ಬೆಂಗಳೂರು : ಬೋಜನ ವಿರಾಮದ ಬಳಿಕ ಸದನ ಆರಂಭವಾಗುತ್ತಿದ್ದಂತೆ ಮೂಡಾ ಹಗರಣದ ಸಂಬಂಧ ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪುನರ್ ಪರಿಶೀಲಿಸುವಂತೆ ಸಭಾಪತಿಗೆ ಮನವಿ ಮಾಡಿದರು.
ಈ ಬಗ್ಗೆ ಪ್ರಸ್ತಾಪಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು ನಿಲುವಳಿ ಸೂಚನೆ ತಿರಸ್ಕರಿಸಿದ್ದು, ಈ ಬಗ್ಗೆ ರೂಲಿಂಗ್ ನೀಡಲಾಗಿದೆ. ಈ ಬಗ್ಗೆ ಯಾರು ಮಾತನಾಡಕೂಡದು ಎಂದರು. ಬಿಜೆಪಿ ಸದಸ್ಯ ರವಿಕುಮಾರ್ ಮಾತನಾಡಿ, ಸಿಎಂ ಕುಟುಂಬವು ಅಕ್ರಮವಾಗಿ 14 ನಿವೇಶನಗಳನ್ನ ಪಡೆದುಕೊಂಡಿದ್ದು, ಈ ಬಗ್ಗೆ ಚರ್ಚೆಗೆ ನಿಲುವಳಿ ಸೂಚನೆ ಮಂಡನೆಗೆ ಅನುಮತಿ ನೀಡುವ ಬಗ್ಗೆ ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ನಿಲುವಳಿ ಸೂಚನೆ ಬಗ್ಗೆ ಈಗಾಗಲೇ ತಿರಸ್ಕೃತ ಮಾಡಲಾಗಿದೆ. ಈ ಬಗ್ಗೆ ಚರ್ಚೆಗೆ ಅವಕಾಶವಿಲ್ಲ ಎಂದು ಸಭಾಪತಿ ಹೇಳುತ್ತಿದ್ದಂತೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಸಿಎಂ ಅವರು ಕಾನೂನುಬಾಹಿರವಾಗಿ ಪತ್ನಿಗೆ 14 ನಿವೇಶನ ಹಂಚಿಕೆ ಮಾಡಿದ್ದಾರೆ. ಈ ಬಗ್ಗೆ ಚರ್ಚೆಯಾಗಬೇಕು ಎಂದು ಪಟ್ಟು ಹಿಡಿದರು.
ನಿಲುವಳಿ ಸೂಚನೆ ಮಂಡನೆ ಸಭಾಪತಿ ಪೀಠದಿಂದ ತಿರಸ್ಕೃತವಾಗಿದ್ದರೂ ಹಲವು ಬಾರಿ ಪುನರ್ ಪರಿಶೀಲಿಸಿ ನಿಲುವಳಿ ಮಂಡನೆಗೆ ಅವಕಾಶ ನೀಡಿದ ಉದಾಹರಣೆಗಳು ಈ ಸದನದಲ್ಲಿದೆ ಎಂದು ಸಿ ಟಿ ರವಿ ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗೃಹ ಸಚಿವ ಪರಮೇಶ್ವರ್, ಸಭಾಪತಿಯವರು ಈ ಬಗ್ಗೆ ರೂಲಿಂಗ್ ನೀಡಿದರೂ ನಿಲುವಳಿ ಸೂಚನೆ ಮಂಡನೆಗೆ ಪಟ್ಟು ಹಿಡಿದಿರುವುದು ಸರಿಯಲ್ಲ ಎಂದರು.
ತಿರಸ್ಕೃತ ಮಾಡಿದ್ದರೂ ಕೂಗಾಟ ಮಾಡುತ್ತಿರುವುದು ಸರಿಯಿಲ್ಲ. ಪುನರ್ ಪರಿಶೀಲನೆ ಮಾಡುವಂತೆ ಪ್ರತ್ಯೇಕವಾಗಿ ಮನವಿ ಪತ್ರ ಕೊಡಿ. ಅದು ಬಿಟ್ಟು ಎದ್ದು ನಿಂತು ಮಾತನಾಡುವುದು ಸರಿಯಿಲ್ಲ. ಇದು ಮೇಲ್ಮನೆಯಾಗಿದ್ದು ಎಲ್ಲರೂ ನೋಡುತ್ತಿರುತ್ತಾರೆ. ಹೀಗೆ ಮುಂದುವರೆದರೆ ಸದನ ನಡೆಸುವುದು ಹೇಗೆ ಎಂದು ವಿಪಕ್ಷ ಸದಸ್ಯರಿಗೆ ಪ್ರಶ್ನಿಸಿದರು.
ಕಾಂಗ್ರೆಸ್ ಸದಸ್ಯ ಪುಟ್ಟಣ ಮಾತನಾಡಿ, ಪೀಠವನ್ನ ದುರುಪಯೋಗ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಮಧ್ಯ ಪ್ರವೇಶಿಸಿದ ಸಭಾಪತಿ ನಿಲುವಳಿ ಮಂಡನೆ ಕುರಿತಂತೆ ಪುನರ್ ಪರಿಶೀಲನೆ ಬಗ್ಗೆ ಲಿಖಿತ ರೂಪದಲ್ಲಿ ಮನವಿ ಪತ್ರ ಬಂದ ಬಳಿಕ ತೀರ್ಮಾನಿಸಿ ರೂಲಿಂಗ್ ಬಗ್ಗೆ ತೀರ್ಮಾನಿಸಲಾಗುವುದು ಎಂದರು. ಅಸಮಾಧಾನ ವ್ಯಕ್ತಪಡಿಸಿದ ವಿಪಕ್ಷ ಸದಸ್ಯರು ಭಾವಿಗಿಳಿದು ಧರಣಿ ನಡೆಸಿದರು. ಸದನ ನಿಯಂತ್ರಣಕ್ಕೆ ಬಾರದ ಹಿನ್ನೆಲೆ 10 ನಿಮಿಷಗಳ ಕಾಲ ಸಭಾಪತಿಯವರು ಮುಂದೂಡಿದರು.
ಇದನ್ನೂ ಓದಿ : ಮುಡಾ ಹಗರಣದ ಚರ್ಚೆಗೆ ಆಗ್ರಹ: ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿಗೆ ಬಿಜೆಪಿ, ಜೆಡಿಎಸ್ ನಿರ್ಧಾರ - Night Protest