ಮೈಸೂರು: ಸಿದ್ದರಾಮಯ್ಯ ಕುಟುಂಬದ ವಿರುದ್ಧ ದಾಖಲಾಗಿರುವ ಪ್ರಕರಣದ ಕುರಿತು ಮೈಸೂರು ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿದ್ದು, ಮುಡಾ ಹಿಂದಿನ ಆಯುಕ್ತ ಪಾಲಯ್ಯ ವಿಚಾರಣೆಗೆ ಹಾಜರಾದರು.
ವಿಚಾರಣೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ಹಿಂದಿನ ಮುಡಾ ಆಯುಕ್ತನಾಗಿದ್ದ ನನಗೆ ಈ ಕೇಸ್ನ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮೊದಲ ಬಾರಿಗೆ ಲೋಕಾಯುಕ್ತರು ನೋಟಿಸ್ ನೀಡಿದ್ದರು. ಆದರೆ ಅಂದು ಸ್ವಂತ ಕೆಲಸ ಇದ್ದ ಕಾರಣ ವಿಚಾರಣೆಗೆ ಬಂದಿರಲಿಲ್ಲ. ಇಂದು ಎರಡನೇ ಬಾರಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಆ ಹಿನ್ನೆಲೆ ಇಂದು ಮೈಸೂರಿನ ಲೋಕಾಯುಕ್ತ ಕಚೇರಿಗೆ ವಿಚಾರಣೆಗೆ ಹಾಜರಾದೆ. ಕಡತದ ಸಹಿ ವಿಚಾರದಲ್ಲಿ ಮಾಹಿತಿ ಕೇಳಿದರು. ಲೋಕಾಯುಕ್ತ ಅಧಿಕಾರಿಗಳು ಕೇಳಿರುವ ಎಲ್ಲಾ ಮಾಹಿತಿ ನೀಡಿದ್ದೇನೆ" ಎಂದು ತಿಳಿಸಿದರು.
ಮುಡಾದಲ್ಲಿ 50:50ರ ಅನುಪಾತದ ಬದಲಿ 14 ನಿವೇಶನ ಪಡೆದ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಅವರ ಸಹೋದರ ಮಲ್ಲಿನಕಾರ್ಜುನ ಸ್ವಾಮಿ ಹಾಗೂ ಕೆಸರೆ ಬಳಿ ಜಮೀನು ಮಾರಿದ ದೇವರಾಜು ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿ, ಮೈಸೂರು ಲೋಕಾಯುಕ್ತದಲ್ಲಿ ವಿಚಾರಣೆ ನಡೆಯುತ್ತಿದೆ.
ಈಗಾಗಲೇ ಪ್ರಕರಣದಲ್ಲಿ ಮೂರನೇ ಆರೋಪಿ ಮಲ್ಲಿಕಾರ್ಜುನ್ ಸ್ವಾಮಿ ಹಾಗೂ ಪ್ರಕರಣದ ನಾಲ್ಕನೇ ಆರೋಪಿ ಜಮೀನು ಮಾರಿರುವ ದೇವರಾಜು ಅವರನ್ನು ಮೈಸೂರು ಲೋಕಾಯುಕ್ತರು ಈಗಾಗಲೇ ನೋಟಿಸ್ ನೀಡಿ ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ಹಿಂದೆ ಮುಡಾ ಆಯುಕ್ತರಾಗಿದ್ದ ಪಾಲಯ್ಯ ಎಂಬುವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಈ ಹಿನ್ನೆಲೆ ಇಂದು ಮೈಸೂರು ಲೋಕಾಯುಕ್ತ ಕಚೇರಿಗೆ ಹಿಂದಿನ ಮುಡಾ ಆಯುಕ್ತ ಪಾಲಯ್ಯ ವಿಚಾರಣೆಗೆ ಹಾಜರಾದರು.
ಇದನ್ನೂ ಓದಿ: ಮುಡಾ ಪ್ರಕರಣ: ತಾರ್ಕಿಕ ಅಂತ್ಯದವರೆಗೆ ನನ್ನ ಹೋರಾಟ- ಸ್ನೇಹಮಯಿ ಕೃಷ್ಣ