ಬಾಗಲಕೋಟೆ: ಸಿಂಟೆಕ್ಸ್ನಲ್ಲಿ ಪೆಟ್ರೋಲ್ ಹಾಕಿ ಬಳಿಕ ಗುಡಿಸಲಿಗೆ ಸುರಿದು ಬೆಂಕಿ ಹಚ್ಚಿದ ಪರಿಣಾಮ ತಾಯಿ - ಮಗಳು ಸಜೀವ ದಹನವಾಗಿರುವ ಹೃದಯ ವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬೆಳಗಲಿ ಗ್ರಾಮದಲ್ಲಿ ನಡೆದಿದೆ. ಜೈಬಾನ ಪೆಂಡಾರಿ (60) ಮತ್ತು ಶಬಾನ ಪೆಂಡಾರಿ (20) ಸಜೀವ ದಹನಗೊಂಡ ತಾಯಿ - ಮಗಳು.
ಅವಘಡದಲ್ಲಿ ಸಿದ್ದಿಕ್ಕಿ ಎಂಬಾತ ಬಚಾವಾಗಿದ್ದು, ದಸ್ತಗಿರಿಸಾಬ್ ಪೆಂಡಾರಿ ಎಂಬಾತ ಗಾಯಗೊಂಡಿದ್ದಾನೆ. ಚಿಕಿತ್ಸೆಗಾಗಿ ಮಹಾಲಿಂಗಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾತ್ರಿ ವೇಳೆ ದಸ್ತಗಿರಸಾಬ್ ಪೆಂಡಾರಿ ಅವರ ಕುಟುಂಬಸ್ಥರು ತೋಟದ ಶೆಡ್ನಲ್ಲಿ ಮಲಗಿದ್ದಾಗ ಯಾರೋ ದುಷ್ಕರ್ಮಿಗಳು ಸಿಂಟೆಕ್ಸ್ನಲ್ಲಿ ಪೆಟ್ರೋಲ್ ತುಂಬಿ ಅದನ್ನು ಎರಡು ಹೆಚ್ಪಿ ಮೋಟಾರ್ ಸಹಾಯದಿಂದ ಶೆಡ್ಡಿಗೆ ಸಿಂಪಡಿಸಿ ಬೆಂಕಿ ಹಚ್ಚಿದ್ದಾರೆ. ಬೆಂಕಿ ಹಚ್ಚುವ ಮುನ್ನ ಶೆಡ್ಡಿನ ಬಾಗಿಲನ್ನು ಲಾಕ್ ಮಾಡಿದ್ದಾರೆ.
ಪೆಟ್ರೋಲ್ ವಾಸನೆ ಬರುತ್ತಿದ್ದಂತೆ ಸಿದ್ದಿಕ್ಕಿ ಹೊರ ಬಂದು ಪ್ರಾಣಾಪಾಯದಿಂದ ಬಚಾವ್ ಆದರೆ, ತಾಯಿ - ಮಗಳು ಸಜೀವ ದಹನವಾಗಿದ್ದಾರೆ. ಸ್ಥಳಕ್ಕೆ ಮಹಾಲಿಂಗಪುರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಎಸ್ಪಿ ಅಮರಮಾಥರೆಡ್ಡಿ ಭೇಟಿ ನೀಡಿ ಘಟನೆ ವಿವರಣೆ ಪಡೆದುಕೊಂಡಿದ್ದಾರೆ. ಶ್ವಾನದಳದ ನೆರವು ಪಡೆದು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಲಾಗಿದೆ.
ಇದನ್ನೂ ಓದಿ: ಶಿವಮೊಗ್ಗ: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ, 8ಕ್ಕೂ ಹೆಚ್ಚು ಅಂಗಡಿಗಳಿಗೆ ಹಾನಿ - Fire Accident