ಚಿತ್ರದುರ್ಗ: ಸಮಾಜದಲ್ಲಿ ಇಂಥ ಅಹಿತಕರ ಘಟನೆಗಳು ನಡೆಯಬಾರದು. ಯಾರೂ ಕೂಡ ಕಾನೂನು ಕೈಗೆತ್ತಿಕೊಳ್ಳಬಾರದು. ಸರ್ಕಾರದ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವುದನ್ನು ತಿಳಿದು ಮನಸ್ಸಿಗೆ ಆಘಾತವಾಗಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.
ರೇಣುಕಾಸ್ವಾಮಿ ನಿವಾಸಕ್ಕೆ ಇಂದು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂಥ ಘಟನೆ ಪದೇ ಪದೆ ನಡೆಯುತ್ತಿದೆ. ಸರ್ಕಾರ, ಕಾನೂನಿನ ಭಯ ಇಲ್ಲವಾಗಿದೆ. ಸರ್ಕಾರ ಇಂಥ ಪ್ರಕರಣದಲ್ಲಿ ವಿಶೇಷ ತನಿಖೆ ಮಾಡಿಸಬೇಕು. ಪ್ರಕರಣದಲ್ಲಿ ಎಷ್ಟೇ ದೊಡ್ಡವರಿದ್ದರೂ ಶಿಕ್ಷೆಯಾಗಬೇಕು. ತನಿಖೆಯಿಂದ ಸತ್ಯ ಹೊರಗೆ ಬರಬೇಕಿದೆ. ರೇಣುಕಾಸ್ವಾಮಿ ತಪ್ಪು ಮಾಡಿದ್ದರೆ ದೂರು ಕೊಡಬಹುದಿತ್ತು. ಈ ಕೊಲೆಯನ್ನು ಯಾರೂ ಕೂಡ ಸಹಿಸುವುದಿಲ್ಲ. ಮೃತರ ಕುಟುಂಬಕ್ಕೆ ಸರ್ಕಾರ ನ್ಯಾಯ ಒದಗಿಸಬೇಕಿದೆ. ಮೃತನ ಪತ್ನಿಗೆ ಸರ್ಕಾರಿ ಕೆಲಸ ನೀಡಬೇಕೆಂಬ ಒತ್ತಾಯವಿದೆ. ಸರ್ಕಾರ ಕೆಲಸ ಕೊಟ್ಟು ಕಾಪಾಡಬೇಕಿದೆ ಎಂದು ಮನವಿ ಮಾಡಿದರು.
ರೇಣುಕಾಸ್ವಾಮಿ ನಿವಾಸಕ್ಕೆ ಬಸವಪ್ರಭು ಸ್ವಾಮೀಜಿ ಭೇಟಿ: ರೇಣುಕಾಸ್ವಾಮಿ ನಿವಾಸಕ್ಕೆ ಮುರುಘಾ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬಳಿಕ ಮಾತನಾಡಿದ ಅವರು, ಪ್ರಕರಣದ ತನಿಖೆ ನಡೆಯುತ್ತಿದೆ. ಇದರ ಬಗ್ಗೆ ನಾನೇನೂ ಮಾತನಾಡುವುದಿಲ್ಲ. ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದೇನೆ. ತಪ್ಪು ಯಾರೇ ಮಾಡಿದರೂ ತಪ್ಪೇ ಎಂದರು.
ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಶರಣಾಗತಿಯಾದ ಆರೋಪಿಗಳಿಗೆ ಹಣ ನೀಡಿದ್ದನಂತೆ ದರ್ಶನ್ ಸಹಚರ - Renukaswamy murder case