ಬೆಂಗಳೂರು: ಸ್ನೇಹಿತನನ್ನೇ ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆಗೈದಿದ್ದ ನಾಲ್ವರು ಆರೋಪಿಗಳನ್ನು ಹೆಣ್ಣೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಿಶೋರ್, ನಿರ್ಮಲ್, ವೆಂಕಟರಾಜು ಹಾಗೂ ಸಂತೋಷ್ ಎಂಬವರನ್ನು ಬಂಧಿಸಲಾಗಿದೆ. ಗುರುವಾರ ರಾತ್ರಿ ಹೆಣ್ಣೂರು ಠಾಣಾ ವ್ಯಾಪ್ತಿಯ ಬೃಂದಾವನ ಲೇ ಔಟ್ನಲ್ಲಿ ಕೀರ್ತಿ (26) ಎಂಬಾತನನ್ನು ಹತ್ಯೆಗೈಯ್ಯಲಾಗಿತ್ತು.
ಕೀರ್ತಿ ಹಾಗೂ ಕಿಶೋರ್ ಹಲವು ವರ್ಷಗಳಿಂದ ಸ್ನೇಹಿತರು. ಕೀರ್ತಿ ಪ್ರೀತಿಸಿ ಮದುವೆಯಾಗುವಾಗಲೂ ಸಹ ಕಿಶೋರ್ ಸಹಾಯ ಮಾಡಿದ್ದ. ಆದರೆ ಕೆಲ ತಿಂಗಳ ಹಿಂದೆ ದೊಡ್ಡಪ್ಪನ ಮಗನ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ಜೈಲು ಸೇರಿದ್ದ ಕೀರ್ತಿಗೆ ಜಾಮೀನು ಪಡೆಯಲು ಕಿಶೋರ್ ಸಹಾಯ ಮಾಡಿರಲಿಲ್ಲವಂತೆ. ಅಷ್ಟೇ ಅಲ್ಲದೇ ಜೈಲಿನಲ್ಲಿದ್ದಾಗ ನೋಡಲು ಸಹ ಬರದಿದ್ದ ಕಿಶೋರ್ ಮೇಲೆ ಕೀರ್ತಿ ಸಿಟ್ಟಾಗಿದ್ದ. ಜೈಲಿನಿಂದ ಹೊರಬಂದ ಮೇಲೆ ಅದೇ ಸಿಟ್ಟಿನಲ್ಲೇ ಕಿಶೋರ್ಗೆ ಕರೆ ಮಾಡಿ ಬೆದರಿಕೆ ಹಾಕಿದ್ದ. ಹೀಗಾಗಿ ಗುರುವಾರ ಸಂಜೆ 7:30ರ ಸುಮಾರಿಗೆ ಇಬ್ಬರೂ ರಾಜಿಯಾಗಲು ಸ್ನೇಹಿತರೊಂದಿಗೆ ಬೃಂದಾವನ ಲೇಔಟ್ ಬಳಿ ಸೇರಿದ್ದರು. ಖಾಲಿ ಜಾಗದಲ್ಲಿ ಕುಳಿತು ಮದ್ಯಪಾನ ಮಾಡುವಾಗ ಇಬ್ಬರ ನಡುವೆ ಮತ್ತೆ ಗಲಾಟೆಯಾಗಿದೆ. ಈ ವೇಳೆ ಕೀರ್ತಿಯನ್ನು ಮಾರಕಾಸ್ತ್ರದಿಂದ ಹೊಡೆದು ಹತ್ಯೆಗೈದಿದ್ದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದ್ದ ಹೆಣ್ಣೂರು ಠಾಣಾ ಪೊಲೀಸರು, ಸಾರ್ವಜನಿಕರ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿರುವುದಾಗಿ ಪೂರ್ವ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಬಂಧನಕ್ಕೆ ತೆರಳಿದ್ದ ಸಿಸಿಬಿ ಪೊಲೀಸರ ಮೇಲೆ ಆಫ್ರಿಕನ್ ಪ್ರಜೆಗಳಿಂದ ಹಲ್ಲೆ - Africans Attack Police