ಬೆಳಗಾವಿ: ನವಜಾತ ಶಿಶುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಅತ್ತೆ ಜೊತೆಗೆ ಬಾಣಂತಿ ಪರಾರಿಯಾಗಿದ್ದಾರೆ. ಇದರ ಪರಿಣಾಮ ಶಿಶು ಮೃತಪಟ್ಟಿದೆ. ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಬಾಣಂತಿ ಮಗು ಬಿಟ್ಟು ಆಸ್ಪತ್ರೆಯಿಂದ ತೆರಳುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮನೆಯಲ್ಲಿ ಕಾಲು ಜಾರಿ ಬಿದ್ದ ಗರ್ಭಿಣಿ, ಬೈಲಹೊಂಗಲ ಪಟ್ಟಣದ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ನೋವು ಕಾಣಿಸಿಕೊಂಡ ಕಾರಣಕ್ಕೆ ಬೆಳಗಾವಿ ಬಿಮ್ಸ್‌ಗೆ ಬೈಲಹೊಂಗಲ ವೈದ್ಯರು ಶಿಫಾರಸು ಮಾಡಿದ್ದರು.
ಡಿಸೆಂಬರ್ 8ರಂದು ಮಧ್ಯಾಹ್ನ 12ಕ್ಕೆ ಅತ್ತೆ ಜೊತೆಗೆ ಬಂದು ಬಿಮ್ಸ್ ಆಸ್ಪತ್ರೆಯ ಹೆರಿಗೆ ವಾರ್ಡ್ನಲ್ಲಿ ದಾಖಲಾಗಿದ್ದರು. ಅದೇ ದಿನ ರಾತ್ರಿ 9ಕ್ಕೆ ಅವಧಿಪೂರ್ವ ಹೆರಿಗೆಯಾಗಿದೆ. ಮಗು 735 ಗ್ರಾಂ ತೂಕವಿತ್ತು. ತೂಕ ಕಡಿಮೆ ಆಗಿರುವ ಕಾರಣಕ್ಕೆ ಎನ್‌ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಶಿಶುವನ್ನು ಎನ್‌ಐಸಿಯುಗೆ ಶಿಫ್ಟ್ ಮಾಡಿದ ಬಳಿಕ ಆರೈಕೆ ಮಾಡಬೇಕಿದ್ದ ತಾಯಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ. ಉಸಿರಾಟದ ಸಮಸ್ಯೆ, ತೂಕ ಕಡಿಮೆ ಕಾರಣಕ್ಕೆ ವೆಂಟಿಲೇಟರ್‌ನಲ್ಲಿಟ್ಟು ಮಗುವಿಗೆ ಚಿಕಿತ್ಸೆ ಮುಂದುವರಿದಿತ್ತು. ಆದರೆ, ಮಗು ಇಂದು ಸಾವನ್ನಪ್ಪಿದೆ.
''ಆಸ್ಪತ್ರೆಗೆ ದಾಖಲಾಗುವ ವೇಳೆ ಗರ್ಭಿಣಿ ಸರಿಯಾದ ವಿಳಾಸ ನೀಡಿರಲಿಲ್ಲ. ಮಗು ಬಿಟ್ಟು ಪರಾರಿಯಾದ ಅವರ ವಿರುದ್ಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ'' ಎಂದು ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: ಕಾರವಾರ: ಆಟವಾಡುತ್ತಿದ್ದಾಗ ಮೈಮೇಲೆ ಗೇಟ್ ಬಿದ್ದು ಮಗು ಸಾವು - CHILD DIED AFTER GATE FELL DOWN