ಬೆಂಗಳೂರು: ಯುಗಾದಿ ಹಬ್ಬದ ಹೊಸ ತೊಡಕಿಗೆ ಮಟನ್ ಚೀಟಿ ಹೆಸರಿನಲ್ಲಿ ಹಣ ಪಡೆದು ವಂಚಿಸಿದ್ದ ಆರೋಪದಡಿ ಬಂಧಿತನಾಗಿರುವ ಪುಟ್ಟಸ್ವಾಮಿಗೌಡ ಮನೆಯನ್ನು ಪೊಲೀಸರು ಸುಪರ್ದಿಗೆ ಪಡೆದಿದ್ದು, ಈತ ಸಂಗ್ರಹಿಸಿದ ಹಣದಲ್ಲಿ ತನ್ನ ಸಾಲ ತೀರಿಸಿರುವುದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
ಬ್ಯಾಟರಾಯನಪುರ ಠಾಣಾ ಪೊಲೀಸರ ತನಿಖೆ ವೇಳೆ ಪುಟ್ಟಸ್ವಾಮಿಗೌಡನ ಖಾತೆಯಲ್ಲಿ ಸಾವಿರಕ್ಕಿಂತಲೂ ಕಡಿಮೆ ಹಣವಷ್ಟೇ ಇರುವುದು ತಿಳಿದುಬಂದಿದೆ. ಅಲ್ಲದೆ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದ ಆರೋಪಿ, ಜನರಿಂದ ಪಡೆದ ಲಕ್ಷಾಂತರ ರೂ. ಹಣದಿಂದಲೇ ತನ್ನ ಸಾಲ ತೀರಿಸಿದ್ದಾನಂತೆ. ಆದರೆ ಚೀಟಿ ಹಣ ಮರಳಿಸಲು ಪುನಃ ಸಾಲ ಸಿಗದಿದ್ದಾಗ ನಾಪತ್ತೆಯಾಗಿದ್ದ ಎಂದು ತಿಳಿದು ಬಂದಿದೆ.
ಸದ್ಯ ಆರೋಪಿಯ ಮನೆಯನ್ನು ಪೊಲೀಸರು ತಮ್ಮ ಸುಪರ್ದಿಗೆ ಪಡೆದಿದ್ದು, ಮನೆಯ ಮೇಲೆ ಸಹ ಪುಟ್ಟಸ್ವಾಮಿಗೌಡ ಬ್ಯಾಂಕ್ ಲೋನ್ ಪಡೆದಿದ್ದು ಇನ್ನೂ 80 ಲಕ್ಷ ಸಾಲ ಬಾಕಿಯಿರುವುದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ವಿವರ: ಯುಗಾದಿ ಹಬ್ಬದ ಪ್ರಯುಕ್ತ ಹೊಸತೊಡಕಿಗೆ ಮಟನ್ ಚೀಟಿ ಹೆಸರಲ್ಲಿ ವಂಚಿಸುತ್ತಿದ್ದ ಆರೋಪದಡಿ ಪುಟ್ಟಸ್ವಾಮಿಗೌಡನ್ನು ಎಪ್ರಿಲ್ 3ರಂದು ಬ್ಯಾಟರಾಯನಪುರ ಠಾಣಾ ಪೊಲೀಸರು ಬಂಧಿಸಿದ್ದರು. ಮಟನ್ ಚೀಟಿ ಹೆಸರಿನಲ್ಲಿ ಸುಮಾರು ಐದು ಸಾವಿರ ಜನರಿಂದ ತಿಂಗಳಿಗೆ 400 ರೂ. ನಂತೆ ವರ್ಷಕ್ಕೆ 4,800ರೂ ಕಲೆಕ್ಟ್ ಮಾಡಿದ್ದ ಆರೋಪಿ, ಹಬ್ಬ ಸಮೀಪಿಸುತ್ತಿದ್ದಂತೆ ಯಾರ ಕೈಗೂ ಸಿಗದೇ ಫೋನ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದ. ಇದೇ ಮಾದರಿಯಲ್ಲಿ ಬ್ಯಾಟರಾಯನಪುರ, ಗಿರಿನಗರ ಸುತ್ತಮುತ್ತಲಿನ ಏರಿಯಾಗಳ ಸುಮಾರು ಐದು ಸಾವಿರಕ್ಕೂ ಹೆಚ್ಚು ಜನರಿಂದ ಮಟನ್ ಚೀಟಿ ಹೆಸರಿನಲ್ಲಿ ಹಣ ಪಡೆದು ನಾಪತ್ತೆಯಾಗಿದ್ದ. ಈತನ ವಿರುದ್ಧ ಪ್ರಕರಣಗಳು ದಾಖಲಾಗಿದ್ದ ಹಿನ್ನೆಲೆಯಲ್ಲಿ ಆರೋಪಿಯನ್ನು ಬ್ಯಾಟರಾಯನಪುರ ಠಾಣಾ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ಹೊಸತೊಡಕಿಗೆ ಮಟನ್ ಚೀಟಿ ಹೆಸರಿನಲ್ಲಿ ವಂಚನೆ: ಆರೋಪಿ ಪೊಲೀಸ್ ವಶಕ್ಕೆ - Mutton Cheeti Scam