ಮೈಸೂರು: ಈ ಸರ್ಕಾರದ ಹಲವು ಮಂತ್ರಿಗಳ ಹೇಳಿಕೆಯನ್ನು ನೋಡಿದ್ದೇನೆ. ಈ ಸರ್ಕಾರದ ಆಯಸ್ಸು, ಬಹಳ ದಿನ ಇರುವುದಿಲ್ಲ. ಅವರೇ ಈ ಸರ್ಕಾರವನ್ನು ತೆಗೆಯುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅವರ ಮನೆಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ದೇವೇಗೌಡರ ಬಗ್ಗೆ ಸಚಿವ ರಾಜಣ್ಣ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅಳಿಯ, ಮಗ, ಮೊಮ್ಮಗ ಎಂದು ಹೇಳುತ್ತಿದ್ದಾರೆ. ಈಗ ರಾಜಣ್ಣನ ಕುಟುಂಬ ಏನಾಗಿದೆ? ಅವರ ಮಗನನ್ನು ಎಂ ಎಲ್ ಸಿ ಮಾಡಿದ್ದಾರೆ. ರಾಜಣ್ಣ ವಿಧಾನಸೌಧ ಮೆಟ್ಟಿಲು ಹತ್ತಲು ದೇವೇಗೌಡರ ಪ್ರಚಾರದಿಂದ ಮಾತ್ರ ರಾಜಣ್ಣ ಗೆದ್ದಿದ್ದು, ಈಗ ದೇವೇಗೌಡರು ಭೂಮಿಗೆ ಹೋಗುವವರೆಗೂ ರಾಜಕೀಯ ನಿವೃತ್ತಿ ಇಲ್ಲ ಎಂದು ಟೀಕಿಸಿದ್ದಾರೆ. ಆದರೆ ರಾಜಣ್ಣ ಅವರಿಂದ ಸಲಹೆ ಪಡೆಯುವ ದಯನೀಯ ಸ್ಥಿತಿ ನಮಗೆ ಬಂದಿಲ್ಲ. ಅವರು ಬಂದಿರುವ ಸಂಸ್ಕೃತಿ, ಅವರ ನಾಲಿಗೆಯಿಂದ ಗೊತ್ತಾಗುತ್ತದೆ ಎಂದು ಹೇಳಿದರು.
ಸಚಿವ ರಾಜಣ್ಣ ಯಾರನ್ನು ಓಲೈಕೆ ಮಾಡಲು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಆದರೆ ಅವರ ಆಟ ಹೆಚ್ಚು ದಿನ ನಡೆಯುವುದಿಲ್ಲ, ಅವರೇ ಈ ಸರ್ಕಾರವನ್ನು ತೆಗೆಯುತ್ತಾರೆ. ಅವರೆಲ್ಲ ಜಾತಿ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಅವರು ನಮಗೆ ಜಾತ್ಯತೀತ ಪದ ತೆಗೆಯಲಿ ಅಂತಾರೆ, ಆದರೆ ಅವರೇ ಜಾತಿ ಕಾರ್ಡ್ ಪ್ಲೆ ಮಾಡುತ್ತಾ ಇದ್ದಾರೆ. ಈ ಚುನಾವಣೆಯಲ್ಲಿ ಜಾತಿ ಕಾರ್ಡ್ ವರ್ಕೌಟ್ ಆಗುವುದಿಲ್ಲ ಎಂದು ಹೆಚ್ಡಿಕೆ ತಿಳಿಸಿದರು.
ಇತ್ತೀಚೆಗೆ ಒಕ್ಕಲಿಗರ ಮೇಲೆ ಪ್ರೀತಿ ಬಂದಿದೆ ಎಂದು ಟೀಕಿಸಿದ ಕುಮಾರಸ್ವಾಮಿ, 47 ವರ್ಷದಿಂದ ಒಕ್ಕಲಿಗರಿಗೆ ಟಿಕೆಟ್ ಕೊಡಬೇಡಿ ಎಂದು ಹೇಳಿದ್ದು ಯಾರು? ಹಲವು ಮಂತ್ರಿಗಳ ಹೇಳಿಕೆಯನ್ನು ನೋಡಿದ್ದರೆ ಈ ಸರ್ಕಾರ ಬಹಳ ದಿನ ಇರುವುದಿಲ್ಲ. ವಿರೋಧ ಪಕ್ಷದವರು ಪುಲ್ವಾಮ ದಾಳಿಯ ಬಗ್ಗೆ ಈಗ ಮಾತನಾಡುತ್ತಿದ್ದಾರೆ. ಪಾರ್ಲಿಮೆಂಟ್ ಅಲ್ಲಿ ಏಕೆ ಮಾತನಾಡಲಿಲ್ಲ, ಇವರಿಗೆ ಈ ಸಂದರ್ಭದಲ್ಲಿ ಮಾತನಾಡಲು ಬೇರೆ ಸರಕು ಇಲ್ಲ ಎಂದು ಹೆಚ್ಡಿಕೆ ಟೀಕಿಸಿದರು.
ನಾಲ್ಕು ವರ್ಷ ನಂತರ ಹೆಚ್ಡಿಕೆ ಹಾಗೂ ವಿಶ್ವನಾಥ್ ಭೇಟಿ: ನಾಲ್ಕು ವರ್ಷಗಳ ನಂತರ ಮೊದಲ ಬಾರಿಗೆ ಎಚ್ ಡಿ ಕುಮಾರಸ್ವಾಮಿ ಹಾಗೂ ಎಚ್ ವಿಶ್ವನಾಥ್ ಮುಖಾಮುಖಿ ಭೇಟಿ ಆಗಿ ಪರಸ್ಪರ ಮಾತುಕತೆ ನಡೆಸಿದರು. ಬಳಿಕ ಕುಮಾರಸ್ವಾಮಿ ಮಾತನಾಡಿ, ರಾಜಕೀಯದಲ್ಲಿ ಟೀಕೆ, ಟಿಪ್ಪಣಿ ಸಹಜ, ವಿಶ್ವಣ್ಣ ಅದೆಲ್ಲವನ್ನೂ ಮರೆತು ಬೆಂಬಲ ಕೊಟ್ಟಿದ್ದಾರೆ. ಮಂಡ್ಯದಿಂದ ಸ್ಪರ್ಧಿಸುತ್ತಿದ್ದಂತೆ ಕರೆ ಮಾಡಿ ಶುಭಾಶಯ ಕೋರಿದ್ದರು. ದೂರವಾಣಿ ಮೂಲಕ ನನ್ನ ಬೆಂಬಲ ನಿಮಗೆ ಇದೆ ಎಂದು ತಿಳಿಸಿದ್ದರು. ಅವರ ಅಭಿಮಾನಕ್ಕೆ ಸೋತು ಮನೆಗೆ ಬಂದಿದ್ದೇನೆ. ವಿಶ್ವನಾಥ್ ನೇರ, ನಿಷ್ಠುರವಾಗಿ ಮಾತನಾಡುವ ರಾಜಕಾರಣಿ, ಅವರು ಪ್ರಾಮಾಣಿಕರಾಗಿದ್ದಾರೆ. ಈ ಅವರ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.