ಬೆಳಗಾವಿ: 'ರಾಜಕಾರಣ ಮಾಡುವುದಕ್ಕೆ ಇನ್ನು ಬಹಳಷ್ಟು ಸಮಯವಿದೆ. ಮೊದಲು ದೊಡ್ಡವರಿಗೆ ಮರ್ಯಾದೆ ಕೊಟ್ಟು ಮಾತನಾಡುವುದನ್ನು ಕಲಿಯಲಿ' ಎನ್ನುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ವಿರುದ್ಧ ಏಕವಚನದಲ್ಲೇ ಸಂಸದೆ ಮಂಗಲ ಅಂಗಡಿ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ನಿಮ್ಮ ತಾಯಿ ಮಾತನಾಡಲಿ, ಆದರೆ ಮೃಣಾಲ್ ನೀನು ಬಹಳ ಚಿಕ್ಕವನು. ರಾಜಕಾರಣ ಮಾಡುವುದಕ್ಕೆ ಸಾಕಷ್ಟು ಸಮಯ ಇದೆ. ಆದರೆ, ಹಿರಿಯ ರಾಜಕಾರಣಿಗಳ ಬಗ್ಗೆ ಮಾತನಾಡುವಾಗ ನಾಲಿಗೆಯ ಮೇಲೆ ಹಿಡಿತ ಇಟ್ಟುಕೊಂಡು ಮಾತನಾಡು" ಎಂದು ಎಚ್ಚರಿಕೆ ಕೊಟ್ಟರು.
"ಬೆಳಗಾವಿ ಗ್ರಾಮೀಣ ಶಾಸಕರು ಮತ್ತು ಅವರ ಪುತ್ರ ಕಳೆದ 20 ವರ್ಷಗಳಿಂದ ಸುರೇಶ್ ಅಂಗಡಿ ಏನು ಮಾಡಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ದಿ. ಸುರೇಶ ಅಂಗಡಿಯವರು ಮತ್ತು ನಾನು ಬೆಳಗಾವಿ ಲೋಕಸಭಾ ವ್ಯಾಪ್ತಿಯಲ್ಲಿ 16,495 ಕೋಟಿ ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಅನುಷ್ಠಾನ ಮಾಡಿದ್ದೇವೆ. ಆದರೂ ನಮ್ಮ ವಿರುದ್ಧ ಕಾಂಗ್ರೆಸ್ನವರು ಅಪಪ್ರಚಾರ ಮಾಡುತ್ತಿದ್ದಾರೆ. 927 ಕೋಟಿ ರೂ. ವೆಚ್ಚದಲ್ಲಿ ಧಾರವಾಡ - ಕಿತ್ತೂರು ನಡುವೆ ನೂತನ ರೈಲ್ವೆ ಮಾರ್ಗ ಯೋಜನೆ ತರಲಾಗಿದೆ. 100 ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿ ನಗರದಲ್ಲಿ ನಾಲ್ಕು ರೈಲ್ವೆ ಕ್ರಾಸಿಂಗ್ ರಸ್ತೆ, ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ. 3,600 ಕೋಟಿ ವೆಚ್ಚದಲ್ಲಿ ರೈಲು ಮಾರ್ಗದ ಡಬ್ಲಿಂಗ್, 210 ಕೋಟಿ ವೆಚ್ಚದಲ್ಲಿ ಬೆಳಗಾವಿ ರೈಲು ನಿಲ್ದಾಣ ನವೀಕರಣ, ವಿದ್ಯುದೀಕರಣ ಕಾರ್ಯ, ಬೆಳಗಾವಿ ವಿಮಾನ ನಿಲ್ದಾಣದಲ್ಲಿ 145 ಕೋಟಿ ಟರ್ಮಿನಲ್ 1 ನಿರ್ಮಾಣ ಹಾಗೂ ಬೆಳಗಾವಿಗೆ ಉಡಾನ್ ಯೋಜನೆ ತರಲಾಗಿದೆ" ಎಂದು ಸಂಸದೆ ಮಂಗಲ ಅಂಗಡಿ ವಿವರಿಸಿದರು.
ಅಂಕಿ- ಅಂಶಗಳ ಸಮೇತ ತಿರುಗೇಟು: ಇದಲ್ಲದೇ 1,100 ಕೋಟಿ ವೆಚ್ಚದ ಸ್ಮಾರ್ಟ್ ಸಿಟಿ ಯೋಜನೆ, ಮಕ್ಕಳ ಶಿಕ್ಷಣದ ಅನಕೂಲಕಕ್ಕಾಗಿ ಎರಡು ಕೇಂದ್ರೀಯ ವಿದ್ಯಾಲಯಗಳು, 3 ಸಾವಿರ ಕೋಟಿ ವೆಚ್ಚದಲ್ಲಿ ರಿಂಗ್ ರಸ್ತೆ ನಿರ್ಮಾಣ ಕಾಮಗಾರಿ, ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿಗೆ ವೇಗ, 36 ಕೋಟಿ ವೆಚ್ಚದಲ್ಲಿ ಗೋಕಾಕ್ ರಸ್ತೆ ನಿರ್ಮಾಣ ಮಾಡಲಾಗಿದೆ. ಹೀಗೆ ಬೆಳಗಾವಿ ಲೋಕಸಭಾ ವ್ಯಾಪ್ತಿಯಲ್ಲಿ ಒಟ್ಟು 16,495 ಕೋಟಿ ವೆಚ್ಚದಲ್ಲಿ ಕಾಮಗಾರಿ ಅನುಷ್ಠಾನ ಮಾಡಿ ಅಭಿವೃದ್ಧಿ ಪಡಿಸಿದ್ದೇವೆ. ಮೃಣಾಲ್ ಸೋಲಿನ ಹತಾಶೆಯಲ್ಲಿ ಏನು ಬೇಕಾದ್ದನ್ನು ಮಾತನಾಡುವುದಲ್ಲ ಎಂದು ಮಂಗಲ ಅಂಗಡಿ ಕಿಡಿಕಾರಿದರು.
ಸಚಿವರಿಗೆ ಸಂಸದರ ಸವಾಲ್: ನನ್ನ ಅವಧಿಯಲ್ಲಿ ಬೆಳಗಾವಿ ನಗರದ ರಿಂಗ್ ರಸ್ತೆ ಕಾಮಗಾರಿಗೆ ಕೇಂದ್ರ ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಚಾಲನೆ ನೀಡಿದ್ದಾರೆ. ಬೆಳಗಾವಿ ಗ್ರಾಮೀಣ ಮತಕ್ಷೇತ್ರಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಷ್ಟು ಅನುದಾನ ತಂದು ಅಭಿವೃದ್ಧಿ ಪಡಿಸಿದ್ದಾರೆ ಎಂದು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದ ಸಂಸದರು, ಸಾಮಾಜಿಕ ಜಾಲತಾಣದಲ್ಲಿ ಅಂಗಡಿ ಕುಟುಂಬದವರ ವಿರುದ್ಧ ಸುಳ್ಳು ಆರೋಪ ಮಾಡಿರುವ ಮೃಣಾಲ್ ವಿರುದ್ಧ ಸೈಬರ್ ಕ್ರೈಮ್ನಲ್ಲಿ ದೂರು ದಾಖಲಿಸಲಾಗುವುದು ಎಂದು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ, ಪಾಲಿಕೆ ಸದಸ್ಯ ಹನುಮಂತ ಕೊಂಗಾಲಿ ಉಪಸ್ಥಿತರಿದ್ದರು.