ಬೆಂಗಳೂರು: ''ಕೋವಿಡ್ ಕಾಲದಲ್ಲಿ ನಾನು ವೈದ್ಯಕೀಯ ಸಚಿವನಾಗಿದ್ದೆ, ಅಂತಃಕರಣದಿಂದ ಕೆಲಸ ಮಾಡಿದ್ದೇನೆ. ನಾನು ಯಾವುದೇ ಕಾನೂನುಬಾಹಿರ ಕೆಲಸ ಮಾಡಿಲ್ಲ. ಅಕ್ರಮ ಆರೋಪವನ್ನು ರಾಜಕೀಯ ಮತ್ತು ಕಾನೂನಾತ್ಮಕವಾಗಿ ಎದುರಿಸುತ್ತೇನೆ'' ಎಂದು ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಪ್ರತಿಕ್ರಿಯಿಸಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಕೋವಿಡ್ ಹಗರಣಗಳ ಆರೋಪ ಸಂಬಂಧ ನಿವೃತ್ತ ನ್ಯಾ.ಜಾನ್ ಮೈಕೆಲ್ ಡಿ ಕುನ್ಹಾ ನೇತೃತ್ವದ ಆಯೋಗದಿಂದ ಮಧ್ಯಂತರ ವರದಿಯನ್ನು ಸರ್ಕಾರ ನಿನ್ನೆ ರಾತ್ರಿ ಪಡೆದಿದೆ. ಎಲ್ಲ ಸೇರಿ ಗುಣಾಕಾರ, ಭಾಗಾಕಾರ ಎಲ್ಲ ಮಾಡಿದ್ದಾರೆ. ನಾನು ಯಾವುದೇ ಕಾನೂನುಬಾಹಿರ ಕೆಲಸ ಮಾಡಿಲ್ಲ. ಯಡಿಯೂರಪ್ಪ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿತ್ತು. ಯಾವುದೇ ತೀರ್ಮಾನವಿದ್ದರೂ ಅದರ ಮೂಲಕವೇ ತೆಗೆದುಕೊಳ್ಳುತ್ತಿದ್ದೆವು'' ಎಂದು ತಿಳಿಸಿದರು.
''ಟಾಸ್ಕ್ ಫೋರ್ಸ್ನಲ್ಲಿ ಹಿರಿಯ ಅಧಿಕಾರಿಗಳು, ತಜ್ಞರು ಇದ್ದರು. ಆಗ ವೈದ್ಯಕೀಯ ತುರ್ತು ಪರಿಸ್ಥಿತಿ ಇತ್ತು. ಈಗ ಇವರು ಇವತ್ತಿನ ದರ ಆಧರಿಸಿ ಲೆಕ್ಕ ಹಾಕಿದ್ದಾರಂತೆ. ವರದಿಯನ್ನು ನಿನ್ನೆ ಸ್ವೀಕಾರ ಮಾಡಿದ್ದಾರೆ. ವರದಿ ಬಗ್ಗೆ ಸರ್ಕಾರದ ಹೇಳಿಕೆ ಬರಲಿ, ಊಹಾಪೋಹಗಳಿಗೆ ನಾನು ಉತ್ತರ ಕೊಡಲ್ಲ. ಈಗ ವರದಿಯಲ್ಲಿ ಅಕ್ರಮದ ಬಗ್ಗೆ ಇದೆ ಅಂತಿದ್ದಾರೆ. ವರದಿಯನ್ನು ಲೀಕ್ ಮಾಡಿದ್ದಾರಾ ಇವರು? ವರದಿ ಯಾರು ಓದಿದ್ದಾರೆ? ನಾನು ಅಧಿಕೃತ ವರದಿ ನೋಡುವವರೆಗೂ ಮಾತಾಡಲ್ಲ. ನಾನು ಇದನ್ನು ಎದುರಿಸುತ್ತೇನೆ. ನಾನು ಆತ್ಮವಂಚನೆ ಮಾಡಿಕೊಳ್ಳದೇ, ನನ್ನ ಪ್ರಾಣ ಒತ್ತೆ ಇಟ್ಟು ಊಟ, ತಿಂಡಿ ಮರೆತು, ಹಗಲಿರುಳು ರೋಗಿಗಳ ಸೇವೆ ಮಾಡಿದ್ದೇನೆ'' ಎಂದು ಸುಧಾಕರ್ ಹೇಳಿದರು.
''ಇವರೆಲ್ಲ ಸತ್ಯ ಹರಿಶ್ಚಂದ್ರರಾ? ಇವರ ಸರ್ಕಾರ ದರೋಡೆಕೋರರ ಸರ್ಕಾರ. ಎಲ್ಲ ಇಲಾಖೆಗಳಲ್ಲೂ ಅಕ್ರಮ ಮಾಡುತ್ತಿದ್ದಾರೆ. ಕೋವಿಡ್ ಕಾಲದಲ್ಲಿ ಖರೀದಿ ಆಗಿರುವುದೇ 7 ಸಾವಿರ ಕೋಟಿ ರೂ. ಮೌಲ್ಯದಷ್ಟು ವಸ್ತುಗಳು. ಅಕ್ರಮವೂ ಅಷ್ಟೇ ಆಗಿದೆ ಎಂದರೆ ನಂಬಲು ಸಾಧ್ಯವೇ? ಊಹಾಪೋಹಗಳಿಗೆ ಉತ್ತರ ಕೊಡುವುದು ಬೇಡ. ಅವರು ತಮ್ಮ ರಾಜಕೀಯ ದಿವಾಳಿತನ ತೋರಿಸಿದ್ದಾರೆ. ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಅಂತ ಶಿಫಾರಸು ಮಾಡಿದ್ದಾರಂತೆ. ಮಾಡಲಿ, ನಾನು ಎದುರಿಸ್ತೇನೆ. ಕೋವಿಡ್ ವಿಚಾರದಲ್ಲಿ ಸರ್ಕಾರದ ತನಿಖೆಯನ್ನು ಸ್ವಾಗತಿಸುತ್ತೇನೆ'' ಎಂದರು.
''ನ್ಯಾ.ಕುನ್ಹಾ ಅವರು ಅಂತಿಮ ವರದಿಯನ್ನೂ ಕೊಡಲಿ. ಇನ್ನೂ 6 ತಿಂಗಳು ಕಾಲಾವಕಾಶ ತಗೊಂಡಿದ್ದಾರಂತೆ. ಈ ಸವಾಲನ್ನು ನಾನು ಸ್ವೀಕಾರ ಮಾಡ್ತೇನೆ, ಎದುರಿಸ್ತೇನೆ. ಅದನ್ನು ಎಂಜಾಯ್ ಮಾಡುತ್ತೇನೆ. ಹೊಸ ಪರಂಪರೆ ಶುರು ಮಾಡಿದ್ದಾರೆ, ಮಾಡಲಿ'' ಎಂದು ಡಾ.ಕೆ.ಸುಧಾಕರ್ ಸರ್ಕಾರದ ನಿರ್ಧಾರವನ್ನು ಟೀಕಿಸಿದರು.