ ಗಲಭೆ ಆಗಿತ್ತು. ಇದು ಗೊತ್ತಿದ್ದರೂ ಕ್ರಮ ಕೈಗೊಂಡಿಲ್ಲ. ಈ ವೈಫಲ್ಯ ಮತ್ತು ತುಷ್ಟೀಕರಣ ಎದ್ದು ಕಾಣುವಂತಿದೆ" ಎಂದು ಆರೋಪಿಸಿದರು. "ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಆರೋಪಿಗಳು ಮಾಸ್ಕ್ ಧರಿಸಿದ್ದು ನೋಡಿದರೆ, ಪೆಟ್ರೋಲ್ ಬಾಂಬ್ ಸಿದ್ಧವಿಟ್ಟಿದ್ದನ್ನು ಗಮನಿಸಿದರೆ ಇದೊಂದು ಪೂರ್ವಯೋಜಿತ ಕೃತ್ಯ ಎಂಬುದು ಗೊತ್ತಾಗುತ್ತದೆ. ನಿರ್ದಿಷ್ಟ ಅಂಗಡಿಗಳನ್ನೇ ಗುರಿ ಮಾಡಿ ಮೂರನೇ ಬಾರಿ ಬಂದು ಬೆಂಕಿ ಹಚ್ಚಿದ್ದಾರೆ" ಎಂದು ಆಕ್ಷೇಪಿಸಿದರು.

"ನಿರ್ದಿಷ್ಟ ಪೆಟ್ರೋಲ್ ಬಂಕ್‍ನಿಂದ ಪೆಟ್ರೋಲ್ ಬಾಂಬ್ಗೆ ಪೆಟ್ರೋಲ್ ಕೊಡಲಾಗಿದೆ. ನಾಗಮಂಗಲು ತಲೆಮರೆಸಿಕೊಂಡಿರುವವರ, ಸಮಾಜಬಾಹಿರ ಶಕ್ತಿಗಳ, ದೇಶದ್ರೋಹಿಗಳ, ಪಿಎಫ್‍ಐ ಚಟುವಟಿಕೆಗಳ ನೆಲೆಯಾಗಿದೆ. ಮಾದಕ ವಸ್ತುಗಳನ್ನು ಇಲ್ಲಿ ಸಂಗ್ರಹಿಸಿ ಇಡಲಾಗುತ್ತಿದೆ. ಕೇರಳ ಮೂಲದ ವ್ಯಕ್ತಿಗಳು ಭಾಗಿಯಾದ ಕುರಿತು ಗೃಹ ಸಚಿವರೂ ಹೇಳಿದ್ದಾರೆ. ಬಾಂಗ್ಲಾ ದೇಶೀಯರು ಇರುವ ಬಗ್ಗೆ ಅವರೇ ತಿಳಿಸಿದ್ದಾರೆ. 800 ಎಕರೆ ಹೊಂದಿದ ಪ್ರಬಲ ವ್ಯಕ್ತಿಯ ಜಾಗದಲ್ಲಿ ಬಾಂಗ್ಲಾ ದೇಶೀಯರು ಕೆಲಸ ಮಾಡುತ್ತಿದ್ದಾರೆ ಎಂದರಲ್ಲದೇ, ನಿಷೇಧಿತ ಪಿಎಫ್‍ಐ ಚಟುವಟಿಕೆ ಮಾಡಲು ಹೇಗೆ ಅವಕಾಶ ಕೊಟ್ಟಿದ್ದಾರೆ. ಪೊಲೀಸ್ ವೈಫಲ್ಯ ಎದ್ದು ಕಾಣುವಂತಿದೆ" ಎಂದು ದೂರಿದರು.
"ನಮ್ಮ ಆಡಳಿತಾವಧಿಯಲ್ಲಿ ಎಲ್ಲಿಯೂ ಗಣೇಶೋತ್ಸವ ಸಂದರ್ಭದಲ್ಲಿ ಗಲಾಟೆಗಳು ಆಗಿರಲಿಲ್ಲ. ಇವತ್ತು ರಾಜ್ಯದ 8-10 ಕಡೆ ಗಲಭೆಗಳು ಆಗಿವೆ. ವಿನಾ ಕಾರಣ ಪ್ರಚೋದನೆ ನಡೆದಿದೆ. ಅವರ ಚುನಾಯಿತ ಪ್ರತಿನಿಧಿಗಳು ಬಾಂಗ್ಲಾ ದೇಶದ ಪರಿಸ್ಥಿತಿ ನಿರ್ಮಿಸುತ್ತೇವೆ; ಗವರ್ನರ್ ಕಚೇರಿಗೆ ನುಗ್ಗುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಮೋದಿಜೀ ಅವರನ್ನು ಶೇಖ್ ಹಸೀನಾ ತರಹ ಮಾಡುತ್ತೇವೆ ಎಂದು ಎಚ್ಚರಿಕೆ ನೀಡುತ್ತಿದ್ದಾರೆ. ಈ ರೀತಿ ಬಹಿರಂಗ ಹೇಳಿಕೆ ಕೊಟ್ಟರೂ, ಒಂದೇ ಒಂದು ಕೇಸು ದಾಖಲಿಸುತ್ತಿಲ್ಲ" ಎಂದು ಆಕ್ಷೇಪಿಸಿದರು.
ರಾಜ್ಯದಲ್ಲಿ ದ್ವೇಷದ ರಾಜಕಾರಣ: ರಾಜ್ಯದಲ್ಲಿ ದ್ವೇಷದ ರಾಜಕಾರಣ ನಡೆದಿದೆ. ಇವರ ಕಣ್ಮುಂದೆಯೇ ಎಲ್ಲ ರೀತಿಯ ಅನೈತಿಕ ಚಟುವಟಿಕೆ, ಕಾನೂನು ದುರ್ಬಳಕೆ ಆದರೂ ಕೈಕಟ್ಟಿ ಇರುತ್ತಾರೆ. ಪೊಲೀಸ್ ಇಲಾಖೆಯ 8 ಸಿಬ್ಬಂದಿ ಮೇಲೆ ಹಲ್ಲೆ ಆಗಿದೆ. ಗಾಯವಾಗಿದ್ದರೂ ಮೆಡಿಕೊ ಲೀಗಲ್ ಕೇಸ್ (ಎಂಎಲ್‍ಸಿ) ಆಗಿಲ್ಲ. ಮುಗ್ಧ ಜನರ ಮೇಲೆ ಕೇಸು ಹಾಕಿದ್ದಾರೆ" ಎಂದು ಆರೋಪಿಸಿದರು.
ಇದನ್ನೂ ಓದಿ: ನಾಗಮಂಗಲ ಗಲಭೆ ಪ್ರಕರಣ ತನಿಖೆಗೆ ವಿಶೇಷ ತಂಡ ರಚನೆ, ತಪ್ಪಿತಸ್ಥರಿಗೆ ಶಿಕ್ಷೆ : ಸಚಿವ ಚಲುವರಾಯಸ್ವಾಮಿ - Chaluvarayaswamy