ಬೆಂಗಳೂರು: ರಾಜ್ಯದಲ್ಲಿನ ಒಂದು ನೂರು ರಾಮ ಮಂದಿರಗಳು ಮತ್ತು ಹನುಮ ದೇವಾಲಯಗಳ ಜೀರ್ಣೋದ್ಧಾರ ಮತ್ತು ಅಭಿವೃದ್ಧಿಗಾಗಿ ಮುಜರಾಯಿ ಇಲಾಖೆಯು ಬಜೆಟ್ನಲ್ಲಿ 100 ಕೋಟಿ ರೂಪಾಯಿಗಳ ಅನುದಾನ ಘೋಷಣೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದೆ.
ಅಯೊಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಪ್ರತಿತಂತ್ರವಾಗಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿಯೂ ಹಿಂದೂ ಸಮುದಾಯದ ಮತಗಳನ್ನು ಸೆಳೆಯುವಲ್ಲಿ ಅನುಕೂಲವಾಗುವಂತೆ ಈ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಿ ಅದರ ರಾಜಕೀಯ ಲಾಭ ಪಡೆಯಲು ಸಾಧ್ಯತೆಗಳಿರುವುದರಿಂದ, ಇದಕ್ಕೆ ಪ್ರತಿತಂತ್ರವಾಗಿ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಕೂಡ ರಾಮ ಭಕ್ತರು ಮತ್ತು ಹಿಂದೂ ಸಮುದಾಯದ ಮತಗಳನ್ನು ಆಕರ್ಷಿಸಲು ಹಲವಾರು ಯೋಜನೆಗಳನ್ನು ರೂಪಿಸತೊಡಗಿದೆ.
ರಾಜ್ಯದಲ್ಲಿನ ನೂರು ರಾಮ ಮಂದಿರ ಮತ್ತು ಹನುಮ ದೇವಾಲಯಗಳ ಅಭಿವೃದ್ಧಿಗೆ ಬಜೆಟ್ನಲ್ಲಿ ನೂರು ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿರುವುದನ್ನು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಖಚಿತಪಡಿಸಿದ್ದಾರೆ. ಇದೇ ತಿಂಗಳ 16 ರಂದು ಮಂಡನೆಯಾಗುವ ಮುಂಗಡಪತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಸ್ಥಾವನೆ ಪ್ರಕಾರ ರಾಮಮಂದಿರಗಳ ಅಭಿವೃದ್ಧಿಗೆ ಯೋಜನೆ ಪ್ರಕಟಿಸಲಿದ್ದಾರೆಯೇ ಎನ್ನುವ ಕುತೂಹಲ ಇದೀಗ ಮೂಡಿದೆ.
ಅಯೋಧ್ಯೆಯ ರಾಮ ಮಂದಿರದಲ್ಲಿ ಇರುವುದು ಮಾತ್ರ ರಾಮನಲ್ಲ, ನಮ್ಮ ಊರುಗಳಲ್ಲಿಯೂ ಹಲವಾರು ರಾಮಮಂದಿರಗಳಿವೆ. ಅವುಗಳಿಗೆ ದೇಣಿಗೆ ನೀಡಲಾಗಿದೆ. ನಾವು ಆ ದೇವಸ್ಥಾನಗಳಿಗೆ ಭಕ್ತರಾಗಿ ಇಂದಿಗೂ ನಡೆದುಕೊಳ್ಳುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ್ದರು. ಈ ಬೆಳವಣಿಗೆಯ ನಡುವೆ ರಾಮಮಂದಿರ ಅಭಿವೃದ್ಧಿಗೆ ಮುಜರಾಯಿ ಇಲಾಖೆ ಪ್ರಸ್ತಾವನೆ ಸಲ್ಲಿಸಿರುವುದು ಬಿಜೆಪಿಯ ರಾಮಮಂದಿರ ನಿರ್ಮಾಣ ಅಜೆಂಡಾಕ್ಕೆ ಪ್ರತಿತಂತ್ರ ರೂಪಿಸುವ ರಾಜಕೀಯ ನಡೆ ಎಂದು ಹೇಳಲಾಗುತ್ತಿದೆ.
ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ರಾಜ್ಯದ ದಾರ್ಮಿಕ ಮತ್ತು ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಲ್ಲಿ ಕಳೆದ ಜನವರಿ 22 ರಂದು ವಿಶೇಷ ಪೂಜೆ ಸಲ್ಲಿಸುವಂತೆ ಸರ್ಕಾರಿ ಆದೇಶ ಹೊರಡಿಸಿ ರಾಮಭಕ್ತರ ಗಮನ ಸೆಳೆದಿದ್ದರು. ಈಗ ರಾಜ್ಯದಲ್ಲಿ ವಿಶೇಷವಾಗಿ 100 ರಾಮ ಮಂದಿರಗಳ ಅಭಿವೃದ್ಧಿಗೆ 100 ಕೋಟಿ ರೂಪಾಯಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸುವ ಮೂಲಕ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ, ಬಿಜೆಪಿಯು ಚುನಾವಣೆ ರಾಜಕೀಯ ಲಾಭ ಪಡೆಯುವುದಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: ಸಸ್ಯಕಾಶಿ ಲಾಲ್ಬಾಗ್ನಲ್ಲಿ ಪ್ರವಾಸಿಗರ ಕಣ್ಮನ ಸೆಳೆಯುತ್ತಿರುವ ಆನೆಗಳ ಹಿಂಡು