ಮಂಡ್ಯ: ಮೈಸೂರು ಸಕ್ಕರೆ ಕಾರ್ಖಾನೆ (ಮೈಶುಗರ್)ನಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವಿಕೆ ಸಂಬಂಧ ಜೂನ್ 30ರಂದು ಅಗ್ನಿಸ್ಪರ್ಶ ಪೂಜಾ ಕಾರ್ಯಕ್ರಮದೊಂದಿಗೆ ಕಾರ್ಯಾರಂಭಿಸಲಿದೆ. ಜೂನ್ 30ರಿಂದ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬಾಯ್ಲರ್‌ಗೆ ಅಗ್ನಿಸ್ಪರ್ಶ ಮಾಡುವ ಮೂಲಕ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಈಗಾಗಲೇ ಕಾರ್ಖಾನೆಯ ಯಂತ್ರೋಪಕರಣಗಳ ದುರಸ್ತಿ ಕಾರ್ಯ ಪೂರ್ಣಗೊಂಡಿದೆ. ಸಂಪ್ರದಾಯದಂತೆ ಗಣಪತಿ ಹೋಮ, ಪೂಜೆ ನಂತರ ಕಾರ್ಖಾನೆ ಬಾಯ್ಲರ್‌ಗೆ ಅಗ್ನಿಸ್ಪರ್ಶ ನೆರವೇರಲಿದೆ.
ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, "ಜುಲೈ ಎರಡನೇ ವಾರದಲ್ಲಿ ಮೈಶುಗರ್‌ನಲ್ಲಿ ಕಬ್ಬು ಅರೆಯುವಿಕೆಗೆ ಚಾಲನೆ ನೀಡಲಾಗುವುದು. ಈಗಾಗಲೇ ಕಾರ್ಖಾನೆಯಲ್ಲಿ ಓವರ್ ಆಯಿಲಿಂಗ್, ದುರಸ್ತಿ ಹಾಗೂ ಸ್ವಚ್ಛತೆ ಸಹಿತ ಅಗತ್ಯ ಸಿದ್ಧತೆ ನಡೆಸಲಾಗಿದೆ. ಹೀಗಾಗಿ ಕಾರ್ಖಾನೆ ಬಾಯ್ಲರ್‌ಗೆ ಅಗ್ನಿಸ್ಪರ್ಶ ಮಾಡಲಾಗುತ್ತಿದೆ. ಅಂದು ಬೆಳಗ್ಗೆ 10 ಗಂಟೆಗೆ ನಡೆಯುವ ಪೂಜಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಜಿಲ್ಲೆಯ ಎಲ್ಲ ಶಾಸಕರು, ಜನಪ್ರತಿನಿಧಿಗಳು ಭಾಗವಹಿಸುವರು. ಪ್ರಸಕ್ತ ಸಾಲಿನಲ್ಲಿ 2.50 ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಲಾಗಿದ್ದು, ಈಗಾಗಲೇ 1.90 ಲಕ್ಷ ಟನ್ ಕಬ್ಬು ಒಪ್ಪಿಗೆ ಮಾಡಿಕೊಳ್ಳಲಾಗಿದೆ" ಎಂದರು.
"ಕಳೆದ ವರ್ಷ ಸರಿಯಾಗಿ ಮಳೆ ಬಾರದ ಕಾರಣ ಕಬ್ಬಿನ ಕೊರತೆ ಎದುರಾಗಿತ್ತು. ಆದರೂ ಕಾರ್ಖಾನೆಯಲ್ಲಿ 2,41,305 ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿತ್ತು. ಕಬ್ಬು ಸರಬರಾಜು ಮಾಡಿದ ಎಲ್ಲ ರೈತರಿಗೂ ಸಂಪೂರ್ಣ ಹಣವನ್ನು ಪಾವತಿಸಲಾಗಿದೆ. ಈ ಬಾರಿ ಕೂಡ ಕಬ್ಬಿನ ಕೊರತೆ ಎದುರಾಗುವ ಸಾಧ್ಯತೆಗಳಿದ್ದು, ಹೊರ ಜಿಲ್ಲೆಯಿಂದ ಕಬ್ಬು ತಂದು ನುರಿಸಲು ಚಿಂತನೆ ನಡೆಸಲಾಗಿದೆ" ಎಂದು ಹೇಳಿದರು.
ಮಂಡ್ಯ ಶಾಸಕ ಗಣಿಗ ಪಿ.ರವಿಕುಮಾರ್ ಮಾತನಾಡಿ, "ಮೈಶುಗರ್ ವ್ಯಾಪ್ತಿಯ ಕಬ್ಬನ್ನು ಇತರೆ ಖಾಸಗಿ ಕಾರ್ಖಾನೆಯವರು ಕೊಂಡೊಯ್ಯುವುದನ್ನು ನಿರ್ಬಂಸಲಾಗಿದೆ. ಇದನ್ನು ತಡೆಯಲು ಈಗಾಗಲೇ ಜಾಗೃತ ದಳ ರಚಿಸಲಾಗಿದೆ. ಒಂದು ವೇಳೆ ನಿಯಮ ಮೀರಿ ಕಾನೂನುಬಾಹಿರ ಕೃತ್ಯಗಳು ಕಂಡುಬಂದಲ್ಲಿ ಅವರ ಪರವಾನಗಿ ರದ್ದುಪಡಿಸುವಂತೆ ಸರಕಾರಕ್ಕೆ ಶಿಫಾರಸು ಮಾಡಲಾಗುವುದು" ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಸಿಎಂ ಬದಲಾವಣೆ: ಸ್ವಾಮೀಜಿ ಹೇಳಿಕೆ ಹಿಂದೆ ವಿರೋಧ ಪಕ್ಷಗಳ ಕೈವಾಡ- ಚಲುವರಾಯಸ್ವಾಮಿ - N Chaluvarayaswamy