ಬೆಂಗಳೂರು: ನಾಡಹಬ್ಬ ದಸರಾವನ್ನು ಅಕ್ಬೋಬರ್ 3ರಿಂದ 12ರವರೆಗೆ ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ. ನಾಡಹಬ್ಬವಾಗಿ, ಜನಪರವಾದ ಉತ್ಸವ ಆಗಬೇಕು ಎಂದು ಸೂಚನೆ ನೀಡಿರುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಈ ಬಾರಿ ವಿಜೃಂಭಣೆಯ ದಸರಾ: ವಿಧಾನಸೌಧದಲ್ಲಿ ಇಂದು ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2024 ಕುರಿತು ಉನ್ನತ ಮಟ್ಟದ ಸಮಿತಿ ಸಭೆ ಬಳಿಕ ಮಾತನಾಡಿದ ಅವರು, ದಸರಾ ಉದ್ಘಾಟನೆಯನ್ನು ಯಾರಿಂದ ಮಾಡಿಸಬೇಕು ಎಂಬ ಅಧಿಕಾರವನ್ನು ನನಗೆ ಕೊಡಲಾಗಿದೆ. ಎರಡು ಮೂರು ದಿನಗಳಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ದಸರಾವನ್ನು ವಿಜೃಂಭಣೆಯಿಂದ ಆಕರ್ಷಣೀಯವಾಗಿ ಹಾಗೂ ಅರ್ಥಪೂರ್ಣವಾಗಿ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ರೈತರು ಹರ್ಷದಿಂದಿದ್ದಾರೆ. ಉತ್ತಮ ಬೆಳೆಯಾಗಿದೆ. ರಾಜ್ಯದ ಎಲ್ಲಾ ಜಲಾಶಯಗಳು ತುಂಬಿವೆ. ಕಳೆದ ಬಾರಿ ಬರಗಾಲ ಇತ್ತು. ಹಾಗಾಗಿ ಸರಳವಾಗಿ ಆಚರಣೆ ಮಾಡಲಾಗಿತ್ತು. ಈ ಬಾರಿ ಮಳೆಗಾಲ ಉತ್ತಮವಾಗಿರುವುದರಿಂದ ಅದ್ದೂರಿ ಆಚರಣೆಗೆ ತೀರ್ಮಾನಿಸಲಾಗಿದೆ ಎಂದು ಇದೇ ವೇಳೆ ಹೇಳಿದರು.
ದಸರಾ ಉದ್ಘಾಟನೆಯ ದಿನದಂದೇ ಸಾಂಸ್ಕೃತಿಕ ಕಾರ್ಯಕ್ರಮ, ದೀಪಾಲಂಕಾರ, ವಸ್ತು ಪ್ರದರ್ಶನ, ಕುಸ್ತಿ ಉದ್ಘಾಟನೆಯಾಗಲಿದೆ. ಯುವ ದಸರಾ, ಕ್ರೀಡೆಗಳು ಅಂದೇ ಉದ್ಘಾಟನೆಯಾಗಲಿದೆ. ಇನ್ನು ವಸ್ತು ಪ್ರದರ್ಶನ ಉದ್ಘಾಟನೆಯಂದು ಖಾಲಿ ಮಳಿಗೆಗಳು ಇರಬಾರದು. ಎಲ್ಲಾ ಮಳಿಗೆ ಭರ್ತಿಯಾಗಿರಬೇಕು. ವಸ್ತು ಪ್ರದರ್ಶನದಲ್ಲಿ ಸರ್ಕಾರದ ಸಾಧನೆ, ಕಾರ್ಯಕ್ರಮಗಳನ್ನು ಪ್ರದರ್ಶನ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
21 ದಿನ ದೀಪಾಲಂಕಾರ: ದೀಪಾಲಂಕಾರವನ್ನು ಈ ಬಾರಿ 21 ದಿನಗಳ ಕಾಲ ನಡೆಸಲು ತೀರ್ಮಾನಿಸಲಾಗಿದೆ. ಹೆಚ್ಚು ಆಕರ್ಷಣೀಯ ದೀಪಾಲಂಕಾರ ಮಾಡುವಂತೆ ಸೂಚನೆ ನೀಡಲಾಗಿದೆ. ಪ್ರವಾಸಿಗರಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ, ಭದ್ರತೆ ಒದಗಿಸಲು ಸೂಚನೆ ನೀಡಲಾಗಿದೆ. ಈ ಬಾರಿ ಗೋಲ್ಡ್ ಕಾರ್ಡ್ ದುರ್ಬಳಕೆಯಾಗದಂತೆ ಎಲ್ಲಾ ನಿಗಾ ವಹಿಸಲು ಸೂಚಿಸಲಾಗಿದೆ ಎಂದರು.
ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚನೆ ಸಂಬಂಧದ ಮಸೂದೆಗೆ ಹೈಕೋರ್ಟ್ ತಡೆಯಾಜ್ಞೆ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಸಂಬಂಧ ಕಾನೂನು ಮಾಡಿದ್ದೇವೆ. ಪ್ರಮೋದಾದೇವಿ ಹೈಕೋರ್ಟ್ನಲ್ಲಿ ಸ್ಟೇ ತಂದಿದ್ದಾರೆ. ನ್ಯಾಯಾಲಯದಲ್ಲಿ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಬೇಕು. ನಮ್ಮ ಕಲಾವಿದರು ಹೆಚ್ಚು ಸಮರ್ಥರಿದ್ದಾರೆ. ಟ್ಯಾಬ್ಲೋಗಳು ಹೆಚ್ಚು ಆಕರ್ಷಕ ಮತ್ತು ಅರ್ಥಪೂರ್ಣವಾಗಿರಬೇಕು. ಕಲೆ, ಸಂಸ್ಕೃತಿ, ಸಾಹಿತ್ಯ, ಕ್ರೀಡೆ, ಆಹಾರ, ವಸ್ತು ಪ್ರದರ್ಶನ, ಕುಸ್ತಿ ಪ್ರದರ್ಶನ, ದೀಪಾಂಲಕಾರ ಸೇರಿ ಪ್ರತಿಯೊಂದೂ ಆಕರ್ಷಣೀಯ ಮತ್ತು ಅರ್ಥಪೂರ್ಣವಾಗಿರಬೇಕು ಎಂದು ಸೂಚಿಸಿದರು.
ಗ್ಯಾರಂಟಿ ಯೋಜನೆಗಳು ಮತ್ತು ಸರ್ಕಾರದ ಸಾರ್ಥಕ ಕೆಲಸಗಳ ಪ್ರದರ್ಶನ ಮತ್ತು ತಿಳಿವಳಿಕೆ ಮೂಡಿಸಬೇಕು. ಟ್ಯಾಬ್ಲೋಗಳಲ್ಲಿ ಹೊಸತನ ಇರಲಿ. ವಿಜೃಂಭಣೆಯ ನಾಡ ಹಬ್ಬಕ್ಕೆ ಅಗತ್ಯವಿದ್ದಷ್ಟು ಹಣವನ್ನು ನೀಡುತ್ತೇವೆ. ಯುವ ದಸರಾ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲೆ, ಪ್ರತಿಭೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ. ಕರ್ನಾಟಕ ಸಂಭ್ರಮ 50 ನವೆಂಬರ್‌ವರೆಗೂ ನಡೆಯಲಿದೆ. ದಸರಾದಲ್ಲಿ ಇದನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯಕ್ರಮ ರೂಪಿಸಿ ಎಂದು ಸಿಎಂ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.
ದಸರಾ ಉದ್ಘಾಟನೆ ಯಾರಿಂದ ಮಾಡಿಸಬೇಕು ಎನ್ನುವ ತೀರ್ಮಾನವನ್ನು ಮುಖ್ಯಮಂತ್ರಿಗಳಿಗೆ ಒಪ್ಪಿಸಿ ಸಭೆ ನಿರ್ಧರಿಸಿತು. ಏರ್ ಶೋಗೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದು ಮನವಿ ಮಾಡಲಾಗುವುದು. ಸ್ವಲ್ಪ ಹೆಚ್ಚಿನ ಸಮಯ ಏರ್ ಶೋ ನಡೆಸಲೂ ವಿನಂತಿಸಲಾಗುವುದು. ಅಧಿಕಾರಿಗಳು ಈಗಿನಿಂದಲೇ ಸಿದ್ಧತೆ ಆರಂಭಿಸಬೇಕು ಎಂದು ತಿಳಿಸಿದರು.
ಸುತ್ತೂರು ಶ್ರೀಗಳ ಹೆಸರು ಪ್ರಸ್ತಾಪ: ಈ ಬಾರಿ ನಾಡ ಹಬ್ಬದ ಉದ್ಘಾಟಕರಾಗಿ ಸುತ್ತೂರು ಶ್ರೀಗಳನ್ನು ಆಹ್ವಾನಿಸುವಂತೆ ಕೆ.ಆರ್.ಕ್ಷೇತ್ರದ ಶಾಸಕ ಶ್ರೀವತ್ಸ ಸಭೆಯಲ್ಲಿ ಪ್ರಸ್ತಾವನೆ ಇಟ್ಟರು. ದಸರಾ ಉದ್ಘಾಟಕರ ಆಯ್ಕೆ ಅಧಿಕಾರವನ್ನು ಸಿಎಂ ಸಿದ್ದರಾಮಯ್ಯಗೆ ಉನ್ನತ ಮಟ್ಟದ ಸಮಿತಿ ಸಭೆ ನೀಡಿದೆ. ಕಳೆದ ಬಾರಿಯೂ ಶಾಸಕ ಶ್ರೀವತ್ಸ ಸುತ್ತೂರು ಶ್ರೀಗಳ ಹೆಸರನ್ನು ಸಭೆಯಲ್ಲಿ ಪ್ರಸ್ತಾಪಿಸಿದ್ದರು.
ದಸರಾ ಉತ್ಸವದ ವೇಳಾಪಟ್ಟಿ ಹೀಗಿದೆ: 3.10.2024ರಂದು ದಸರಾ ಉದ್ಘಾಟನೆ, ಅಂದು ಚಾಮುಂಡಿ ಬೆಟ್ಟದಲ್ಲಿ ನಾಡದೇವಿಗೆ ಬೆಳಗ್ಗೆ 9.15ರಿಂದ 9.45 ಗಂಟೆಗೆ ಪೂಜೆ ನಡೆಯಲಿದೆ. 11.10.2024ರಂದು ಆಯುಧ ಪೂಜೆ. 12.10.2024ಗೆ ಜಂಬೂ ಸವಾರಿ ನಡೆಯಲಿದೆ. ಅಂದು ನಂದಿಧ್ವಜ ಪೂಜೆ ಮಧ್ಯಾಹ್ನ 1.41-2.10 ಗಂಟೆಗೆ ನೆರವೇರಲಿದೆ. ಜಂಬೂ ಸವಾರಿಗೆ ಪುಷ್ಪಾರ್ಚನೆ ಸಂಜೆ 4-4.30 ಗಂಟೆಗೆ ನೆರವೇರಲಿದೆ.