ಹಾವೇರಿ: ಮಾಜಿ ಸಿಎಂ, ಹಾವೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಇಂದು ಸಂಸದ ಪ್ರತಾಪ್ ಸಿಂಹ ಪ್ರಚಾರ ಕೈಗೊಂಡರು. ಇದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ವಿಚಾರದಲ್ಲಿ ಹಗಲಿನಲ್ಲಿ ಮರ್ಡರ್ ಮಾತ್ರ ಅಲ್ಲ. ಅದರ ಹಿಂದಿನ ಇಂಟೆನ್ಷನ್ ನೋಡಿ. ಬೆಂಗಳೂರಲ್ಲಿ ಹನುಮಾನ್ ಚಾಲಿಸಾ ಪ್ಲೇ ಮಾಡಿದರೆ ಹಲ್ಲೆ ಮಾಡಿದರು. ಮೈಸೂರಿನಲ್ಲಿ ಮೋದಿಯವರ ಬಗ್ಗೆ ಹಾಡು ಬರೆದಿದ್ದಕ್ಕೆ ಹೊಡೆದರು. ನೇಹಾ ಹತ್ಯೆ ಪರ್ಸನಲ್ ವಿಚಾರ ಅಂತ ಗೃಹ ಸಚಿವರು ಹೇಳ್ತಾರೆ. ಅವರನ್ನು ಬ್ರದರ್ಸ್ ಅಂತ ಹೇಳೋರು ಡಿಸಿಎಂ ಇದ್ದಾರೆ. ದಾಳಿಗೊಳಗಾಗ್ತಿರೋರು ಹಿಂದೂಗಳು ಹೀಗಾಗಿ ಧ್ವನಿ ಎತ್ತಿದ್ದೇವೆ ಎಂದರು.
''ನೇಹಾ ವಿಚಾರ ಬಂದಾಗ ಸಿಎಂ ಏನು ಹೇಳಿದರು?. ತಪ್ಪು ತಪ್ಪೇ ನಾವು ಕ್ರಮ ತಗೊತೀವಿ ಅನ್ನಬಹುದಿತ್ತಲ್ಲವಾ?. ಇವರ ಮನೆಯವರಿಗೆ ಚುಚ್ಚಿ ಸಾಯಿಸಿದರೆ ವೈಯಕ್ತಿಕ ವಿಚಾರ ಆಗುತ್ತಾ? ಹಿಂದೆ ರಾಜು ಮರ್ಡರ್ ಆದಾಗ ಸಿದ್ದರಾಮಯ್ಯ ಅವರ ಮನೆಗೆ ಹೋದರಾ? ರಾಜು ಲಿಂಗಾಯತ ಅನ್ನೋ ಕಾರಣಕ್ಕೆ ಮನೆಗೆ ಹೋಗಲಿಲ್ಲವಾ? ಮಾಧ್ಯಮಗಳಲ್ಲಿ ಬಂದು ಟೀಕೆ ಆದ ಮೇಲೆ ಕಣ್ಣೊರೆಸುವ ಪ್ರಯತ್ನ ಮಾಡ್ತಾರೆ. ಯಾರು ಏನು ಹೇಳಿದರೂ ನಾವು ಹಿಂದೂಗಳ ಪರ ಇರ್ತೀವಿ. ಹಿಂದೂಗಳು ನಮ್ಮ ಬ್ರದರ್ಸ್ ಅಂತೀವಿ'' ಎಂದು ಹೇಳಿದರು.
ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಗೆ ನೀವು ಮತಹಾಕುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವವರಿಗೆ ವೋಟ್ ಹಾಕ್ತಾ ಇದ್ದೀರಿ. ಮುಂದಿನ ಕೇಂದ್ರ ಮಂತ್ರಿಗೆ ವೋಟ್ ಹಾಕ್ತಾ ಇದಿರಿ. ನಿಮ್ಮ ವೋಟು ಬೊಮ್ಮಾಯಿಯವರನ್ನು ಕೇಂದ್ರದಲ್ಲಿ ಒಬ್ಬ ಸಚಿವರನ್ನಾಗಿ ಮಾಡುತ್ತೆ. ನೀರಾವರಿ ವಿಚಾರದಲ್ಲಿ ಅವರನ್ನು ಮೀರಿಸೋ ರಾಜಕಾರಣಿ ಇಲ್ಲ. ಕನಿಷ್ಠ 3 ಲಕ್ಷ ಮತಗಳಿಂದ ಬಸವರಾಜ ಬೊಮ್ಮಾಯಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಇದೇ ವೇಳೆ ಹಾಸನ ಪೆನ್ ಡ್ರೈವ್ ಪ್ರಕರಣದ ಬಗ್ಗೆ ಮಾತನಾಡಿ, ಈ ಕುರಿತಂತೆ ಈಗಾಗಲೇ ಎಸ್ಐಟಿ ರಚನೆ ಆಗಿದೆ. ಯಾರೇ ತಪ್ಪು ಮಾಡಿದ್ದರೂ ತನಿಖೆ ಮಾಡಿ ಶಿಕ್ಷೆ ಕೊಡಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂದರು.
ಸಂಸದ ಶ್ರೀನಿವಾಸ್ ಪ್ರಸಾದ್ ನಿಧನಕ್ಕೆ ಸಂತಾಪ: ಸಂಸದ ಶ್ರೀನಿವಾಸ್ ಪ್ರಸಾದ್ ನಿಧನಕ್ಕೆ ಸಂಸದ ಪ್ರತಾಪ್ ಸಿಂಹ ಸಂತಾಪ ವ್ಯಕ್ತಪಡಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಶ್ರೀನಿವಾಸ್ ಪ್ರಸಾದ್ ಆತ್ಮಕ್ಕೆ ಶಾಂತಿ ಕೋರಿದರು. ಶ್ರೀನಿವಾಸ ಪ್ರಸಾದ್ ವೈಯಕ್ತಿಕವಾಗಿ ನನ್ನನ್ನು ಅವರ ಮಕ್ಕಳನ್ನು ಹಾಗೆ ನೋಡಿಕೊಂಡಿದಾರೆ. ಹಳೇ ಮೈಸೂರು ವಿಭಾಗದಲ್ಲಿ ದಲಿತ ಸಮುದಾಯಕ್ಕೆ ದೊಡ್ಡ ಧ್ವನಿಯಾಗಿದ್ದವರು ಶ್ರೀನಿವಾಸ್ ಪ್ರಸಾದ್. ಸರಿ ತಪ್ಪುಗಳ ವಿಚಾರ ಬಂದಾಗ ನೇರವಾಗಿ ಮಾತನಾಡಿ ಎಲ್ಲ ಸಮಾಜಗಳ ಪ್ರೀತಿ ವಿಶ್ವಾಸ ಗಳಿಸಿದಂತಹ ಸಜ್ಜನಿಕೆಯ ರಾಜಕಾರಣಿ. ಅವರು ಎಲ್ಲಿಯೇ ಸಿಕ್ಕರೂ ಅವರಿಗೆ ಕಾಲುಮುಟ್ಟಿ ನಾನು ನಮಸ್ಕಾರ ಮಾಡುತ್ತಿದ್ದೆ, ಅವರ ವ್ಯಕ್ತಿತ್ವ ಅಂತಹದು ಎಂದರು.
ಒಂದು ನಿಲುವು ತಗೆದುಕೊಳ್ಳುಬೇಕಾದರೆ ತಪ್ಪು ಸರಿ ಎರಡೇ ವಿಚಾರ ಇಟ್ಟುಕೊಂಡು ನಿಲುವು ತೆಗೆದುಕೊಳ್ಳುತ್ತಿದ್ದ ಹಳೇ ಮೈಸೂರು ಭಾಗದ ಏಕಮಾತ್ರ ಹಿಂದುಳಿದ ವರ್ಗದ ನಾಯಕ ಶ್ರೀನಿವಾಸ ಪ್ರಸಾದ್. ಅವರಷ್ಟು ನಿಲುವು ತಗೆದುಕೊಳ್ಳುತ್ತಿದ್ದಂತಹ ವ್ಯಕ್ತಿಯನ್ನು ನಾವು ನೋಡಿರಲು ಸಾಧ್ಯವಿಲ್ಲ. ಅವರ ನಿಧನದಿಂದ ಹಳೇ ಮೈಸೂರು ಭಾಗದ ಧ್ವನಿ ಇಲ್ಲದಂತಾಗಿದೆ. ನಿಷ್ಪಕ್ಷಪಾತ ಹೃದಯ ವೈಶಾಲ್ಯ ಇರುವ ಜೀವವನ್ನು ಕಳೆದುಕೊಂಡಂತಾಗಿದೆ ಎಂದು ಸಂತಾಪ ಸೂಚಿಸಿದರು.